ಸಾರಾಂಶ
ರಾಣಿಬೆನ್ನೂರು ತಾಲೂಕಿನ ಖಂಡೇರಾಯನಹಳ್ಳಿ ಗ್ರಾಮದ ಸಿದ್ಧಾರೂಢ ಮಠದಲ್ಲಿ ಬುಧವಾರ 30ನೇ ವೇದಾಂತ ಪರಿಷತ್ ಹಾಗೂ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭ ನಡೆಯಿತು.
ರಾಣಿಬೆನ್ನೂರು: ಪರಮಾತ್ಮನ ಸ್ಮರಣೆಯಿಂದ ಸಕಲ ದುಃಖ ನಿವಾರಣೆಯಾಗುತ್ತದೆ ಎಂದು ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ ನುಡಿದರು.
ತಾಲೂಕಿನ ಖಂಡೇರಾಯನಹಳ್ಳಿ ಗ್ರಾಮದ ಸಿದ್ಧಾರೂಢ ಮಠದಲ್ಲಿ ಬುಧವಾರ 30ನೇ ವೇದಾಂತ ಪರಿಷತ್ ಹಾಗೂ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಭೂಮಿಯಲ್ಲಿ ಜನ್ಮ ತಾಳಿದ ಯಾವುದೇ ಮನುಷ್ಯ ಓಂ ನಮಃ ಶಿವಾಯ ಮಂತ್ರ ಪಠಣ ಮಾಡಬಹುದು. ಸಾವು ಯಾವಾಗ ಬರುತ್ತದೆ ಎಂಬುದನ್ನು ಖಚಿತವಾಗಿ ಹೇಳಲಾಗಲ್ಲ. ಆದ್ದರಿಂದ ಗುರುವಿನ ಮೂಲಕ ಪಂಚಾಕ್ಷರಿ ಮಂತ್ರ ಅರಿತು ನಿತ್ಯ ಪಠಣ ಮಾಡಬೇಕು. ಇದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದರು.ದಾವಣಗೆರೆ ಜಡೇಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ಸಪ್ತ ಕೋಟಿ ಮಂತ್ರಗಳಿದ್ದು, ಅವುಗಳಿಗೆಲ್ಲಾ ಓಂ ನಮಃ ಶಿವಾಯ ರಾಜನಿದ್ದಂತೆ. ಸಂಸಾರದಲ್ಲಿ ನಮ್ಮ ಕೆಲಸಗಳನ್ನು ಮಾಡುವ ಜತೆಗೆ ಮೋಕ್ಷ ಸಾಧನೆಗೆ ಓ ನಮಃ ಶಿವಾಯ ಮಂತ್ರ ಪಠಣ ಮಾಡಬೇಕು ಎಂದರು.
ಹುಬ್ಬಳ್ಳಿಯ ಸಿದ್ಧಾರೂಢಮಠದ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ವೇದ ನಿಷಿದ್ಧವಾದ ಕಾರ್ಯ ಮಾಡುವುದೇ ಪಾಪ. ನಮ್ಮ ಮನಸ್ಸಿನಲ್ಲಿ ಹಾಗೂ ಬುದ್ಧಿಯಲ್ಲಿ ಪಾಪ ವಾಸ ಮಾಡುತ್ತಿದೆ. ಅದು ಶರೀರವನ್ನು ತೊಳೆದುಕೊಂಡರೆ ಹೋಗುತ್ತವೆ. ಆದರೆ ಮನಸ್ಸಿನಲ್ಲಿ ಬೇರೂರಿರುವ ಪಾಪವನ್ನು ಹೇಗೆ ತೊಳೆಯಬೇಕು? ನಿಜ ಶಿವಮಂತ್ರವನ್ನು ಪಠಿಸುವ ಮೂಲಕ ಅದನ್ನು ತೊಳೆದುಕೊಳ್ಳಬೇಕು ಎಂದರು. ಶ್ರೀಮಠದ ಪೀಠಾಧಿಪತಿ ನಾಗರಾಜಾನಂದ ಮಹಾಸ್ವಾಮಿಜಿ, ಇಂಚಲದ ಪೂರ್ಣಾನಂದ ಭಾರತಿ ಶ್ರೀಗಳು, ಹದಡಿಯ ಚಂದ್ರಗಿರಿ ಮಠದ ಮುರಳೀಧರ ಶ್ರೀಗಳು, ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಶ್ರೀಗಳು ಉಪದೇಶಾಮೃತ ನೀಡಿದರು.ಮಣಕೂರ ಸಿದ್ಧಾರೂಢ ಗುರುದೇವಾಶ್ರಮದ ಮಾತಾಜಿ ಚನ್ನಬಸಮ್ಮನವರು, ಗೋಕಾಕ ತಾಲೂಕು ಹಡಗಿನಹಾಳ ಸುಜ್ಞಾನ ಕುಟೀರದ ಮಲ್ಲೇಶ್ವರ ಶರಣರು ಸಮ್ಮುಖ ವಹಿಸಿದ್ದರು.
ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಹುಬ್ಬಳ್ಳಿ ಸಿದ್ಧಾರೂಢಮಠದ ಧರ್ಮದರ್ಶಿ ಸಿದ್ಧನಗೌಡ ಪಾಟೀಲ ಮಾತನಾಡಿದರು.ಇದಕ್ಕೂ ಪೂರ್ವದಲ್ಲಿ ಬೆಳಗ್ಗೆ ಸಿದ್ಧಾರೂಢರ ಪಂಚಲೋಹದ ಮೂರ್ತಿಗೆ ಪಂಚಾಮೃತ ಅಭಿಷೇಕ ಹಾಗೂ ಪೂಜಾ ವಿಧಾನಗಳನ್ನು ಚನ್ನಯ್ಯ ಶಾಸ್ತ್ರಿಗಳು ನಡೆಸಿಕೊಟ್ಟರು. ಆನಂತರ ಭಕ್ತಾದಿಗಳಿಂದ ಶಿವಾನಂದ ಭಾರತಿ ಸ್ವಾಮಿಗಳ ತುಲಾಭಾರ ನೆರವೇರಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಲಲಿತವ್ವ ಹಿರೇಬಿದರಿ, ಉಪಾಧ್ಯಕ್ಷೆ ನೀಲಮ್ಮ ಪೂಜಾರ, ಸದಸ್ಯರಾದ ಮಲ್ಲೇಶಪ್ಪ ತೋಟಗೇರ, ಶಕುಂತಲಾ ಕೊಡ್ಲೇರ, ಮಠದ ಅಧ್ಯಕ್ಷ ಫಕ್ಕೀರಪ್ಪಗೌಡ್ರ, ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕೂಸಗೂರ, ಜನಾರ್ನ ಕಡೂರ, ವಕೀಲ ಎಂ.ಬಿ. ಚಿನ್ನಪ್ಪನವರ, ಡಾ. ಎಂ. ಸುನೀತಾ, ಡಾಕೇಶ ಲಮಾಣಿ ಮತ್ತಿತರರು ಉಪಸ್ಥಿತರಿದ್ದರು.