ಸಾರಾಂಶ
ರಾಷ್ಟ್ರೀಯ ನಾಟಕೋತ್ಸವದ 5ನೇ ದಿನದ ಕಾರ್ಯಕ್ರಮದಲ್ಲಿ ಸಾನ್ನಿದ್ಯ ವಹಿಸಿ ಪಂಡಿತಾರಾಧ್ಯ ಶ್ರೀ
ಕನ್ನಡಪ್ರಭವಾರ್ತೆ ಹೊಸದುರ್ಗ
ಅಬ್ಬಿನಹೊಳಲು ಭೂ ಸ್ವಾದಿನ ಸಮಸ್ಯೆ ನಿವಾರಣೆ ಮಾಡಿ ಭದ್ರಾ ಮೇಲ್ದಂಡೆ ಕಾಮಗಾರಿ ಅಡಚಣೆ ನಿವಾರಿಸಬೇಕೆಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.ತಾಲೂಕಿನ ಸಾಣೇಹಳ್ಳಿಯ ಶಿವಕುಮಾರ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ 5ನೇ ದಿನದ ಕಾರ್ಯಕ್ರಮದಲ್ಲಿ ಸಾನ್ನಿದ್ಯ ವಹಿಸಿ ಮಾತನಾಡಿದರು.ಭೂ ಸ್ವಾಧೀನ ಪರಿಹಾರದಲ್ಲಿ ವ್ಯತ್ಯಾಸವಾಗಿದೆ. ತರಿಕೆರೆ ಶಾಸಕರು ಇದನ್ನು ಆದ್ಯತೆಯನ್ನಾಗಿ ಪರಿಗಣಿಸಬೇಕೆಂದು ಸೂಚಿಸಿದ ಶ್ರೀಗಳು, ಕಳೆದ ಹತ್ತು ವರ್ಷದಿಂದ ಅಬ್ಬಿನಹೊಳಲು ಭೂ ಸ್ವಾಧೀನ ಸಮಸ್ಯೆ ಹಾಗೆ ಉಳಿದಿದೆ. ಎಲ್ಲರೂ ಕೈಚೆಲ್ಲಿದರೆ ಹೇಗೆ? ಮುಖ್ಯಮಂತ್ರಿ ಗಳು ಕಡೇ ದಿನದ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದು, ಅವರ ಮುಂದೆ ವಿಷಯ ಪ್ರಸ್ತಾಪಿಸುವುದಾಗಿ ಹೇಳಿದರು. ಎಲ್ಲಾ ರೀತಿಯ ಸವಲತ್ತು ಗಳನ್ನು ಕೊಟ್ಟಿರುವ ಪ್ರಕೃತಿಯನ್ನು ಎಲ್ಲರು ಗೌರವಿಸಬೇಕಿದೆ. ಪ್ರಕೃತಿಯ ಆಶೀರ್ವಾದ ನಮಗೆ ಬೇಕು. ಕೃಷಿಕರ ಬದುಕು ಹಸನಾದರೆ ಮಾತ್ರ ದೇಶ ಸುಭಿಕ್ಷ ವಾಗಿರುತ್ತದೆ ಎಂದರು .ಹುಬ್ಬಳ್ಳಿಯ ಮೂರು ಸಾವಿರ ಮಠದ ಜಗದ್ಗುರು ಡಾ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಶಿಕ್ಷಣ, ಧರ್ಮದ ಮುಖಾಂತರವಲ್ಲದೆ ನಾಟಕಗಳ ಮೂಲಕ ದೇಶಕ್ಕೆ ಸಂಸ್ಕಾರವನ್ನು ಪಂಡಿತಾರಾಧ್ಯ ಸ್ವಾಮೀಜಿ ಕಲಿಸುತ್ತಿದ್ದಾರೆ. ಪ್ರಕೃತಿಯ ಮಡಿಲಲ್ಲಿ ಮಕ್ಕಳಿಗೆ ಅನ್ನ, ಅರಿವು ಕೊಟ್ಟು ಕುರುಕುಲದ ಕಲ್ಪನೆಯಲ್ಲಿ ಮಕ್ಕಳಿಗೆ ಶಿಕ್ಷಣ ವನ್ನು ಕೊಡುವ ಮೂಲಕ ಮಕ್ಕಳ ಕಲಾ ಪ್ರತಿಭೆಗೆ ಕುಂಚವಾಗಿದ್ದಾರೆ. ಸರಳತೆಯ ಮೂಲಕ ಸಮಾಜದ ಉದ್ಧಾರಕ್ಕೆ, ಮಕ್ಕಳ ಏಳಿಗೆಗೆ ತಮ್ಮನ್ನು ತೊಡಗಿಸಿಕೊಂಡಿರುವ ಸಂತ ಪಂಡಿತಾರಾಧ್ಯ ಸ್ವಾಮೀಜಿ ಸಮಾಜಕ್ಕೆ ದೊಡ್ಡ ಆಸ್ತಿ ಎಂದರು.ಕೃಷಿಕರ ನೋವು-ನಲಿವು-ರಕ್ಷಣೆ ಕುರಿತಂತೆ ಕಾರಿಗನೂರಿನ ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ಸಮಾಜದಲ್ಲಿ ವಿಭಕ್ತ ಕುಟುಂಬಗಳು ಹೆಚ್ಚಾದಂತೆ ಹಿಡುವಳಿ ಭೂಮಿ ಕಡಿಮೆಯಾಗಿ ಬೇಡಿಕೆ ಹೆಚ್ಚಾಯಿತು. ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಸವಾಲುಗಳು ಹೆಚ್ಚಾದವು ಎಂದರು.ಜಮೀನಿನ ಕುರಿತು ಸ್ವಾಮೀನಾಥನ್ ವರದಿಯನ್ನು ಅನುಷ್ಠಾನಗೊಳಿಸಿದ ಸರ್ಕಾರ ಕೃಷಿಕರ ಬಗ್ಗೆ ನೀಡಿದ ವರದಿಯನ್ನು ಅನುಷ್ಠಾನಗೊಳಿಸಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಕೃಷಿಗೆ ಎಂಎಸ್ ಪಿ ತಂದರೆ ಹಣದುಬ್ಬರ ಆಗುತ್ತದೆ ಎಂದು ಯೋಚಿಸುವ ಆರ್ಥಿಕ ತಜ್ಞರು ಪೆಟ್ರೋಲ್, ಡೀಸೆಲ್ ಹೆಚ್ಚಳ ಆಗುವುದರ ಬಗ್ಗೆ ಯೋಚಿಸದಿರುವುದು ದುರಂತ ಎಂದರು. ಜಾತಿ ಬದಲು ಬೆಳೆವಾರು ಅಭಿವೃದ್ಧಿ ನಿಗಮ ಮಾಡಿ: ರೈತರ ಸಾಲಮನ್ನಾ ನೀತಿ ನೈತಿಕ ಮಾರ್ಗ ಅಲ್ಲ. ಆದರೆ ಅಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಸರ್ಕಾರಗಳು, ಮಾರುಕಟ್ಟೆಯ ಮನಸ್ಥಿತಿಗಳು ಬದಲಾದರೆ ರೈತರ ಬದುಕು ಬದಲಾಗುತ್ತದೆ ಅಂಬೇಡ್ಕರ್, ವಾಲ್ಮೀಕಿ, ಸೇರಿದಂತೆ ಪ್ರತಿ ಜಾತಿಗೊಂದು ಅಭಿವೃದ್ಧಿ ನಿಗಮ ಮಾಡುವ ಬದಲು ಬೆಳೆವಾರು ನಿಗಮ ಮಾಡಿ ರೈತರ ಉದ್ಧಾರ ಮಾಡಬಹುದು. ಕೃಷಿಗೆ ಸಹಾಯಧನ, ಕೈಗಾರಿಕೆಗೆ ಪ್ರೋತ್ಸಾಹ ಧನದ ನೀತಿ ಸರಿಯಲ್ಲ. ಹಾಗೆಯೇ ಹೊಗೆ ಮುಕ್ತ ನಗರ, ಹಗೆ ಮುಕ್ತ ಗ್ರಾಮ ಮಾಡಬೇಕು ಎಂದರು.ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಾಪ್ರಭು ಮಾತನಾಡಿ, ಜೀವನ, ನಾಟಕ ಬೇರೆಯಲ್ಲ. ನಾವೆಲ್ಲಾ ನಾಟಕದ ಪಾತ್ರಧಾರಿಗಳು. ಜೀವನದಲ್ಲಿ ನಡೆಯುವ ಘಟನೆಗಳನ್ನೇ ಪಾತ್ರದ ಮೂಲಕ ಜನರಿಗೆ ತೋರಿಸುವ ಕೆಲಸವನ್ನು ಶ್ರೀ ಗಳು ಮಾಡುತ್ತಿದ್ದಾರೆ. ಮನುಷ್ಯ ಅಸೆಗಿಂತ ದುರಾಸೆಗೆ ಒಳಗಾಗಿದ್ದಾನೆ. ನಾಟಕಗಳನ್ನು ಮನರಂಜನೆ ಯಾಗಿ ತೆಗೆದುಕೊಳ್ಳದೆ ಅಲ್ಲಿ ಬರುವ ತತ್ವ ಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದರು.ವೇದಿಕೆಯಲ್ಲಿ ತರೀಕೆರೆ ಶಾಸಕ ಜಿ.ಎಚ್ ಶ್ರೀನಿವಾಸ, ಪೊಲೀಸ್ ಆಯುಕ್ತ ಸಿದ್ದರಾಮಪ್ಪ, ಶಂಬು ಬಳಿಗಾರ್ ಡಾ.ಬಿ.ಇ ಕುಮಾರಸ್ವಾಮಿ ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಣ್ಣಿಗೇರಿಯ ಯಶಸ್ವಿನಿ ಯೋಗ ಸಂಸ್ಥೆ ಮಕ್ಕಳಿಂದ ಯೋಗ ನೃತ್ಯ ನಡೆಯಿತು. ಕಾರ್ಯಕ್ರಮದ ನಂತರ ಶಿವಕುಮಾರ ಮಾವಲಿ ರಚನೆಯ, ಹೊಂಗಿರಣ ಚಂದ್ರು ನಿರ್ದೇಶನದ ಒಂದು ಕಾನೂನಾತ್ಮಕ ಕೊಲೆ ಎಂಬ ನಾಟಕವನ್ನು ಶಿವಮೊಗ್ಗದ ಹೊಂಗಿರಣ ಸಂಸ್ಥೆಯ ಕಲಾವಿದರು ಅಭಿನಯಿಸಿದರು.ಬಾಕ್ಸ್.....
ರೈತರ ನೆರವಿಗೆ ಪ್ರತ್ಯೇಕ ಬಜೆಟ್ ಮಂಡಿಸಿದ್ದ ಬಿಎಸ್ವೈಎಲ್ಲಿ ಕೋಪ ಇರುತ್ತದೆಯೋ ಅಲ್ಲಿ ಪ್ರಾಮಾಣಿಕತೆ, ಪ್ರೀತಿ ಇರುತ್ತದೆ. ಶ್ರೀಗಳದ್ದು ಸಾತ್ವಿಕ ಕೋಪ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ರೈತನನ್ನು ದೇಶದ ಬೆನ್ನೆಲುಬು ಎಂದು ವೇದಿಕೆಗಳಲ್ಲಿ ಭಾಷಣ ಮಾಡುತ್ತಾರೆ. ಆದರೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ರೈತರ ಸ್ಥಿತಿ ಹಾಗೆಯೇ ಇದೆ. ಕೃಷಿಯನ್ನು ಒಂದು ಉದ್ಯಮವನ್ನಾಗಿ ಮಾಡುವ ಪ್ರಕ್ರಿಯೆಗೆ ಆಡಳಿತ ನಡೆಸಿದ ಯಾವುದೇ ಸರ್ಕಾರಗಳು ಮಾಡಲಿಲ್ಲ ಎಂದರು.ರಾಜಕೀಯ ವ್ಯವಸ್ಥೆಯಲ್ಲಿ ರೈತರಿಗೆ ಶಕ್ತಿ ತುಂಬುವ ಕೆಲಸ ಆಗಬೇಕಿದೆ. ಬರಗಾಲ ದಿಂದ ರೈತ ಸಂಕಷ್ಟ ದಲ್ಲಿದ್ದಾಗ ಯಡಿಯೂರಪ್ಪ ಸರ್ಕಾರ ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸುವ ಮೂಲಕ ರೈತರ ನೆರವಿಗೆ ಬಂದರು. ಇಂದಿನ ಶಿಕ್ಷಣದಲ್ಲಿ ಮೌಲ್ಯಗಳಿಲ್ಲದ ಕಾರಣ ತಂದೆ ತಾಯಿಗಳ ಮುಂದೆ ಮಕ್ಕಳು ತಲೆ ತಗ್ಗಿಸಬೇಕಾದ ವ್ಯವಸ್ಥೆ ಆಗಬೇಕಿತ್ತು ಆದರೆ ಮಕ್ಕಳ ನಡವಳಿಕೆಯಿಂದ ತಂದೆ ತಾಯಿ ತಲೆ ತಗ್ಗಿಸುವಂತಾಗಿರುವುದು ವಿಷಾದಕರ ಎಂದರು.ಫೋಟೋ, 6ಎಚ್ ಎಸ್ ಡಿ 3: ಸಾಣೇಹಳ್ಳಿ ಯಲ್ಲಿ ನಡೆಯುತ್ತಿರುವ ನಾಟಕೋತ್ಸವದಲ್ಲಿ ಶಾಸಕ ವಿಜಿಯೇಂದ್ರ ಮಾತನಾಡಿದರು.