ಸಾರಾಂಶ
ಮುಂಡರಗಿ: ಹತ್ತು ವರ್ಷದ ಬಿಜೆಪಿ ಸರ್ಕಾರದ ಆಡಳಿತದಿಂದ ಬೇಸತ್ತಿರುವ ದೇಶದ ಜನತೆ ಈ ಬಾರಿ ಬದಲಾವಣೆ ಬಯಸಿದ್ದು, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಮತದಾರರ ಒಲವು ಕಾಂಗ್ರೆಸ್ ಪರವಾಗಿದೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ಡಿ.ಡಿ. ಮೋರನಾಳ ಹೇಳಿದರು.
ಅವರು ಭಾನುವಾರ ತಾಲೂಕಿನ ಹಮ್ಮಿಗಿ, ಗುಮ್ಮಗೋಳ, ವಿಠಲಾಪೂರ, ಬಿದರಹಳ್ಳಿ ಹಾಗೂ ಬೂದಿಹಾಳ ಗ್ರಾಮಗಳಲ್ಲಿ ಹಾವೇರಿ-ಗದಗ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಮತಯಾಚಿಸಿ ಮಾತನಾಡಿದರು.ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನತೆ ಕಂಗಾಲಾಗಿದ್ದಾರೆ. ಈ ಹಿಂದೆ ಕೇಂದ್ರದಲ್ಲಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಬೆಲೆ ಏರಿಕೆಯಾಗಿರಲಿಲ್ಲ. ಇಂದು ಜನತೆಗೆ ಕೈಗೆಟುಕದ ರೀತಿಯಲ್ಲಿ ದುಬಾರಿಯಾಗಿ ನಿಂತಿವೆ. ಹೀಗಾಗಿ ಬಿಜೆಪಿ ಸರ್ಕಾರ ಜನರ ನಂಬಿಕೆ, ವಿಶ್ವಾಸ ಕಳೆದುಕೊಂಡಿದೆ ಎಂದರು.
ಕಳೆದ 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಕೊಟ್ಟ ಮಾತಿನಂತೆ ನಡೆದುಕೊಂಡು 5 ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದು ಎಲ್ಲರಿಗೂ ತಲುಪಿಸುತ್ತಿದೆ. ಇಂದು ಅದೇ ಗ್ಯಾರಂಟಿ ಶಬ್ಧ ಬಿಜೆಪಿಯವರು ಕಾಫಿ ಮಾಡಿ ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಈ ಚುನಾವಣೆಯಲ್ಲಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಹೆಚ್ಚಿನ ಮತ ನೀಡುವ ಮೂಲಕ ಆರಿಸಿ ತಂದರೆ ಕೇಂದ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಅನುಕೂಲವಾಗುತ್ತದೆ ಎಂದರು.ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಸುಜಾತಾ ದೊಡ್ಡಮನಿ, ರುದ್ರಗೌಡ ಪಾಟೀಲ ಮಾತನಾಡಿ, ಈ ಚುನಾವಣೆಯಲ್ಲಿ ಬಿಜೆಪಿ ಏನೇ ಸುಳ್ಳು ಹೇಳಿದರೂ ಜನತೆಗೆ ನಂಬಿಕೆ ಉಳಿದಿಲ್ಲ. ಚುನಾವಣೆ ಪೂರ್ವದಲ್ಲಿ ಮತದಾರರಿಗೆ ನೀಡಿದ ಭರವಸೆ ಈಡೇರಿಸಿ ನುಡಿದಂತೆ ನಡೆಯುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ 5 ಗ್ಯಾರಂಟಿಗಳು ನಮ್ಮ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರ ಮಠ ಗೆಲವಿಗೆ ಕಾರಣವಾಗಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಮತ ನೀಡುವ ಮೂಡುವ ಮೂಲಕ ಆರಿಸಿ ತರಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಹೇಮಂತಗೌಡ ಪಾಟೀಲ, ಬಸವರಾಜ ಬಿಸನಳ್ಳಿ, ಎಂ.ಯು. ಮಕಾಂದಾರ, ರಾಜು ಡಾವಣಗೇರಿ, ನಾಗರಾಜ ಹೊಂಬಳಗಟ್ಟಿ, ದುದ್ದುಸಾಬ್ ಕಾತರಕಿ, ಯಲ್ಲಪ್ಪ ಹೊಂಬಳಗಟ್ಟಿ, ಬಸವರಾಜ ದೇಸಾಯಿ, ರಾಜಾಸಾಬ್ ಬೆಟಗೇರಿ, ಅಂದಾನಗೌಡ ಪಾಟೀಲ, ಆನಂದಗೌಡ ಪಾಟೀಲ ಮುಂಡವಾಡ, ವಿನೋದ ವಡ್ಡರ, ಪೂಜಾ ಕಮ್ಮಾರ, ಸೀತಾ ಬಸಾಪೂರ, ಅಬ್ದುಲ್ ಖುರೇಶಿ, ಮಹಾದೇವಕ್ಕ ಹಳ್ಳಿ, ಎಸ್.ಆರ್. ಬಸಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.