ಧಾರವಾಡ:
ವರುಣನ ಕೃಪೆಗಾಗಿ ತಾಲೂಕಿನ ಅಮ್ಮಿನಬಾವಿಯಲ್ಲಿ ಶನಿವಾರ ಶಾಸ್ತ್ರೋಕ್ತವಾಗಿ ಕತ್ತೆಗಳ ಮದುವೆ ಮಾಡಲಾಯಿತು. ಇದಕ್ಕೆ ಗ್ರಾಮದ ಸಾವಿರಾರು ಜನರು ಸಾಕ್ಷಿಯಾದರು.ಮದುವೆಗಾಗಿ ಲಗ್ನ ಪತ್ರಿಕೆಯನ್ನೂ ಮುದ್ರಿಸಲಾಗಿತ್ತು. ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ವೈದಿಕರಾದ ಸೋಮಲಿಂಗಶಾಸ್ತ್ರಿ ಗುಡ್ಡದಮಠ ಹಾಗೂ ಜ್ಯೋತಿಷಿ ಎಸ್.ಎಂ. ಪ್ರಶಾಂತ ರಾಜಗುರು ಅವರು ಮಂತ್ರಘೋಷಗಳ ನಡುವೆ ಅಭಿಜಿತ್ ಲಗ್ನದ ಶುಭಮುಹೂರ್ತದಲ್ಲಿ ವಸುಂಧರಾ ಹೆಣ್ಣು ಕತ್ತೆಗೆ ಮಾಂಗಲ್ಯ ಧಾರಣ ಮಾಡಲಾಯಿತು. ಮದುವೆಗೆ ಸಾಕ್ಷಿಯಾಗಿದ್ದ ಅಧಿಕ ಸಂಖ್ಯೆಯ ಗ್ರಾಮಸ್ಥರು ಅಕ್ಷತಾರೋಪಣ ಮಾಡಿ ‘ಹರಹರ ಮಹಾದೇವ’ ಎಂದು ಜಯಘೋಷಿಸಿದರು.
ವಿಶಾಲ ಮದುವೆ ಮಂಟಪದಲ್ಲಿ ವಧು-ವರ ಕಡೆಯವರ ಸಂಬಂಧಿಗಳಿರಲಿಲ್ಲ. ಜತೆಗೆ ತಮ್ಮ ಮಗಳನ್ನು ಕನ್ಯಾದಾನ ಮಾಡಿ ಧಾರೆ ಎರೆಯಲು ವಧುವಿನ ತಂದೆ-ತಾಯಿ ಇರಲಿಲ್ಲ. ಗ್ರಾಮಸ್ಥರೇ ಮೇಘರಾಜ ಮತ್ತು ವಸುಂಧರಾ ಹೆಸರಿನ ಕತ್ತೆಗಳ ವಿವಾಹ ಮಹೋತ್ಸವ ನೆರವೇರಿಸಿದರು.ಮಳೆಗಾಗಿ ಸಂಕಲ್ಪ:
ಶ್ರೀಮಹಾಗಣಪತಿ ಪೂಜೆ, ಶ್ರೀಜಗದ್ಗುರು ಪಂಚಾಚಾರ್ಯರ ಸಾನ್ನಿಧ್ಯದ ಸಾಕ್ಷಿಗಾಗಿ ಸ್ಥಾಪಿಸಿದ್ದ ಪಂಚಕಲಶಗಳ ಪೂಜೆ ಹಾಗೂ ಗಂಗಾಕಲಶ ಪೂಜೆಯ ನಂತರ ಗ್ರಾಮದ ರೈತರು ಮಳೆಗಾಗಿ ವಿಶೇಷ ಪ್ರಾರ್ಥನೆಯ ಸಂಕಲ್ಪ ಪೂಜೆ ನೆರವೇರಿಸಿದರು. ಇದಕ್ಕೂ ಮೊದಲು ಉಭಯ ಕತ್ತೆಗಳಿಗೆ ಅರಿಷಿಣ ಲೇಪನ ಮಾಡಿ ಸೂರಗಿ ನೀರಿನ ಸ್ನಾನ ಮಾಡಿಸಲಾಯಿತು. ನಂತರ ಪಂಚಕಲಶಗಳ ಸನ್ನಿಧಾನದಲ್ಲಿ ಬಾಸಿಂಗ ಧಾರಣೆ, ಕಂಕಣ ಧಾರಣೆ, ಗುಡಜೀರಕ ಸಿಂಚನ, ಕನ್ಯಾದಾನ, ಮಾಂಗಲ್ಯ ಧಾರಣೆ, ಅಕ್ಷತಾ ರೋಪಣ ಮಾಡಲಾಯಿತು. ವಿವಾಹ ಬಂಧನಕ್ಕೆ ಒಳಗಾದ ಉಭಯ ಕತ್ತೆಗಳ ಮೆರವಣಿಗೆಯನ್ನು ವಿವಿಧ ಜಾನಪದ ವಾದ್ಯ-ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಾಡಲಾಯಿತು.
ಕತ್ತೆಗಳ ಮದುವೆ ಮಾಡಿದ ಖುಷಿಯಲ್ಲಿ ಗ್ರಾಮಸ್ಥರು ಶಿರಾ, ಬೂಂದಿ, ಬದನೆಕಾಯಿ ಪಲ್ಯ, ಅನ್ನ ಮತ್ತು ಸಾರನ್ನು ಒಳಗೊಂಡ ನಿಬ್ಬಣದ ಊಟ ಸವಿದರು. ಶುಕ್ರವಾರ ರಾತ್ರಿ ಉಭಯ ಕತ್ತೆಗಳ ನಿಶ್ಚಿತಾರ್ಥ ಸಹ ನಡೆದದ್ದು ಈ ಮದುವೆಯ ಮತ್ತೊಂದು ವಿಶೇಷತೆ.
ಈ ವೇಳೆ ಕಾಂಗ್ರೆಸ್ ಮುಖಂಡರಾದ ತವನಪ್ಪಅಷ್ಟಗಿ, ಪ್ರಶಾಂತ ಕೇಕರೆ, ಈಶ್ವರ ಶಿವಳ್ಳಿ, ಉದ್ಯಮಿ ಮಂಜುನಾಥ ಮಕ್ಕಳಗೇರಿ ಸೇರಿದಂತೆ ಸ್ಥಳೀಯ ವಿವಿಧ ಸಮಾಜಗಳ ಮುಖಂಡರನೇಕರು ಪಾಲ್ಗೊಂಡಿದ್ದರು.ಮುಂಗಾರು ಮಳೆಯನ್ನೇ ನಂಬಿರುವ ರೈತರು ಈಗಾಗಲೇ ಬಹುಪಾಲು ಬಿತ್ತನೆ ಕಾರ್ಯ ಮುಗಿಸಿದ್ದು, ಈಗ ಅಗತ್ಯಕ್ಕೆ ತಕ್ಕಂತೆ ಮಳೆಯ ಕೊರತೆಯಿಂದಾಗಿ ಹಸಿರಿನಿಂದ ಕಂಗೊಳಿಸಬೇಕಿದ್ದ ಭೂಮಿ ಬರಡಾಗಿವೆ.