ಸ್ಥಿರಾಸ್ತಿ ಖರೀದಿ, ಮಾರಾಟ ದಸ್ತಾವೇಜಿನ ನೋಂದಣಿಗಾಗಿ ನಿತ್ಯವೂ ನೂರಾರು ಜನರಿಂದ ತುಂಬಿ ತುಳುಕುತ್ತಿದ್ದ ಹಾವೇರಿಯ ಸಬ್‌ ರಜಿಸ್ಟ್ರಾರ್‌ ಕಚೇರಿ ಕಳೆದ ಕೆಲವು ದಿನಗಳಿಂದ ಬಣಗುಡುತ್ತಿದೆ. ಖಾಸಗಿ ಲೇಔಟ್‌ಗಳು ಎಲ್ಲೆಂದರಲ್ಲಿ ತಲೆಎತ್ತಿರುವುದು ಹಾಗೂ ಸ್ಥಿರಾಸ್ತಿ ಬೆಲೆ ಕೈಗೆಟುಕದಷ್ಟು ಏರಿಕೆಯಾಗಿರುವುದರಿಂದ ಜನರು ಆಸ್ತಿ ಖರೀದಿಗೆ ನಿರಾಸಕ್ತಿ ತೋರಿದ್ದಾರೆ.

ನಾರಾಯಣ ಹೆಗಡೆ

ಹಾವೇರಿ: ಸ್ಥಿರಾಸ್ತಿ ಖರೀದಿ, ಮಾರಾಟ ದಸ್ತಾವೇಜಿನ ನೋಂದಣಿಗಾಗಿ ನಿತ್ಯವೂ ನೂರಾರು ಜನರಿಂದ ತುಂಬಿ ತುಳುಕುತ್ತಿದ್ದ ಇಲ್ಲಿಯ ಸಬ್‌ ರಜಿಸ್ಟ್ರಾರ್‌ ಕಚೇರಿ ಕಳೆದ ಕೆಲವು ದಿನಗಳಿಂದ ಬಣಗುಡುತ್ತಿದೆ. ಖಾಸಗಿ ಲೇಔಟ್‌ಗಳು ಎಲ್ಲೆಂದರಲ್ಲಿ ತಲೆಎತ್ತಿರುವುದು ಹಾಗೂ ಸ್ಥಿರಾಸ್ತಿ ಬೆಲೆ ಕೈಗೆಟುಕದಷ್ಟು ಏರಿಕೆಯಾಗಿರುವುದರಿಂದ ಜನರು ಆಸ್ತಿ ಖರೀದಿಗೆ ನಿರಾಸಕ್ತಿ ತೋರಿದ್ದಾರೆ.

ಇಲ್ಲಿಯ ಮಿನಿ ವಿಧಾನಸೌಧದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿ ಜನರಿಂದ ಸದಾ ತುಂಬಿ ತುಳುಕುತ್ತಿತ್ತು. ಇರುವ ಸಿಬ್ಬಂದಿಗೆ ಕಚೇರಿ ಅವಧಿಯಲ್ಲಿ ಅತ್ತಿತ್ತ ಅಲ್ಲಾಡುವುದು ಕೂಡ ಕಷ್ಟ ಎಂಬ ವಾತಾವರಣವಿತ್ತು. ನಗರ ಹಾಗೂ ಗ್ರಾಮೀಣ ಭಾಗಗಳಿಂದ ಬೆಳಗ್ಗೆಯೇ ಬಂದು ಸರತಿಯಲ್ಲಿ ಜನರು ನಿಂತಿರುತ್ತಿದ್ದರು. ಒಂದು ಆಸ್ತಿ ಪರಭಾರೆ ಮಾಡುವ ವೇಳೆ ಸಂಬಂಧಪಟ್ಟ ಕುಟುಂಬದ ವಾರಸುದಾರರೆಲ್ಲ ಹಾಜರಿದ್ದು ಸಹಿ ಕೊಡಲು ಬಂದು ನಿಲ್ಲುತ್ತಿದ್ದರು. ಸೈಟ್‌ ಖರೀದಿ, ಮುದ್ರಾಂಕ ಶುಲ್ಕ ಕಟ್ಟುವುದು, ಋಣಭಾರ, ಅಡಮಾನ, ಗುತ್ತಿಗೆ ಒಪ್ಪಂದ, ವಿವಾಹ ನೋಂದಣಿ ಸೇರಿದಂತೆ ನಿತ್ಯವೂ ನೂರಾರು ದಸ್ತಾವೇಜುಗಳ ನೋಂದಣಿಯಾಗುತ್ತಿತ್ತು. ಆದರೆ, ಕಳೆದ ಒಂದು ತಿಂಗಳಿಂದ ಈಚೆಗೆ ಉಪನೋಂದಣಾಧಿಕಾರಿಗಳ ಕಚೇರಿ ಬಿಕೋ ಎನ್ನುವಂತಾಗಿದೆ.

ಸ್ಥಿರಾಸ್ತಿ ಬೆಲೆಯಲ್ಲಿ ಭಾರಿ ಏರಿಕೆ: ಕೃಷ್ಣ ಬೈರೇಗೌಡ ಅವರು ಕಂದಾಯ ಸಚಿವರಾದ ಮೇಲೆ ತಂದ ಸುಧಾರಣಾ ಕ್ರಮಗಳಿಂದ ಸಬ್‌ ರಜಿಸ್ಟ್ರಾರ್ ಕಚೇರಿಯಲ್ಲಿ ಪಾರದರ್ಶಕತೆ ಕಂಡುಬರುತ್ತಿದೆ. ಅಲ್ಲದೇ ನೋಂದಣಿ ಪ್ರಕ್ರಿಯೆಯಲ್ಲಿ ಆಗಿರುವ ಸರಳೀಕರಣ ಹಾಗೂ ದಾಖಲೆಗಳ ಡಿಜಿಟಲೀಕರಣದಿಂದ ಸಬ್‌ ರಜಿಸ್ಟ್ರಾರ್‌ ಕಚೇರಿ ಕಾರ್ಯಗಳು ಸುಲಭಗೊಂಡಿರುವುದು ಒಂದು ಕಾರಣವಾದರೆ, ಸ್ಥಿರಾಸ್ತಿ ಬೆಲೆಯಲ್ಲಿ ಭಾರಿ ಏರಿಕೆ ಆಗಿರುವುದು ಮುಖ್ಯ ಕಾರಣ ಎನ್ನಲಾಗುತ್ತಿದೆ. ನಗರದ ಸುತ್ತಮುತ್ತಲಿನ ಕೃಷಿ ಭೂಮಿ ಕೃಷಿಯೇತರ ಜಮೀನಾಗಿ ಪರಿವರ್ತನೆಗೊಂಡು ಎಲ್ಲೆಂದರಲ್ಲಿ ಲೇಔಟ್‌ಗಳು ತಲೆ ಎತ್ತಿವೆ. ಪ್ರತಿಯೊಂದು ಬಡಾವಣೆಗಳಲ್ಲಿ ನೂರಾರು ಸೈಟ್‌ಗಳು ಮಾರಾಟಕ್ಕಿವೆ. ಬೆಂಗಳೂರು, ಹುಬ್ಬಳ್ಳಿ ಮುಂತಾದ ಮಹಾನಗರಗಳ ದುಬಾರಿ ದರವೇ ಹಾವೇರಿಗೂ ಕಾಲಿಟ್ಟಿವೆ. ಮಾಲೀಕರು ಕಡಿಮೆ ಬೆಲೆಗೆ ಆಸ್ತಿ ಮಾರಾಟಕ್ಕೆ ಮನಸ್ಸು ಮಾಡಿದರೂ ಮಧ್ಯವರ್ತಿಗಳು, ಏಜೆಂಟರು ದರ ಇಳಿಸಲು ಅವಕಾಶ ನೀಡುತ್ತಿಲ್ಲ. ಯಾವ ಮೂಲಸೌಕರ್ಯ ಇಲ್ಲದಿರುವ ಲೇಔಟ್‌ಗಳಲ್ಲಿ ಕೂಡ 30-40 ಸೈಟ್‌ ಬೆಲೆ ₹20ರಿಂದ ₹30 ಲಕ್ಷ ದಾಟಿದೆ. ಇನ್ನು ಸುಧಾರಿತ ಪ್ರದೇಶದಲ್ಲಿ ಈ ಬೆಲೆ ದುಪ್ಪಟ್ಟಾಗಿದೆ. ಜನಸಾಮಾನ್ಯರು ಸೈಟ್‌ ಖರೀದಿಸುವುದೇ ಕಷ್ಟಕರವಾಗಿದೆ. ಇದರಿಂದ ಕಳೆದ ಕೆಲವು ದಿನಗಳಿಂದ ಆಸ್ತಿ ಮಾರಾಟ, ಖರೀದಿ ವ್ಯವಹಾರ ಬಹುತೇಕ ನಿಂತ ನೀರಿನಂತಾಗಿದೆ.

ಜನರ ನಿರಾಸಕ್ತಿ: ಎಂಜಿನಿಯರಿಂಗ್‌ ಕಾಲೇಜು, ಮೆಡಿಕಲ್‌ ಕಾಲೇಜು ಬಂದ ಮೇಲಂತೂ ನಗರದಲ್ಲಿನ ಸೈಟ್‌ಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ರಸ್ತೆ, ಚರಂಡಿ, ಬೀದಿ ದೀಪ, ನೀರಿನ ವ್ಯವಸ್ಥೆ ಕೂಡ ಕಲ್ಪಿಸದೇ ಸೈಟ್‌ ಭಾಗ ಮಾಡಿ ಮಾರಾಟ ಮಾಡಲಾಗುತ್ತಿದೆ. ಮೆಡಿಕಲ್‌ ಕಾಲೇಜು ಸುತ್ತಮುತ್ತ, ಹಾವೇರಿ- ದೇವಗಿರಿ ರಸ್ತೆಯ ಇಕ್ಕೆಲಗಳಲ್ಲಿನ ಕೃಷಿ ಜಮೀನುಗಳೆಲ್ಲ ಸೈಟ್‌ಗಳಾಗಿವೆ. ಲೇಔಟ್‌ಗಳು ಹೆಚ್ಚಿದರೂ ಸೈಟ್‌ ದರ ಮಾತ್ರ ಇಳಿಕೆಯಾಗುತ್ತಿಲ್ಲ. ಕೆಲವು ಶ್ರೀಮಂತರು ಕೇಳಿದಷ್ಟು ಹಣ ಕೊಟ್ಟು ಸೈಟ್‌ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇವೆಲ್ಲ ಕಾರಣದಿಂದ ಕೊರೋನಾ ಪೂರ್ವ ಮತ್ತು ನಂತರದ ದಿನಗಳಿಗೆ ಹೋಲಿಸಿದರೆ ಕೃಷಿ, ಕೃಷಿಯೇತರ ಎರಡೂ ಸ್ಥಿರಾಸ್ತಿಗಳ ಬೆಲೆ ಹಲವು ಪಟ್ಟುಗಳಷ್ಟು ಹೆಚ್ಚಾಗಿದೆ. ಮಧ್ಯಮ, ಕೆಳ ಮಧ್ಯಮ ವರ್ಗಗಳಿಂದ ಇಷ್ಟು ದುಬಾರಿ ಬೆಲೆ ನೀಡಿ ಆಸ್ತಿ ಖರೀದಿಸುವುದು ಸಾಧ್ಯವಿಲ್ಲದ್ದರಿಂದ ಸೈಟ್‌ಗಳು ಮಾರಾಟವಾಗದೇ ಉಳಿಯುತ್ತಿವೆ. ಇದನ್ನೇ ನಂಬಿ ಬದುಕುತ್ತಿರುವ ರಿಯಲ್‌ ಎಸ್ಟೇಟ್‌ ಏಜೆಂಟರು ಇದರಿಂದ ಕೆಲವು ದಿನಗಳಿಂದ ಖಾಲಿ ಕೈಯಲ್ಲಿ ಕೂರುತ್ತಿದ್ದಾರೆ. ಸರ್ಕಾರಕ್ಕೆ ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕದ ರೂಪದಲ್ಲಿ ಸೇರಬೇಕಾದ ಆದಾಯದಲ್ಲೂ ಇಳಿಕೆಯಾಗಿದೆ.

ಇದರೊಂದಿಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಸ್ತಿ ವಿಳಂಬವಾಗುತ್ತಿದೆ. ಜತೆಗೆ, ಆಸ್ತಿ ವಿಭಜನೆ ಸಂದರ್ಭದಲ್ಲಿ ಪ್ರತ್ಯೇಕ ಡಿಜಿಟಲ್ ಉತಾರ್‌ ಸೃಷ್ಟಿಯಾದ ಬಳಿಕವೇ ಸಬ್‌ ರಜಿಸ್ಟ್ರಾರ್‌ ಕಚೇರಿಯಲ್ಲಿ ಖರೀದಿ ನೋಂದಣಿ ಆಗಬೇಕಿದೆ. ನಗರಸಭೆಯಲ್ಲಿ ಈ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ನೋಂದಣಾಧಿಕಾರಿ ಕಚೇರಿಗೆ ಬರುವವರು ಕೂಡ ಕಡಿಮೆಯಾಗಿದ್ದಾರೆ.

ಕಡಿಮೆಯಾದ ನೋಂದಣಿ ಸಂಖ್ಯೆ: ಕಳೆದ ಏಪ್ರಿಲ್‌ನಿಂದಲೂ ನಿಧಾನವಾಗಿ ಸಬ್‌ ರಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಣಿ ಸಂಖ್ಯೆ ಇಳಿಯುತ್ತಲೇ ಸಾಗಿದೆ. ಪ್ರತಿ ತಿಂಗಳು ಸರಾಸರಿ 2 ಸಾವಿರದಷ್ಟು ಆಗುತ್ತಿದ್ದ ನೋಂದಣಿ ಈಗ ಅದರ ಅರ್ಧದಷ್ಟಾಗುತ್ತಿದೆ. ಏಪ್ರಿಲ್‌ನಲ್ಲಿ 1023 ದಸ್ತಾವೇಜು ನೋಂದಣಿಯಾಗಿದ್ದರೆ, ಅಕ್ಟೋಬರ್‌ನಲ್ಲಿ ಅದು 875ಕ್ಕೆ ಕುಸಿದಿದೆ. ಡಿಸೆಂಬರ್‌ನಲ್ಲಿ ಈ ವರೆಗೆ 469 ನೋಂದಣಿಯಾಗಿವೆ. ಹಾವೇರಿ ಸಬ್‌ ರಜಿಸ್ಟ್ರಾರ್ ಕಚೇರಿಯಲ್ಲಿ ಕಳೆದ ಏಪ್ರಿಲ್‌ನಿಂದ ನವೆಂಬರ್‌ ವರೆಗೆ ಮುದ್ರಾಂಕ ಮತ್ತು ನೋಂದಣಿ ಶುಲ್ಕವಾಗಿ ₹17. 21 ಕೋಟಿ ಸಂಗ್ರಹಿಸಲಾಗಿದೆ ಎಂದು ಉಪನೋಂದಣಾಧಿಕಾರಿ ಸಂಜೀವ ಕಪಲಿ ತಿಳಿಸಿದ್ದಾರೆ.

ಖಾಲಿ ಕೂರುವಂತಾಗಿದೆ: ರಿಯಲ್‌ ಎಸ್ಟೇಟ್‌ ವ್ಯವಹಾರ ಕುಸಿತಗೊಂಡಿದೆ. ಜನರ ಬಳಿ ಹಣ ಇಲ್ಲದಿರುವುದ ಒಂದು ಕಡೆಯಾದರೆ, ಸೈಟ್‌, ಮನೆ ಸೇರಿದಂತೆ ಸ್ಥಿರಾಸ್ತಿ ದರ ಉತ್ತುಂಗಕ್ಕೆ ತಲುಪಿದೆ. ಬೆಂಗಳೂರು, ಹುಬ್ಬಳ್ಳಿ ರೇಟ್‌ ಹಾವೇರಿಯಲ್ಲೂ ಹೇಳುತ್ತಾರೆ. ಮಾರಾಟ ಮಾಡುವವರು ದರ ಇಳಿಸುತ್ತಿಲ್ಲ, ಖರೀದಿಸುವವರು ಇದರಿಂದ ಆಸಕ್ತಿ ತೋರುತ್ತಿಲ್ಲ. ಇದರಿಂದ ಇದನ್ನೇ ನಂಬಿಕೊಂಡಿರುವ ನಮ್ಮಂಥ ಅನೇಕರು ಕೆಲಸವಿಲ್ಲದೇ ಖಾಲಿ ಕೂರುವಂತಾಗಿದೆ ಎಂದು ರಿಯಲ್‌ ಎಸ್ಟೇಟ್‌ ಏಜೆಂಟ ಸತೀಶ ಮಡಿವಾಳರ ಹೇಳಿದರು.