ಬಳ್ಳಾರಿ: ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದಡಿ ಬಳ್ಳಾರಿ ಜಿಲ್ಲೆಯು ಅತ್ಯುತ್ತಮ ಸಾಧನೆ ಮಾಡಿದ್ದು, ನಿಗದಿತ ಗುರಿಗಿಂತಲೂ ಹೆಚ್ಚು ಅಂದರೆ ಶೇಕಡಾ 101.2ರಷ್ಟು ಪ್ರಗತಿ ಸಾಧಿಸಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ತಿಳಿಸಿದ್ದಾರೆ.

ಜೂನ್ 28ರಿಂದ ಜುಲೈ 1ರ ವರೆಗೆ ಒಟ್ಟು ನಾಲ್ಕು ದಿನಗಳ ಕಾಲ ನಡೆದ ಈ ಅಭಿಯಾನದಲ್ಲಿ ಜಿಲ್ಲೆಯ 5 ವರ್ಷದೊಳಗಿನ ಒಟ್ಟು 1,99,934 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಆದರೆ, ಜಿಲ್ಲಾಡಳಿತದ ಸಕ್ರಿಯ ಪ್ರೋತ್ಸಾಹ ಹಾಗೂ ಆರೋಗ್ಯ ಇಲಾಖೆಯ ನಿರಂತರ ಶ್ರಮದಿಂದಾಗಿ ಒಟ್ಟು 2,02,387 ಮಕ್ಕಳಿಗೆ ಯಶಸ್ವಿಯಾಗಿ ಎರಡು ಹನಿ ಪೋಲಿಯೋ ಲಸಿಕೆ ಹಾಕುವ ಮೂಲಕ ಈ ಮಹತ್ತರ ಸಾಧನೆ ಮಾಡಲಾಗಿದೆ. ಬಳ್ಳಾರಿ, ಸಂಡೂರು, ಸಿರುಗುಪ್ಪ, ಕುರುಗೋಡು ಮತ್ತು ಕಂಪ್ಲಿ ತಾಲೂಕುಗಳಲ್ಲಿ ಈ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಎಲ್ಲ ಮಕ್ಕಳಿಗೂ ಲಸಿಕೆ ತಲುಪಿಸುವ ದಿಸೆಯಲ್ಲಿ ಜಿಲ್ಲಾದ್ಯಂತ 335 ಕ್ಲಿಷ್ಟಕರ ಪ್ರದೇಶಗಳನ್ನು ಗುರುತಿಸಲಾಗಿತ್ತು. ಇಂತಹ ಸ್ಥಳಗಳಲ್ಲಿ ಲಸಿಕೆ ನೀಡಲು 236 ವಿಶೇಷ ತಂಡಗಳನ್ನು ಸಿದ್ಧಗೊಳಿಸಲಾಗಿತ್ತು. ಒಟ್ಟಾರೆಯಾಗಿ 977 ಪೋಲಿಯೋ ಬೂತ್‌ಗಳು ಹಾಗೂ 615 ಮನೆ ಭೇಟಿ ತಂಡಗಳು ಕಾರ್ಯನಿರ್ವಹಿಸಿದವು. ಸಾರ್ವಜನಿಕರು ಹೆಚ್ಚು ಸೇರುವ ಸಂತೆ, ಮಾರುಕಟ್ಟೆ, ಬಸ್ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ಲಸಿಕೆ ಹಾಕಲು 50 ತಂಡಗಳನ್ನು ನಿಯೋಜಿಸಲಾಗಿತ್ತು. ಇದರೊಂದಿಗೆ ವಲಸೆ ಪ್ರದೇಶಗಳಾದ ಇಟ್ಟಿಗೆ ಭಟ್ಟಿ, ಕಟ್ಟಡ ಕಾಮಗಾರಿ ಪ್ರದೇಶ, ಕಬ್ಬು ಕಡಿಯುವ ಸ್ಥಳಗಳು ಮತ್ತು ಕುರಿಹಟ್ಟಿ ಮುಂತಾದ ಕಡೆಗಳಲ್ಲಿ ಲಸಿಕೆ ತಲುಪಿಸಲು 15 ಸಂಚಾರಿ (ಮೊಬೈಲ್) ತಂಡಗಳ ಮೂಲಕ ಯಶಸ್ವಿ ಸಾಧನೆ ಮಾಡಲಾಗಿದೆ ಎಂದು ಡಾ. ಯಲ್ಲಾ ರಮೇಶ್‌ಬಾಬು ತಿಳಿಸಿದ್ದಾರೆ.