ಸಾರಾಂಶ
ಮೂಲ್ಕಿ: ಹಳೆಯಂಗಡಿ ಸಮೀಪದ ಪಾವಂಜೆ ನಿವಾಸಿ, ಸಂಶೋಧಕ, ಸಾಹಿತಿ, ನಿವೃತ್ತ ಇತಿಹಾಸ ಉಪನ್ಯಾಸಕ ಡಾ. ಕೆ. ಜಿ. ವಸಂತ ಮಾಧವ (88) ಬುಧವಾರ ರಾತ್ರಿ ಬೆಂಗಳೂರಿನ ಪುತ್ರಿಯ ಮನೆಯಲ್ಲಿ ನಿಧನರಾದರು. ಅವರು ಪತ್ನಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.ಪ್ರೊಫೆಸರ್ ಡಾ. ಕೆ.ಜಿ. ವಸಂತ ಮಾಧವ (ಗುಜ್ಜಾಡಿ ವಸಂತ ಮಾಧವ ಕೊಡಂಚ) ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ. ಪದವಿ ಪಡೆದಿದ್ದರು. 1961ರಿಂದ 37 ವರ್ಷ ಇತಿಹಾಸ ವಿಭಾಗದಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ನಲ್ಲಿ 5 ವರ್ಷ ಮತ್ತು ಮೂಲ್ಕಿಯ ವಿಜಯ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ 42 ವರ್ಷ ಕರ್ತವ್ಯ ನಿರ್ವಹಿಸಿದ್ದರು. ನಿವೃತ್ತಿಯ ನಂತರ ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರೊಫೆಸರ್ ಆಗಿದ್ದರು.ವಸಂತ ಮಾಧವ ಕುರಿತು ಕೃತಿಯನ್ನು ಡಾ. ಎಸ್. ಪದ್ಮನಾಭ ಭಟ್ಟರು ರಚಿಸಿದ್ದು ಕಾಂತಾವರ ಕನ್ನಡ ಸಂಘ ಪ್ರಕಟಿಸಿದೆ. ಹಲವು ಪುರಸ್ಕಾರಗಳಿಗೆ ಪಾತ್ರರಾಗಿರುವ ಅವರಿಗೆ ಲಂಡನ್ನಿನ ರೋಯಲ್ ಏಷಿಯಾಸ್ಟಿಕ್ ಸೊಸೈಟಿ 1983ರಲ್ಲಿ ಹಾಗೂ ಕೊಲ್ಕೊತ್ತಾದ ಇತಿಹಾಸ ಅಧ್ಯಯನ ಸಂಸ್ಥೆ 2017 ರಲ್ಲಿ ‘ಫೆಲೋ’ ಗೌರವ ನೀಡಿದೆ.
ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ಮೂಲ್ಕಿ ಸೀಮೆಯ ಅರಸ ದುಗ್ಗಣ್ಣ ಸಾವಂತರು, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು, ಕಿನ್ನಿಗೋಳಿಯ ಯುಗಪುರುಷದ ಕೆ ಭುವನಾಭಿರಾಮ ಉಡುಪ, ಜನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್, ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ ಬರ್ನಾಡ್ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.