ಕುಶಾಲನಗರ: ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ದೇಶಕ್ಕೆ ಸ್ವಾತಂತ್ರ್ಯ ಲಭಿಸಲು ಕಾರಣಕರ್ತರಾದ ಹೋರಾಟಗಾರರನ್ನು ಸ್ಮರಿಸುವುದು ಪ್ರಮುಖ ಕರ್ತವ್ಯವಾಗಿದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಕುಶಾಲನಗರ ಪುರಸಭೆ ಆಡಳಿತ ಅಧಿಕಾರಿ ನಿತಿನ್ ಚೆಕ್ಕಿ ಅಭಿಪ್ರಾಯಪಟ್ಟರು. ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಅಂಗವಾಗಿ ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ಕೊಡಗು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ರಾಜ್ಯ ರಾಷ್ಟ್ರಮಟ್ಟದಲ್ಲಿ ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿದ ಹೋರಾಟಗಾರರ ಸ್ಮರಣೆ ಮಾಡುವುದು ಅಗತ್ಯವಾಗಿದೆ ಎಂದರು. ದಿನಾಚರಣೆಗಳು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು ಎಂದು ಹೇಳಿದರು.ಪ್ರತಿಯೊಬ್ಬರು ಉತ್ತಮ ಸಂಸ್ಕಾರ, ನಾಗರಿಕತೆ ಮೂಡಿಸಿಕೊಳ್ಳುವ ಜೊತೆಗೆ ಶಿಕ್ಷಣ ಆರೋಗ್ಯ ಶಿಸ್ತು ನೀತಿಗಳನ್ನು ಪಾಲಿಸುವಂತೆ ಕರೆ ನೀಡಿದರು.ಮುಖ್ಯ ಭಾಷಣಕಾರ, ಕನ್ನಡ ಭಾಷಾ ಅಧ್ಯಾಪಕ ಮೇ.ನ. ವೆಂಕಟ ನಾಯ್ಡು ಮಾತನಾಡಿ, ಭಾರತ ದೇಶ ತನ್ನದೇ ಆದ ಪ್ರಗತಿಯತ್ತ ಸಾಗುತ್ತಿದೆ. ದೇಶ ವಿಶ್ವದ ಎಲ್ಲ ದೇಶಗಳ ಗಮನ ಸೆಳೆಯುವಂತೆ ಸಾಧನೆಯಲ್ಲಿ ತೊಡಗಿದ್ದು, ರಾಷ್ಟ್ರದ ಪ್ರಗತಿಯಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.ಧ್ವಜಾರೋಹಣ ನಂತರ ಪೊಲೀಸ್ ಅರಣ್ಯ ಇಲಾಖೆ ತಂಡ ಎನ್‌ಸಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳ ತಂಡದಿಂದ ಆಕರ್ಷಕ ಪಥಸಂಚಲನ ನಡೆಯಿತು. ಉಪ ವಿಭಾಗ ಅಧಿಕಾರಿ ನಿತಿನ್ ಚೆಕ್ಕಿ ಗೌರವ ವಂದನೆ ಸ್ವೀಕರಿಸಿದರು.
ಸಮಾರಂಭದಲ್ಲಿ ವಂದೇ ಮಾತರಂ ರಾಷ್ಟ್ರಗೀತೆ ನಾಡಗೀತೆ ರೈತ ಗೀತೆ ಹಾಡಲಾಯಿತು.ಮುಖ್ಯ ಅತಿಥಿಗಳಾಗಿ ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಸೋಮವಾರಪೇಟೆ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕ ಚಂದ್ರಶೇಖರ್ ಪಿ., ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ಸಿ. ಅಪ್ಪಣ್ಣ, ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಟಿ.ಎಸ್. ಗಿರೀಶ್ ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಸೇರಿದಂತೆ ತಾಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.
ಸಾಧಕರಾದ ಗೋಪಾಲ್, ಮಾಜಿ ಯೋಧ ಕ್ಯಾಪ್ಟನ್ ಸುರೇಶ್ ಕೆ.ಎಸ್., ಆಟೋ ಚಾಲಕ ಶ್ರೀವಳ್ಳಿ, ಪೌರ ಕಾರ್ಮಿಕರಾದ ಸುರೇಶ್ ಬಾಬು, ಕ್ರೀಡಾ ಸಾಧಕ ವಿಶ್ರುತ್ ವರದರಾಜ್ ಮತ್ತು ಹಿರಿಯ ಪತ್ರಿಕಾ ವಿತರಕ ವಿ.ಪಿ. ಪ್ರಕಾಶ್ ಅವರನ್ನು ಗೌರವಿಸಲಾಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಪೆರುಮಾಳ್ ಸ್ವಾಗತಿಸಿದರು. ಶಿಕ್ಷಕಿಯರಾದ ರಶ್ಮಿ ಮತ್ತು ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.