ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸ್ಥಳೀಯ ಸಂಸ್ಥೆ ಕ್ಷೇತ್ರಗಳಿಗೆ ಕಾಂಗ್ರೆಸ್ ನಾಯಕರ ಅಣತಿಯಂತೆ ಮೀಸಲಾತಿ ನಿಗದಿಯಾಗಿದೆ. ವಿಪಕ್ಷದ ಶಾಸಕರ ಮನವಿಗೆ ಕಿಂಚಿತ್ತೂ ಬೆಲೆ ಕೊಟ್ಟಿಲ್ಲ ಎಂದು ಶಾಸಕ ಎಚ್.ಟಿ.ಮಂಜು ದೂರಿದರು.

ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರನ್ನು ಸ್ವಾಗತಿಸಿ ಮಾತನಾಡಿ, ಸಂಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಗೆ ಗೆಲ್ಲಲು ಸರ್ಕಾರ ಮನಸೋಯಿಚ್ಚೆ ಮೀಸಲಾತಿ ನಿಗದಿಪಡಿಸಿದೆ. ಈ ಪಟ್ಟಿ ಬಗ್ಗೆ ಯಾರಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ರದ್ದಾಗುವ ಸಂಭವವಿದೆ ಎಂದರು.

ವೈಜ್ಞಾನಿಕವಾಗಿ ಮೀಸಲು ನಿಗದಿ ಪಡಿಸಬೇಕಾಗಿತ್ತು. ಮೊದಲು ಬಿಡುಗಡೆಯಾಗಿದ್ದ ಕರಡು ಪಟ್ಟಿಯಲ್ಲಿಯೇ ಹಲವು ದೋಷಗಳಿದ್ದವು. ಈಗ ಅಂತಿಮವಾಗಿ ಪ್ರಕಟಗೊಂಡಿರುವ ಮೀಸಲಾತಿ ಪಟ್ಟಿಯಲ್ಲಿಯೂ ಇನ್ನೂ ಹೆಚ್ಚಿನ ಗೊಂದಲಗಳಿವೆ.

2 ಎ ವರ್ಗವನ್ನು ಪ್ರತಿನಿಧಿಸುವ ಕ್ಷೇತ್ರವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿದರೆ ಅಲ್ಲಿಯ ಜನರಿಗೆ ಅನ್ಯಾಯವಾಗುವುದಿಲ್ಲವೆ?, ಇದರ ಅರಿವು ಅಧಿಕಾರಿಗಳಿರಬೇಕೆಲ್ಲವೆ?, ರಾಜಕಾರಣಿಗಳ ಮಾತಿಗೆ ಬೆಲೆಕೊಟ್ಟು ಮೀಸಲಾತಿ ನಿಗದಿಪಡಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.


ಈ ಹಿಂದೆ ಇದ್ದ ರಾಜ್ಯ ಸರ್ಕಾರಗಳು ಇಂತಹ ಪ್ರಮಾದ ಮಾಡಿರಲಿಲ್ಲ. ಎಲ್ಲದರಲ್ಲಿಯೂ ರಾಜಕೀಯವನ್ನು ಮಾಡುವುದಾದರೆ ಜನರಿಗೆ ನ್ಯಾಯ ನೀಡುತ್ತಾರೆ ಎಂದು ಹೇಗೆ ನಿರೀಕ್ಷಿಸುವುದು. ಅಭಿವೃದ್ಧಿಗೂ ಹಣ ಕೊಡುತ್ತಿಲ್ಲ. ಹಾಗಾದರೆ ವಿಪಕ್ಷಗಳ ಶಾಸಕರು ಕೆಲಸ ಮಾಡಬಾರದೆ ಎಂದರು.

ನಾನು ಒಬ್ಬ ಜವಾಬ್ದಾರಿಯುತ ಶಾಸಕನಾಗಿ ಹಗಲಿರುಳು ಜನರ ಕೆಲಸ ಮಾಡುತ್ತಿದ್ದೇನೆ. ರಾಜಕೀಯ ವಿರೋಧಿಗಳು ಪ್ರತಿನಿತ್ಯ ಟೀಕೆಗಳನ್ನು ಮಾಡುತ್ತಾರೆ. ಅದನ್ನು ನಾನು ಸ್ವಾಗತಿಸುತ್ತೇನೆ. ನಮ್ಮನ್ನು ಸದಾ ಟೀಕೆ ಮಾಡುವ ಬದಲಿಗೆ ನಿಮ್ಮದೆ ಸರ್ಕಾರವಿದ್ದು, ಅಭಿವೃದ್ಧಿಗೆ ಹೆಚ್ಚು ಒತ್ತನ್ನು ನೀಡಿ. ನಿಮ್ಮ ಪಕ್ಷಕ್ಕೆ ಪ್ರಚಾರ ತೆಗೆದುಕೊಳ್ಳಿ. ನನ್ನದೇನು ಅಭ್ಯಂತರವಿಲ್ಲ ಎಂದು ತಿರುಗೇಟು ನೀಡಿದರು.

ಸ್ಥಳೀಯ-ಸಂಸ್ಥೆಗಳಲ್ಲಿ ಕಾರ್ಯಕರ್ತರಿಗೆ ಅಧಿಕಾರವನ್ನು ಜನರಿಂದ ಕೊಡಿಸಲು ನಮ್ಮ ಜೆಡಿಎಸ್ ಪಕ್ಷದ ಮುಖಂಡರು ಒಗ್ಗಟ್ಟಾಗಿ ದುಡಿಯುತ್ತಾರೆ. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಸದೃಢವಾಗಿ ಧೈರ್ಯವಾಗಿ ಚುನಾವಣೆ ಎದುರಿಸಲಿದೆ. ನಮ್ಮ ಕಾರ್ಯಕರ್ತರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳ ಪರ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಚುನಾವಣೆಯಲ್ಲಿ ಹಾಲು ಮತದ ಬಂಧುಗಳು ಮುಖ್ಯಮಂತ್ರಿ ಆಗಲಿ ಎಂಬ ಆಶಯದಿಂದ ಕಾಂಗ್ರೆಸ್‌ಗೆ ನೆರವು ನೀಡಿದರು. ಆದರೆ, ಪ್ರಸ್ತುತ ಪರಿಸ್ಥಿತಿ ಭಿನ್ನವಾಗಿದೆ. ಕಾಂಗ್ರೆಸ್ ಸಿದ್ದರಾಮಯ್ಯ ಅವರನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ ಎಂಬ ಅರಿವು ಜನ ಸಾಮಾನ್ಯರಿಗಾಗಿದೆ ಎಂದರು.

ಕ್ಷೇತ್ರದಲ್ಲಿ ನಮ್ಮಿಂದ ರಾಜಕೀಯ ಕಾರಣಗಳಿಗೆ ದೂರವಾಗಿರುವ ಬಂಧುಗಳನ್ನು ಪಕ್ಷಕ್ಕೆ ವಾಪಸ್ ಕರೆತರುವ ಮೂಲಕ ಕಾರ್ಯಕರ್ತರಿಗೆ ಅಧಿಕಾರವನ್ನು ಕೊಡಿಸುವ ಕೆಲಸ ಮಾಡಬೇಕು. ನಿಮಮೆಲ್ಲರ ಜೊತೆಯಲ್ಲಿ ನಾನು ಕೂಡಾ ಶ್ರಮಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಅಕ್ಕಿಹೆಬ್ಬಾಳು ರಘು, ತಾಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ಮಹಿಳಾ ಘಟಕದ ಅಧ್ಯಕ್ಷೆ ರೇಖಾ, ಮುಖಂಡರಾದ ಬೆಳತೂರು ಪುಟ್ಟೇಗೌಡ, ಮಾಂಬಳ್ಳಿ ಅಶೋಕ್, ಕಾಂತರಾಜು ಮಾಂಬಳ್ಳಿ, ಕಟ್ಟೆಕ್ಯಾತನಹಳ್ಳಿ ಚಂದ್ರೇಗೌಡ, ದೇವರಾಜು, ಮದನ್, ಪದ್ಮೇಶ್, ಸಂಗಾಪುರ ನವೀನ್, ಅಂಬಿಗರಹಳ್ಳಿ ವೆಂಕಟೇಶ್, ಕುಮಾರ್ ಸೇರಿದಂತೆ ಹಲವರಿದ್ದರು.