ಹದಗೆಟ್ಟ ರಸ್ತೆ ಸರಿಪಡಿಸಿ, ಜನರ ಪ್ರಾಣ ಉಳಿಸಿ

| Published : Nov 21 2024, 01:01 AM IST

ಸಾರಾಂಶ

ಶೃಂಗೇರಿ-ನರಸಿಂಹರಾಜಪುರ ಮತ್ತು ಖಾಂಡ್ಯ ಹೋಬಳಿ ಸೇರಿದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಎಲ್ಲಾ ರಸ್ತೆಗಳು ವಾಹನ ಹಾಗೂ ಜನಸಂಚಾರಕ್ಕೆ ಸಾಧ್ಯವಾಗದಷ್ಟು ಹೊಂಡಗುಂಡಿಗಳಿಂದ ತುಂಬಿದ್ದು, ಸಂಪೂರ್ಣ ಹದಗೆಟ್ಟಿದೆ. ಕೂಡಲೇ ಇದನ್ನು ಸರಿಪಡಿಸಿ, ಜನರ ಪ್ರಾಣ ಉಳಿಸಬೇಕೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಆಗ್ರಹಿಸಿದ್ದಾರೆ.

ಕೊಪ್ಪ: ಶೃಂಗೇರಿ-ನರಸಿಂಹರಾಜಪುರ ಮತ್ತು ಖಾಂಡ್ಯ ಹೋಬಳಿ ಸೇರಿದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಎಲ್ಲಾ ರಸ್ತೆಗಳು ವಾಹನ ಹಾಗೂ ಜನಸಂಚಾರಕ್ಕೆ ಸಾಧ್ಯವಾಗದಷ್ಟು ಹೊಂಡಗುಂಡಿಗಳಿಂದ ತುಂಬಿದ್ದು, ಸಂಪೂರ್ಣ ಹದಗೆಟ್ಟಿದೆ. ಕೂಡಲೇ ಇದನ್ನು ಸರಿಪಡಿಸಿ, ಜನರ ಪ್ರಾಣ ಉಳಿಸಬೇಕೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಕಳೆದೆರಡು ವರ್ಷಗಳಿಂದ ರಸ್ತೆಗಳ ದುರಸ್ತಿ ಹಾಗೂ ಮೂಲಭೂತ ಸೌಕರ್ಯಕ್ಕೆ ಸರ್ಕಾರ ಗಮನಹರಿಸದೇ ಇರುವುದು ದುರದೃಷ್ಟಕರ ಸಂಗತಿ. ರಸ್ತೆಯಲ್ಲಿ ಓಡಾಡುವ ಹಿರಿಯ ನಾಗರೀಕರು, ಮಹಿಳೆಯರು, ಮಕ್ಕಳು, ದ್ವಿಚಕ್ರ ಹಾಗೂ ಇತರೆ ವಾಹನ ಸವಾರರು ಪ್ರಾಣ ಭಯದಿಂದ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಪ.ಪಂ. ಮತ್ತು ಪಿಡಬ್ಲ್ಯೂಡಿ ಅಧಿಕಾರಿಗಳು ಈ ವಿಚಾರವಾಗಿ ಮೌನವಾಗಿರುವುದನ್ನು ನೋಡಿದರೆ ಸರ್ಕಾರದಲ್ಲಿ ಅನುದಾನದ ಕೊರತೆ ಎದ್ದುಕಾಣುತ್ತಿದೆ. ಇದರಿಂದ ಶೃಂಗೇರಿ, ಬಾಳೆಹೊನ್ನೂರು ಹರಿಹರಪುರ, ಮತ್ತು ಭಂಡಿಗಡಿ ಶ್ರೀಮಠ ನ.ರಾ. ಪುರದ ಜ್ವಾಲಾಮಾಲಿನಿ ದೇವಸ್ಥಾನ ಹಾಗೂ ಬಸ್ತಿಮಠಗಳಿಗೆ ರಾಜ್ಯದ ವಿವಿಧೆಡೆಗಳಿಂದ ಬರುವ ಭಕ್ತಾದಿಗಳು, ಮಲೆನಾಡಿಗೆ ಬರುವ ಪ್ರವಾಸಿಗರು ಹದಗೆಟ್ಟ ರಸ್ತೆಯನ್ನು ನೋಡಿಯೇ ತಮ್ಮ ಪ್ರವಾಸವನ್ನು ಮೊಟಕುಗೊಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರು, ಜನ ಪ್ರತಿನಿಧಿಗಳು, ಹಾಗೂ ಸರ್ಕಾರ ಪ್ರಜೆಗಳ ಪ್ರತಿನಿಧಿಯಾಗಿದ್ದಾರೆ. ಕಳೆದ 2 ವರ್ಷಗಳಾದರೂ ರಸ್ತೆ ದುರಸ್ತಿ ಹಾಗೂ ದೂರದರ್ಶಿತ್ವದ ಯಾವುದೇ ಯೋಜನೆಗಳನ್ನು ಹಮ್ಮಿಕೊಳ್ಳದೆ ಇರುವುದು ದುರದೃಷ್ಟಕರ. ಕೂಡಲೇ ರಸ್ತೆಗಳ ದುರಸ್ತಿ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಸುಧಾಕರ್ ಶೆಟ್ಟಿ ತಿಳಿಸಿದ್ದಾರೆ.