ಧಾರವಾಡ:
ನಿತ್ಯ ಶಿಕ್ಷಕರು ಆನ್‌ಲೈನ್ ಬೋಧಕೇತರ ಕಾರ್ಯ ಮಾಡುವ ವ್ಯವಸ್ಥೆ ನಿರ್ಮಾಣವಾಗಿದ್ದು ಇದರಿಂದ ಮುಕ್ತಗೊಳಿಸಿ ಬೋಧನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಅಖಿಲ ಭಾರತ ಶಿಕ್ಷಕರ ಫೆಡರೇಶನ್ ಅಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.ಇಲ್ಲಿಯ ಸರ್ಕಾರಿ ನೌಕರರ ಭವನದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಹರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಬೋಧನೆ ಬಿಟ್ಟು ಆನ್‌ಲೈನ್ ಕೆಲಸ ಮಾಡುತ್ತಿದ್ದರೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಯತ್ತ ಗಮನ ಹರಿಸಲು ಆಗುವುದಿಲ್ಲ. ಅದಕ್ಕಾಗಿ ಆನ್‌ಲೈನ್ ಕಾರ್ಯಕ್ಕೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.ಇಂದು ಶಿಕ್ಷಕರು ಪ್ರತಿಯೊಂದು ಮಾಹಿತಿಯನ್ನು ಆನ್‌ಲೈನ್ ತಂತ್ರಾಂಶಗಳ ಮೂಲಕ ಒದಗಿಸುವುದು ಕಷ್ಟ ಸಾಧ್ಯ. ಹಲವು ಪ್ರದೇಶಗಳಲ್ಲಿ ನೆಟ್‌ವರ್ಕ ಸಮಸ್ಯೆ ಇರುವುದರಿಂದ ಸಮಯಕ್ಕೆ ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲ. ಹೀಗಾಗಿ ಪ್ರತಿ ಶಾಲೆಗೆ ಒಬ್ಬ ಕಂಪ್ಯೂಟರ್ ಸಿಬ್ಬಂದಿ ನೇಮಿಸಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.
ಶಿಕ್ಷಕರ ಸಂಘಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳು ಶಿಕ್ಷಕರ ಸೇವೆ ಮಾಡಲು ಕಂಕಣ ಬದ್ಧರಾಗಿ ಇರಬೇಕು. ತಾಲೂಕು ಮಟ್ಟದಲ್ಲಿ ಶಿಕ್ಷಕರಿಗೆ ನಿಗದಿತ ವೇಳೆಗೆ ಎಲ್ಲ ಸೌಲಭ್ಯ ದೊರಕಿಸಿಕೊಡಬೇಕು ಎಂದರು.ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲ್ಪಟ್ಟ ದಾನುನಗರ ಶಾಲೆಯನ್ನು ಮತ್ತೆ ಆರಂಭಿಸಿದ್ದಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ತಿಮ್ಮಾಪುರ ಅವರಿಗೆ ಇದೇ ಸಂದರ್ಭದಲ್ಲಿ ಅಭಿನಂದಿಸಿ, ನಗರದ ಉಳಿದ ಹೊಸ ಬಡಾವಣೆಗಳಲ್ಲಿ ಹೊಸದಾಗಿ ಶಾಲೆ ಆರಂಭಿಸಲು ಗುರಿಕಾರ ಮನವಿ ಮಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ತಿಮ್ಮಾಪುರ ಮಾತನಾಡಿದರು. ಶಿಕ್ಷಕರ ಸಂಘದ ರಾಜ್ಯ ಖಜಾಂಚಿ ರಾಜಶೇಖರ ಹೊನ್ನಪ್ಪನವರ, ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ಧನಗೌಡ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿ.ಎಫ್. ಚುಳಕಿ, ಉಪಾಧ್ಯಕ್ಷೆ ಶಾಂತಾ ಶೀಲವಂತ, ಪ್ರಧಾನ ಕಾರ್ಯದರ್ಶಿ ಅಜಿತ ದೇಸಾಯಿ, ಸಮನ್ವಯಾಧಿಕಾರಿ ಪ್ರವೀಣ ಕುಮಾರ ಗುಜ್ಜರ, ಗೌರವಾಧ್ಯಕ್ಷ ಆರ್.ಬಿ. ಲಿಂಗದಾಳ, ಖಜಾಂಚಿ ಶಂಕರ ಘಟ್ಟಿ, ಸಹ ಕಾರ್ಯದರ್ಶಿ ಉಮೇಶ ಕುರಬರ, ಧಾರವಾಡ ಶಹರ ಅಧ್ಯಕ್ಷ ಎಂ.ಆರ್. ಕಬ್ಬೇರ, ಪ್ರಧಾನ ಕಾರ್ಯದರ್ಶಿ ಜಿ.ಐ. ಬಡಿಗೇರ, ವೀಣಾ ಹೊಸಮನಿ, ಡಿ.ವಿ. ಸಜ್ಜನ, ಶೋಭಾ ಬಿಂಗೇರಿ, ಅಕ್ಬರ ಅಲಿ ಸೋಲಾಪುರ, ಆಯೂತ ಶೇಖ, ಎನ್.ಸಿ. ಪಾಟೀಲ, ಬಾಬಾಜಾನ ಸೈಯದ ಬೋಂಗಾಳೆ, ನಾಗಾವಿ, ಎನ್.ಎಸ್. ಕಮ್ಮಾರ, ಚಂದ್ರು ತಿಗಡಿ, ಫಿರೋಜ ಗುಡೇನಕಟ್ಟಿ ಸೇರಿದಂತೆ ಇತರರು ಇದ್ದರು.