ಕೋಟೆ ಕೊತ್ತಲು ಹಾಗೂ ಇತಿಹಾಸ ಭರಿತ ಸಾಧಕರು ಅವರ ಕಾಲದ ಆಡಳಿತ ನಡೆಸಿದ ಚಿತ್ರಣಗಳು, ಬಿಟ್ಟು ಹೋದ ಇತಿಹಾಸಗಳು, ಚರಿತ್ರೆಯನ್ನು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಳಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಹಿಂದಿನ ಇತಿಹಾಸ ತಿಳಿಸುವ ಸ್ಮಾರಕ ಹಾಗೂ ವಸ್ತುಗಳ ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗಳಿಗೆ ಪರಿಚಯಿಸಿಕೊಡಬೇಕಿದೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.

ಪಟ್ಟಣದ ಟಿಪ್ಪು ಬೇಸಿಗೆ ಅರಮನೆ (ದರಿಯಾದೌಲತ್ ಭಾಗ್) ಮುಂಭಾಗ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಬೆಂಗಳೂರು ವಿಭಾಗದಿಂದ ಆಯೋಜಿಸಿದ್ದ ವಿಶ್ವ ಪಾರಂಪರಿಕ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರೂ ಸ್ಮಾರಕ ಸಂರಕ್ಷಣೆ ಮಾಡಬೇಕು. ಅಲ್ಲದೇ, ಇತಿಹಾಸಕಾರರ ಒಬ್ಬೋಬ್ಬರ ಮಾಹಿತಿಗಳು ಒಂದೊಂದು ರೀತಿಯಲ್ಲಿರುತ್ತವೆ. ಕೋಟೆ ಕೊತ್ತಲು ಹಾಗೂ ಇತಿಹಾಸ ಭರಿತ ಸಾಧಕರು ಅವರ ಕಾಲದ ಆಡಳಿತ ನಡೆಸಿದ ಚಿತ್ರಣಗಳು, ಬಿಟ್ಟು ಹೋದ ಇತಿಹಾಸಗಳು, ಚರಿತ್ರೆಯನ್ನು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಳಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕು ಎಂದರು.

ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆಯಿಂದ ಅಳಿದುಳಿದ ಸ್ಮಾರಕ ಕಟ್ಟಡಗಳ ನಿರ್ವಹಣೆಗೆ ಒಂದು ಬಜೆಟ್ ಮಾಡಬೇಕು. ಇತಿಹಾಸ ಪ್ರಸಿದ್ಧಿ ಹೊಂದಿರುವ ಸ್ಮಾರಕಗಳ ಸಂರಕ್ಷಣೆಗೆ ಮರು ಜೀವ ನೀಡಬೇಕು ಎಂದರು.

ಮೈಸೂರು ಯೂನಿವರ್ಸಿಟಿಯ ಇತಿಹಾಸ ಹಾಗೂ ಪುರಾತತ್ವ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಎನ್.ಎಸ್ ರಂಗರಾಜು ಮಾತನಾಡಿ, ಪಟ್ಟಣದಲ್ಲಿ ಒಂದರಲ್ಲೆ 9 ಪ್ರಮುಖ ಸ್ಮಾರಕಗಳಿವೆ. ಇವುಗಳ ನಿರ್ವಹಣೆಯಲ್ಲಿ ರಾಜ್ಯ ಪುರಾತತ್ವ ಇಲಾಖೆ ವಿಫಲವಾಗಿದೆ. ಇವುಗಳನ್ನ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಲು, ಭಾರತೀಯ ಸರ್ವೇಕ್ಷಣ ಇಲಾಖೆ ಆಸಕ್ತ ತೋರಿ ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ, ಕಲೆಯ ಅನಾವರಣಗೊಂಡಿತು. ಪಾರಂಪರಿಕ ಸಪ್ತಾಹದ ಅಂಗವಾಗಿ ನಡೆದ ಹಲವು ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಈ ವೇಳೆ ಬೆಂಗಳೂರು ವಿಭಾಗದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಜಂಟಿ ನಿರ್ದೇಶಕ ಡಾ.ನೀಲ್ ದಾಸ್, ಡಾ.ವೀರ ರಾಘವನ್, ಸುನೀಲ್ ಕುಮಾರ್, ರಮೇಶ್ ಕುಮಾರ್ ಸೇರಿ ಇತರರು ಇದ್ದರು.