ಕನ್ನಡಪ್ರಭ ವಾರ್ತೆ ಜಯಪುರ

ಭಾರತೀಯ ಪರಂಪರೆಯಲ್ಲಿ ಆಧ್ಯಾತ್ಮಿಕತೆಗೆ ವಿಶೇಷ ಸ್ಥಾನವಿದ್ದು, ಪರಾರ್ಥ ಪೂಜೆಗೆ ಕೊಡುವ ಹೆಚ್ಚಿನ ಪ್ರಾಶಸ್ತ್ಯವನ್ನು ಆತ್ಮಾರ್ಥ ಪೂಜೆಗೂ ಅಷ್ಟೇ ಪ್ರಾಶಸ್ತ್ಯ ಕೊಡಬೇಕು ಎಂದು ತುಮಕೂರು ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಮೈಸೂರು ತಾಲೂಕಿನ ಜಯಪುರ ಹೋಬಳಿಯ ಮಂಡನಹಳ್ಳಿಯಲ್ಲಿ ನಿರ್ಮಿಸಿರುವ ಜೋಡಿಲಿಂಗ ಮಹದೇಶ್ವರ ಸ್ವಾಮಿ ದೇವಾಲಯ ಉದ್ಘಾಟನೆಯ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದಾದ್ಯಂತ ದೇವಾಲಯ ಸಂಖ್ಯೆ ಹೆಚ್ಚುತ್ತಲೇ ಇದೆ, ಆದರೆ ಸಂಸ್ಕಾರವಂತಿಕೆ ಕಡಿಮೆಯಾಗುತ್ತಿದೆ. ಯುವಕರಲ್ಲಿ ಸಂಸ್ಕಾರ ಮರೆಯಾಗುತ್ತಿದೆ.ಪರಮಾತ್ಮನಿಗೆ ಭಕ್ತಿಯ ರೂಪದಲ್ಲಿ ನೈವಿದ್ಯೆ ಸಲ್ಲಿಸಬೇಕು. ಬಸವಣ್ಣನವರು ಹಾಕಿಕೊಟ್ಟ ಕಾಯಕವೇ ಕೈಲಾಸ ಮಾರ್ಗದಲ್ಲಿ ನಡೆದು,ಕಷ್ಟಪಟ್ಟು ದುಡಿಯಬೇಕೆ ವಿನಃ ಉಚಿತವಾಗಿ ಸಿಗುವುದಕ್ಕೆ ಆಸೆ ಪಡಬಾರದು. ಹಣೆಯ ಬೆವರಿನ ಹೆಚ್ಚಿನ ನಂಬಿಕೆ ಇರಿಸಬೇಕು. ದೇವಾಲಯ ನಿರ್ಮಿಸುವುದೇ ನಾವೆಲ್ಲರೂ ಒಂದೇ ಎಂಬ ಜಾತ್ಯಾತೀತ ಭಾವನೆ ಹೊಂದುವುದಾಗಿದೆ. ದೇವಾಲಯಗಳು ಧಾರ್ಮಿಕ ಶ್ರದ್ಧಾಭಕ್ತಿಯ ಕೇಂದ್ರಗಳಾಗಿವೆ. ಅವುಗಳ ಪಾವಿತ್ರ್ಯತೆ ಉಳಿಸುವ ಕೆಲಸವಾಗಬೇಕು ಎಂದರು.

ಜೋಡಿಲಿಂಗ ಮಹದೇಶ್ವರ ಸ್ವಾಮಿ ಲಿಂಗಗಳು ಗೋಚರ:


ಮೈಮುಲ್ ಮಾಜಿ ಅಧ್ಯಕ್ಷರಾದ ಮಾವಿನಹಳ್ಳಿ ಎಸ್.ಸಿದ್ದೇಗೌಡರವರು ಮಾತನಾಡಿ, 1662ನೇ ಇಸವಿಯಲ್ಲಿ ಮಂಡನಹಳ್ಳಿ ಗ್ರಾಮದಲ್ಲಿ ಜೋಡಿಲಿಂಗ ಮಹದೇಶ್ವರ ಸ್ವಾಮಿ ಲಿಂಗಗಳು ಗೋಚರವಾಗಿ ಹಿಂದೆ ಗ್ರಾಮಸ್ಥರು ಚಿಕ್ಕದಾಗಿ ಗುಡಿ ಕಟ್ಟಿ ಪೂಜಿಸುತ್ತಿದ್ದರು. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಜಾತ್ರೆಯಲ್ಲಿ ಕೊಂಡೋತ್ಸವ ನಡೆಯುವುದು ವಾಡಿಕೆ ಎಂದರು.

ಜಿಟಿಡಿಯೊಂದಿಗೆ ಮನಸ್ತಾಪ:

ಈ ದೇವಾಲಯ ನಿರ್ಮಾಣ ವಿಚಾರವಾಗಿ ನನಗೂ ಶಾಸಕ ಜಿ.ಟಿ ದೇವೇಗೌಡರಿಗೆ ಇದೆ ವಿಚಾರವಾಗಿ ಮನಸ್ತಾಪ ಉಂಟಾದರೂ ಸಹ ನನಗೆ ಮಂಡನಹಳ್ಳಿ ಗ್ರಾಮ ಕಂಡರೆ ವಿಶೇಷ ಪ್ರೀತಿ ಕಾರಣ, ಇಲ್ಲಿನ ಜನರ ಒಗ್ಗಟ್ಟಿನಿಂದ ಕೋಟ್ಯಂತರ ರು. ವೆಚ್ಚದಲ್ಲಿ ದೇವಸ್ಥಾನ ಕಟ್ಟಿಕೊಡಲು ಸಾಧ್ಯವಾಗಿದೆ. ನನ್ನ ಮನಸ್ಸು ಪೂರ್ತಿಯಾಗಿ ಈ ದೇವಾಲಯಕ್ಕೆ ಹೆಚ್ಚಿನದಾಗಿ ಸೇವೆ ಮಾಡುವುದೇ ನನ್ನಾಸೆ. ಈ ನಾಡಿನ ಲಿಂಗಾಯಿತ ಮಠಾಧೀಶರು ಮನಸ್ಸು ಮಾಡಿದರೆ ಸರ್ಕಾರಗಳನ್ನೇ ಅಲುಗಾಡಿಸುವಷ್ಟು ಶಕ್ತಿ ಹೊಂದಿದ್ದಾರೆ. ತಮಗಿಷ್ಟವಾದವರಿಗೆ ಅಧಿಕಾರ ನೀಡುವ ಶಕ್ತಿಯನ್ನು ಹೊಂದಿದ್ದಾರೆ. ಮಠಾಧೀಶರು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದು, ಪೂಜ್ಯ ಸಂತರ ಭಾವನೆಗಳಿಗೆ ಹೆಚ್ಚಿನ ಬೆಲೆ ಕೊಡಬೇಕು.ಧಾರ್ಮಿಕ ಭಾವನೆಗಳ ಜೊತೆ ರಾಜಕೀಯ ಮಾಡಬಾರದು ಎಂದರು.

ಪುರ ಮಠದ ಚಂದ್ರಶೇಖರ ಮೂರ್ತಿ ಸ್ವಾಮೀಜಿಯವರು ಹಗಲು ರಾತ್ರಿ ಶ್ರಮಿಸಿ ನೂತನ ದೇವಾಲಯ ಉದ್ಘಾಟನೆಯಲ್ಲಿ ದಿವ್ಯ ನೇತೃತ್ವ ವಹಿಸಿ, ದೇವಾಲಯ ಉದ್ಘಾಟನೆ ಮತ್ತು ಧಾರ್ಮಿಕ ಸಭೆ ಯಶಸ್ವಿಯಾಗಿ ನೆರವೇರಲು ಕಾರಣಕರ್ತರಾಗಿದ್ದಾರೆ ಎಂದರು.

ಷಟ್ಪಲ ಬ್ರಹ್ಮಶ್ರೀ ಸ್ವಾಮೀಜಿ ಮಾತನಾಡಿದರು. ಬರಡನಪುರ ಮಹಾಂತೇಶ್ವರ ಮಠದ ಪರಶಿವಮೂರ್ತಿ ಸ್ವಾಮಿಜಿ, ಕುಂದೂರು ಮಠದ ಶರತ್ ಚಂದ್ರ ಸ್ವಾಮೀಜಿ ಸೇರಿ ಹರಗೂರು ಚರಮೂರ್ತಿಗಳು ಧಾರ್ಮಿಕ ಪ್ರವಚನ ನೀಡಿದರು.

ಸೋಮವಾರ ಮುಂಜಾನೆ ಹುಲಿವಾಹನೋತ್ಸವ ಮೆರವಣಿಗೆ ನಡೆಯಿತು.ಭಕ್ತರು ಈಡುಗಾಯಿ ಒಡೆದು ಭಕ್ತಿ ಭಾವ ಮೆರೆದರು.ಹಾಗೂ ಸೋಮವಾರ ಮುಂಜಾನೆ ದೇವಾಲಯ ಗೋಪುರಕ್ಕೆ ಕಳಸ ಪ್ರತಿಷ್ಠಾಪನೆ ಮಾಡಲಾಯಿತು.ಮಹಾ ಮಂಗಳಾರತಿ ನೆರವೇರಿಸಲಾಯಿತು. ಭಕ್ತರು ನಂದಿಧ್ವಜ ಕಂಬ ಒತ್ತು ಕುಣಿದರು.

ಸಿದ್ದೇಗೌಡರಿಗೆ ಸನ್ಮಾನ:

ಧಾರ್ಮಿಕ ಕಾರ್ಯಕ್ರಮದಲ್ಲಿ 2.25 ಕೋಟಿ ರು. ವೆಚ್ಚದಲ್ಲಿ ಜೋಡಿಲಿಂಗ ಮಹದೇಶ್ವರ ದೇವಾಲಯ ನಿರ್ಮಿಸಿಕೊಟ್ಟ ಮಾವಿನಹಳ್ಳಿ ಎಸ್.ಸಿದ್ದೇಗೌಡರು ಮತ್ತು ಅವರ ಪತ್ನಿ ಕಮಲಮ್ಮ, ಪುತ್ರರಾದ ಸಂದೀಪ್ ಗೌಡರನ್ನು ಸ್ವಾಮೀಜಿಯವರು ಮತ್ತು ಗ್ರಾಮಸ್ಥರು ಫಲಪುಷ್ಪ ತಾಂಬೂಲದ ಜೊತೆಗೆ ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಧಾರ್ಮಿಕ ಕಾರ್ಯಕ್ರಮದಲ್ಲಿ ಪುರ ಮಠದ ಚಂದ್ರಶೇಖರ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ,ಮಹಾಂತಸ್ವಾಮಿಜಿ, ಗುರುಶಾಂತ ಸ್ವಾಮೀಜಿ, ಮಹದೇವಸ್ವಾಮಿಜಿ, ಸಾಂಬಶಿವ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಮಹೇಶ್ವರ, ಸ್ವಾಮೀಜಿ, ತೋಂಟದಾರ್ಯ ಸ್ವಾಮೀಜಿ, ಗಣೇಶ ಮೂರ್ತಿ ಸ್ವಾಮೀಜಿ, ನಾಗೇಂದ್ರ ಆರಾಧ್ಯ, ಎಚ್.ಡಿ. ಕೋಟೆ ಎಚ್.ಆರ್. ವೆಂಕಟೇಶ್ ಪ್ರಸಾದ್ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.