ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಜಡತ್ವದಿಂದ ಮಲಗಿರುವ ಸಮಾಜವನ್ನು ಆಗಾಗ್ಗೆ ತಿವಿದು ಎಚ್ಚರಿಸುವ ಆಚರಣೆಗಳೇ ಧಾರ್ಮಿಕ ಉತ್ಸವಗಳು ಎಂದು ಜಡೆ ಹಿರೇಮಠ ಸೊರಬ ಕಾನುಕೇರಿ ಮಠ ಹಾಗೂ ಬಂಕಸಾಣ ಸಮಾಧಾನದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾ ಸ್ವಾಮಿಗಳು ಅಭಿಪ್ರಾಯಪಟ್ಟರು.ಗುರುವಾರ ರಾತ್ರಿ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ಓಂ ಗಜಾನನ ಸೇವಾ ಸಮಿತಿ ಮತ್ತು ಶ್ರೀ ದುರ್ಗಾ ಪರಮೇಶ್ವರಿ ಸೇವಾ ಸಮಿತಿಯ ಹಾಗೂ ಭೂತೇಶ್ವರ ಸೇವಾ ಟ್ರಸ್ಟ್ ವತಿಯಿಂದ ಪ್ರತಿಷ್ಠಾಪಿಸಿರುವ ೨೮ನೇ ವರ್ಷದ ಶ್ರೀ ಗಣೇಶೋತ್ಸವದ ಧರ್ಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮಲಗುವುದು ಮನುಷ್ಯನ ಗುಣ. ಹಾಗೆ ಉತ್ತಮ ಕಾರ್ಯಕ್ಕಾಗಿ ಮನುಷ್ಯನನ್ನು ಎಚ್ಚರಿಸುವುದೂ ಅನುಭಾವಿಗಳ ಉದ್ದೇಶ. ಮಲಗಿದ ಸಮಾಜವನ್ನು ಎಚ್ಚರಿಸುವುದು ಧಾರ್ಮಿಕ ಉತ್ಸವಗಳ ಉದ್ದೇಶ. ಹಾಗೆ ಮಲಗಲು ಬಿಟ್ಟರೆ ಮನುಷ್ಯ ಜನ್ಮದ ಸಾರ್ಥಕತೆ ಆಗುವುದಿಲ್ಲ. ಹಾಗಾಗಿ ಇಂತಹ ಉತ್ಸವಗಳು ಸದಾ ಕಾಲ ನಮ್ಮನ್ನು, ಸಮಾಜವನ್ನು ಜಾಗೃತಗೊಳಿಸುತ್ತವೆ ಎಂದರು.ನಮ್ಮ ಸಂಸ್ಕೃತಿ ಸಂಸ್ಕಾರಗಳ ಬಗ್ಗೆ ನಮಗೆ ಅಭಿಮಾನ ಇರಬೇಕು. ನಮ್ಮ ಹಿರಿಯರ ಆಸ್ತಿಗಾಗಿ ನಾವು ಕೋರ್ಟ್‌ಗೆ ಹೋಗುತ್ತೇವೆ. ಅಲ್ಲಿ ಆಸ್ತಿಯನ್ನು ಪಡೆದುಕೊಳ್ಳುತ್ತೇವೆ. ಆದರೆ ತಂದೆ-ತಾಯಿಗಳ ಸಂಸ್ಕಾರ ಪರಂಪರೆ ನಡೆಸಿಕೊಂಡು ಹೋಗಲು ಇಂದಿನ ಜನಾಂಗ ತಯಾರಾಗಿಲ್ಲ. ಆದರೆ ಇದಕ್ಕೆ ಸಲಹೆ ನೀಡಲು ಪರಿಹಾರ ಕೊಡಲು ಯಾವ ಕೋರ್ಟೂ ಇಲ್ಲ. ಇದು ಪ್ರಜಾಪ್ರಭುತ್ವದ ವಿಪರ್ಯಾಸ ಎಂದು ಹೇಳಿದರು.
ಸಾವಿರಾರು ವರ್ಷಗಳ ನಮ್ಮ ಆಚಾರ-ವಿಚಾರ ಪರಂಪರೆ ಧರ್ಮಗಳ ಬಗ್ಗೆ ನಮಗೆ ಅಭಿಮಾನ ಇರಬೇಕು. ಮಕ್ಕಳಿಗೆ ಇದರ ಬಗ್ಗೆ ಹೇಳುವ ಪೂರ್ವದಲ್ಲಿ ತಂದೆ- ತಾಯಿಗಳು ಇವುಗಳ ಆಚರಣೆಯನ್ನು ಪಾಲಿಸಬೇಕು ಎಂದರು.ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿಯ ಮುಖ್ಯಸ್ಥರಾದ ಕೆರಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಧಾರ್ಮಿಕ ಕಾರ್ಯ ಕ್ರಮಗಳನ್ನು ಮಾಡುವುದು ಬಹುಕಷ್ಟ. ಸುಮಾರು ೨೮ ವರ್ಷಗಳಿಂದ ಈ ಕಾರ್ಯಕ್ರಮವನ್ನು ಮಾಡಿಕೊಂಡು ಬರಲಾಗುತ್ತಿದೆ. ಇದಕ್ಕೆ ಭಕ್ತರ ಸಹಕಾರ ಬಹುಮುಖ್ಯ ಎಂದರು.
ಸಮಾಜ ಸೇವಕ ಹೇಮರಾಜ ಪಾಟೀಲ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಮಕ್ಕಳಿಗೆ ಸಂಸ್ಕಾರ ಕೊಡದೆ ಅವರಿಗೆ ಸಂಪತ್ತನ್ನು ಕೊಟ್ಟರೆ ಅವರು ಅದರ ದುರುಪಯೋಗ ಮಾಡಿಕೊಳ್ಳುತ್ತಾರೆ. ಆದ್ದರಿಂದ ಪೋಷಕರು ಮಕ್ಕಳಿಗೆ ಸಂಸ್ಕಾರ ಕೊಡಬೇಕು ಎಂದರು. ಗಣೇಶ ಮೂರ್ತಿಯ ದಾನಿಗಳಾದ-ಅರಣ್ಯ ಇಲಾಖೆಯ ರಾಮಣ್ಣ ಮಾತನಾಡಿದರು.ಪ್ರಾತಃಕಾಲದಲ್ಲಿ ಪುರೋಹಿತರಿಂದ ಹೋಮ ಹವನಾದಿಗಳು, ಅಭಿಷೇಕಾದಿ ಪೂಜೆಗಳು ನಡೆದವು. ಈ ಸಂದರ್ಭದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಂತರ ಮಹಾಪ್ರಸಾದ ಸೇವೆ ನಡೆಯಿತು. ಸೇವಾ ಸಮಿತಿಯ ಕಾರ್ಯಕರ್ತರು ಹಾಗೂ ಭಕ್ತಾದಿಗಳು ಹಾಜರಿದ್ದರು.