ಮಂಜುನಾಥ ಕೆ.ಎಂ.
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಸರ್ಕಾರಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ 2409 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಅತಿಥಿ ಶಿಕ್ಷಕರ ನೆರವಿನಲ್ಲೇ ಮಕ್ಕಳ ಓದು ಸಾಗಿದೆ!ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳನ್ನೇ ಅವಲಂಬಿಸಿದ್ದಾರೆ. ಉಚಿತ ಶಿಕ್ಷಣ, ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದ್ದರೂ ತರಗತಿಯಲ್ಲಿ ಪಾಠ ಹೇಳುವ ಶಿಕ್ಷಕರ ಕೊರತೆ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಅನೇಕ ಶಾಲೆಗಳಲ್ಲಿ ಅಗತ್ಯ ಸಂಖ್ಯೆಯ ಶಿಕ್ಷಕರು ಇಲ್ಲದ ಕಾರಣ ಒಬ್ಬ ಶಿಕ್ಷಕರೇ ಎರಡು ಅಥವಾ ಮೂರು ತರಗತಿಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಹಲವು ಶಾಲೆಗಳಲ್ಲಿ ಗಣಿತ, ವಿಜ್ಞಾನ, ಇಂಗ್ಲಿಷ್, ಸಮಾಜವಿಜ್ಞಾನ ವಿಷಯಗಳಿಗೆ ಕಾಯಂ ಶಿಕ್ಷಕರೇ ಇಲ್ಲ. ಇಂತಹ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿ ಬೋಧಿಸಲಾಗುತ್ತಿದೆ. ಆದರೆ ಅತಿಥಿ ಶಿಕ್ಷಕರ ಸೇವೆ ತಾತ್ಕಾಲಿಕ ಆಗಿರುವುದರಿಂದ ಶೈಕ್ಷಣಿಕ ನಿರಂತರತೆಗೆ ಧಕ್ಕೆಯಾಗುತ್ತಿದೆ. ಶೈಕ್ಷಣಿಕ ವರ್ಷದ ಮಧ್ಯದಲ್ಲೇ ಕೆಲವರು ಸೇವೆಯಿಂದ ಹೊರನಡೆಯುವುದು ಅಥವಾ ಬೇರೆ ಅವಕಾಶಗಳನ್ನು ಹುಡುಕುವುದು ವಿದ್ಯಾರ್ಥಿಗಳ ಕಲಿಕೆಗೆ ಹೊಡೆತ ನೀಡುತ್ತಿದೆ. ವರ್ಗಾವಣೆ, ನಿವೃತ್ತಿಯಿಂದ ಖಾಲಿಯಾದ ಹುದ್ದೆಗಳು ದೀರ್ಘಕಾಲ ಭರ್ತಿಯಾಗದಿರುವುದು ಸಮಸ್ಯೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ವಿದ್ಯಾರ್ಥಿಗಳ ಕಲಿಕಾ ಮಟ್ಟ ಕುಸಿಯುವ ಅಪಾಯ ಎದುರಾಗಿದೆ.ಖಾಸಗಿ ಶಾಲೆಗಳತ್ತ ಮುಖ:
ಹೊಸ ಶಿಕ್ಷಣ ನೀತಿ, ಚಟುವಟಿಕೆ ಆಧರಿತ ಕಲಿಕೆ, ಡಿಜಿಟಲ್ ಶಿಕ್ಷಣ, ಮೂಲಭೂತ ಸಾಕ್ಷರತೆ, ಸಂಖ್ಯಾಜ್ಞಾನಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಆದರೆ ಈ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಅಗತ್ಯ ಶಿಕ್ಷಕರೇ ಇಲ್ಲದಿರುವುದರಿಂದ ಪೂರ್ಣ ಪ್ರಮಾಣದಲ್ಲಿ ಫಲ ನೀಡುತ್ತಿಲ್ಲ. ಸರಿಯಾದ ಸಮಯಕ್ಕೆ ಪಠ್ಯಕ್ರಮ ಪೂರ್ಣಗೊಳಿಸುವುದು ಸವಾಲಾಗಿದೆ.
ಸರ್ಕಾರಿ ಶಾಲೆಗಳಲ್ಲಿನ ಗುಣಮಟ್ಟದ ಶಿಕ್ಷಣ ಕೊರತೆಯಿಂದಾಗಿ ಖಾಸಗಿ ಶಾಲೆಗಳತ್ತ ಮುಖ ಮಾಡುವುದು ಗ್ರಾಮೀನರಿಗೂ ಅನಿವಾರ್ಯವಾಗಿದೆ. ಆದರೆ, ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಖಾಸಗಿ ಶಾಲೆಗಳ ಶುಲ್ಕ ಭರಿಸುವುದು ಸುಲಭದ ಸಂಗತಿಯಲ್ಲ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿಯೇ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳುವಂತಾಗಬೇಕು ಎಂಬುದು ಶಿಕ್ಷಣಪ್ರೇಮಿಗಳ ಒತ್ತಾಸೆ.
ಬಳ್ಳಾರಿ ಜಿಲ್ಲೆಯಲ್ಲಿರುವ ಸರ್ಕಾರಿ ಕಿರಿಯ-ಹಿರಿಯ ಪ್ರಾಥಮಿಕ ಶಾಲೆಗಳು: 595ವಿದ್ಯಾರ್ಥಿಗಳ ಸಂಖ್ಯೆ: 86184
ಮಂಜೂರಾತಿಯಾದ ಶಿಕ್ಷಕರ ಸಂಖ್ಯೆ: 4608ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು: 2559
ಖಾಲಿ ಹುದ್ದೆಗಳು: 2409ಬಳ್ಳಾರಿ ಜಿಲ್ಲೆಯಲ್ಲಿನ ಸರ್ಕಾರಿ ಪ್ರೌಢಶಾಲೆಗಳ ಸಂಖ್ಯೆ; 125
ವಿದ್ಯಾರ್ಥಿಗಳ ಸಂಖ್ಯೆ: 19,771ಮಂಜೂರಾತಿ ಶಿಕ್ಷಕರ ಸಂಖ್ಯೆ: 1263
ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು: 712ಖಾಲಿ ಹುದ್ದೆಗಳು: 551
ರಾಜ್ಯ ಸರ್ಕಾರ ಶಿಕ್ಷಕರ ನೇಮಕ ಸೇರಿದಂತೆ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಯಾವುದಕ್ಕೂ ಕಮ್ಮಿ ಇಲ್ಲದಂತೆ ಸದೃಢಗೊಳಿಸುವ ಕೆಲಸ ಮಾಡಬೇಕು. ಆಗ ಮಾತ್ರ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲು ಸಾಧ್ಯ. ಬೋಧಕರ ಸಮಸ್ಯೆಯನ್ನು ಜಿಲ್ಲೆಯ ಜನಪ್ರತಿನಿಧಿಗಳು ಸದನದಲ್ಲಿ ಧ್ವನಿ ಎತ್ತುವಂತಾಗಬೇಕು ಎನ್ನುತ್ತಾರೆ ನಿವೃತ್ತ ಸರ್ಕಾರಿ ಶಾಲೆ ಶಿಕ್ಷಕ ವಿ.ಎನ್.ಟಿ.ಪ್ರಕಾಶ್.