‘ವಿಶ್ವ ಶಾಂತಿ ಶಿಕ್ಷಣ ಸಂಸ್ಥೆ’ ಸ್ಥಾಪಕ ಶ್ರೀಲಕ್ಕಪ್ಪ ಸ್ವಾಮೀಜಿ ನಿಧನ

| Published : Sep 19 2025, 01:00 AM IST

‘ವಿಶ್ವ ಶಾಂತಿ ಶಿಕ್ಷಣ ಸಂಸ್ಥೆ’ ಸ್ಥಾಪಕ ಶ್ರೀಲಕ್ಕಪ್ಪ ಸ್ವಾಮೀಜಿ ನಿಧನ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ ಸಂಸ್ಥೆ ಸ್ಥಾಪಿಸಿದ ದಿನದಿಂದ ಇಲ್ಲಿಯವರೆಗೂ ತಾಲೂಕಿನ ಸಾವಿರಾರು ವಿದ್ಯಾರ್ಥಿಗಳು ಇಂದಿಗೂ ವಿಶ್ವಶಾಂತಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಪಡೆದಿರುವ ಸಾವಿರಾರು ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾರೆ. ಸುಗ್ಗಿ ವೇಳೆಯಲ್ಲಿ ತಾಲೂಕಿನ ಬಹುಪಾಲು ಹಳ್ಳಿಗಳಿಗೆ ಭೇಟಿ ನೀಡಿ ಶಿಕ್ಷಣ ಮತ್ತು ಸರಳ ಜೀವನದ ಮಹತ್ವವನ್ನು ಸಾರಿದ್ದಾರೆ.

ಕನ್ನಡಪ್ರಭ ವಾರ್ತೆ ಎಚ್‌.ಡಿ.ಕೋಟೆ

ಮಾನವನಲ್ಲಿ ವಿಶ್ವಪ್ರಜ್ಞೆ ನೆಲೆಸಬೇಕೆಂಬ ಕನಸು ಕಟ್ಟಿ ಅವಿರತವಾಗಿ ‌ದುಡಿದ ಲಕ್ಕಪ್ಪ ಸ್ವಾಮೀಜಿ ಬುಧವಾರ ರಾತ್ರಿ ನಿಧನರಾದರು.

ಸುಮಾರು ತೊಂಬತ್ತು ವರ್ಷ ಪೂರೈಸಿರುವ ಶ್ರೀಗಳು ಬುಧವಾರ ಪ್ರಾರ್ಥನೆ ಮಂದಿರದಲ್ಲಿ ಆಯಾ ತಪ್ಪಿ ಬಿದ್ದು, ರಕ್ತಸ್ರಾವವಾಗಿ ಚಿಕಿತ್ಸೆಗೆ ಮೈಸೂರು ಆಸ್ಪತ್ರೆ ಸೇರಿಸಲಾದರೂ ಗುಣಮುಖರಾಗದೇ ಬುಧವಾರ ರಾತ್ರಿ ತಮ್ಮ ಸುದೀರ್ಘ ಸಾರ್ಥಕ ಬದುಕಿನ ಪಯಣ ಮುಗಿಸಿದ್ದಾರೆ. ಅವರ ಅಗಲಿಕೆಯಿಂದ ಅಪಾರ ಪ್ರಮಾಣದ ಅಭಿಮಾನಿಗಳಿಗೆ ವಿದ್ಯಾರ್ಥಿಗಳಿಗೆ. ಶಿಷ್ಯ ವೃಂದದವರಿಗೆ. ಸಂಬಂಧಿಸಿಕರಿಗೆ ಮತ್ತು ಶೋಷಿತ ಸಮುದಾಯಗಳಿಗೆ ತುಂಬಲಾರದ ನಷ್ಟ ಉಂಟಾಗಿದೆ.

1938 ಜೂ.6ರಂದು‌ಕಲ್ಪತರು ನಾಡಿನ ತಿಪಟೂರು ಸಮೀಪದ 20 ಕಿ.ಮೀ ದೂರದ ಗ್ರಾಮವೊಂದರಲ್ಲಿ ಜನಿಸಿದ ಲಕ್ಕಯ್ಯ ಇಂದಿನ ಶ್ರೀಲಕ್ಕಪ್ಪ ಸ್ವಾಮೀಜಿ. ಸಮಾಜದಲ್ಲಿರುವ ಅನಕ್ಷರತೆ, ಅಸ್ಪೃಶ್ಯತೆ, ಅಸಮಾನತೆಗಳನ್ನು ಹೋಗಲಾಡಿಸಿ ಮನಷ್ಯನನ್ನು ಮನುಷ್ಯನನ್ನಾಗಿ‌ರೂಪಿಸಲು ಹಗಲಿರುಳು ಚಿಂತಿಸಿದ್ದರು.

ಏಸುಕ್ರಿಸ್ತ, ಬಾಹುಬಲಿ, ಭಗವಾನ್ ಬುದ್ಧರ ಪ್ರೇರಣೆಯಂತೆ ಬ್ರಹ್ಮಚಾರಿಯಾಗಿ, ಅಪ್ಪಟ ಗಾಂಧಿವಾದಿಯಾಗಿ ಅಹಿಂಸೆ ಮಾರ್ಗವನ್ನು ಅನುಸರಿಸಿಕೊಂಡು ಸಕಲ ಜೀವರಾಶಿಗಳಿಗೂ ಒಳಿತನ್ನು ಬಯಸಿ, ಮಾನವೀಯ ಮೌಲ್ಯದ ನೆಲೆಗಟ್ಟನ್ನು ಸ್ಥಾಪಿಸಬೇಕು ಎನ್ನುವ ನಿಶ್ಚಲ ದೃಢ ನಿರ್ಧಾರದೊಂದಿಗೆ ಸನ್ಯಾಸತ್ವ ಸ್ವೀಕರಿಸಿದ ದಿನದಿಂದಲೂ ಬೇಯಿಸಿದ ಆಹಾರವನ್ನು ತೆಜಿಸಿ ದಿನಕ್ಕೆ ದಿನಕ್ಕೊಮ್ಮೆ ಕಡ್ಲೆಪುರಿ ಕಾಯಿ ಅಥವಾ ಪಚ್ಚ ಬಾಳೆಹಣ್ಣನ್ನು ಮಾತ್ರ ತಿಂದು ಸ್ವ ಪ್ರೇರಣೆಯಿಂದ ಸನ್ಯಾಸ ದೀಕ್ಷೆ ಪಡೆದ ಇವರಿಗೆ ಗುರುಗಳ ಬೋಧನೆಯಾಗಲಿ, ಮಾರ್ಗದರ್ಶನವಾಗಲಿ ಎಂದಿಗೂ ದೊರೆಯಲಿಲ್ಲ.

ತಮ್ಮ ಶಿಕ್ಷಣದ ನಂತರ ಹುಣಸೂರು ತಾಲೂಕಿನ‌ರತ್ನಪುರಿ ಗ್ರಾಮದ ಜಮೀನೊಂದರಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲಿ 1964 ರಲ್ಲಿ ಸಹಕಾರ ಸಂಘಗಳ ನಿಯಮದಡಿ ನೋಂದಣಿ ಮಾಡಿ ಶಾಂತಿ ಮತ್ತು ಶಿಕ್ಷಣದ ಮಹತ್ವ ಸಾರಲು ‘ವಿಶ್ವ ಶಾಂತಿ ಶಿಕ್ಷಣ ಸಂಸ್ಥೆ’ ತೆರೆದು, ಧರ್ಮ, ಜಾತಿ, ಮತ, ಪಂಥಗಳ ಬೇಧವಿಲ್ಲದೇ ಶಿಕ್ಷಣ ನೀಡಿ ಸಾಕಷ್ಟು ಜನರ ಭವಿಷ್ಯವನ್ನು ಉಜ್ವಲ

ಗೊಳಿಸಿದ್ದಾರೆ.

ಎಚ್.ಡಿ. ಕೋಟೆಗೂ ಸ್ವಾಮೀಜಿಗೂ ನಂಟು:

ಶಿಕ್ಷಣ ಸಂಸ್ಥೆ ಸ್ಥಾಪಿಸಿದ ದಿನದಿಂದ ಇಲ್ಲಿಯವರೆಗೂ ತಾಲೂಕಿನ ಸಾವಿರಾರು ವಿದ್ಯಾರ್ಥಿಗಳು ಇಂದಿಗೂ ವಿಶ್ವಶಾಂತಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಪಡೆದಿರುವ ಸಾವಿರಾರು ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾರೆ. ಸುಗ್ಗಿ ವೇಳೆಯಲ್ಲಿ ತಾಲೂಕಿನ ಬಹುಪಾಲು ಹಳ್ಳಿಗಳಿಗೆ ಭೇಟಿ ನೀಡಿ ಶಿಕ್ಷಣ ಮತ್ತು ಸರಳ ಜೀವನದ ಮಹತ್ವವನ್ನು ಸಾರಿದ್ದಾರೆ, ವಿಶೇಷವಾಗಿ ನೂರಲಕುಪ್ಪೆ, ಕೋಟೆ- ಮಲಾರ ಕಾಲೋನಿ, ಜಕ್ಕಹಳ್ಳಿ, ಮಾದಾಪುರ, ಜೊಂಪನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದ ಸ್ವಾಮೀಜಿ, ಮಕ್ಕಳ ದಾಸೋಹಕ್ಕಾಗಿ ದಾನ್ಯ ಸಂಗ್ರಹಿಸಿ ತೆರಳುತ್ತಿದ್ದರು. ಶ್ವೇತ ವಸ್ತ್ರದ ಪಂಚೆ ಬಿಟ್ಟರೆ ಮೈ ಮೇಲೆ ಯಾವುದೇ ಬಟ್ಟೆ ಬಳಸದೆ ಶಾಂತಿ ಸಂದೇಶ ಸಾರುತ್ತಿದ್ದ ಸ್ವಾಮೀಜಿ ಅವರ ಹಿಂದೆ ಯುವ ಸಮೂಹ ಜೊತೆಯಾಗಿ ಹೆಜ್ಜೆ ಇಡುತ್ತಿದ್ದರು.