ಸಾರಾಂಶ
ಸಂಶೋಧನೆಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಹ ಪ್ರಾಧ್ಯಾಪಕ ಡಾ. ಪ್ರಸನ್ನ ಕೆ.ಪಿ. ಸಂಶೋಧನೆ ಮತ್ತು ಸ್ವರೂಪ ಬಗ್ಗೆ ಉಪನ್ಯಾಸ ನೀಡಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ವಿರಾಜಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಘಟಕ ಮತ್ತು ಕನ್ನಡ ವಿಭಾಗದ ಸಹಯೋಗದಲ್ಲಿ ಕಾಲೇಜಿನಲ್ಲಿ ಸಂಶೋಧನೆಯ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಹುಣಸೂರು ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಪ್ರಸನ್ನ ಕೆ. ಪಿ. ಅವರು ಸಂಶೋಧನೆಯ ಉದ್ದೇಶ ಮತ್ತು ಸ್ವರೂಪದ ಬಗ್ಗೆ ಉಪನ್ಯಾಸ ನೀಡಿದರು.
ಸಂಶೋಧನೆ ಎಂದರೆ, ಜ್ಞಾನದ ಸಲುವಾಗಿ ನಡೆಸುವ ಹುಡುಕಾಟ, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡರೆ ಸಂಶೋಧನೆಯಾಗುತ್ತದೆ. ಮನುಷ್ಯನ ಕ್ರಿಯಾಶೀಲ ಮನಸ್ಸು ಸಂಶೋಧನೆಗೆ ಪ್ರೇರಣೆಯಾಗಿದೆ ಎಂದರು. ಹೊಸ ಜ್ಞಾನವನ್ನು ಪಡೆಯಲು ಸಂಶೋಧನೆ ಅಗತ್ಯವಾಗಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಸವರಾಜು ಕೆ ಮಾತನಾಡಿ, ವಿದ್ಯಾರ್ಥಿಗಳ ಚಿಂತನಾ ಮಟ್ಟ ಹೆಚ್ಚಿಸಿ ಪ್ರತಿಭಾ ಸಾಮರ್ಥ್ಯವನ್ನು ಅಭಿವ್ಯಕ್ತಪಡಿಸಲು ಒಂದು ವಿಷಯದ ಕುರಿತು ರಚಿಸುವ ಸಂಶೋಧನಾ ಕಿರು ಪ್ರಬಂಧ ಸಹಕರಿಸುತ್ತದೆ ಎಂದರು.
ಪ್ರಾಧ್ಯಾಪಕರಾದ ರಘುರಾಜ್, ಡಾ. ಪ್ರಭು, ಇತರ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.