ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸಂಘ ನೂರು ವಸಂತಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಪಂಚ ಪರಿವರ್ತನೆ ಸೂತ್ರದೊಂದಿಗೆ ಬದಲಾವಣೆಗೆ ಸಂಕಲ್ಪ ಮಾಡಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಂಪರ್ಕ ಪ್ರಮುಖ ಸುಧೀರಸಿಂಗ್ ಘೋರ್ಪಡೆ ಹೇಳಿದರು.ನಗರದ ದರಬಾರ್ ಹೈಸ್ಕೂಲ್ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ವತಿಯಿಂದ ನಡೆದ ವಿಜಯದಶಮಿ ಉತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪರಿಸರದಲ್ಲಿ ಪರಿವರ್ತನೆ ಹಾಗೂ ಸಂರಕ್ಷಣೆ, ಸಾತ್ವಿಕ ಆಹಾರ ಪದ್ಧತಿ, ಕುಟುಂಬ ವ್ಯವಸ್ಥೆ ಹಾಗೂ ಶಿಕ್ಷಣ ವ್ಯವಸ್ಥೆಗೆ ಸನಾತನ ಸಂಸ್ಕೃತಿಯ ಸ್ಪರ್ಶ ಹೀಗೆ ಅನೇಕ ಪರಿವರ್ತನೆಯ ಸಂಕಲ್ಪವನ್ನು ಸಂಘ ಮಾಡಿದೆ ಎಂದರು.ದೇಶದಲ್ಲಿ ಯಾವ ವಿದ್ಯಮಾನವೂ ಉದ್ಭವಿಸಿದರೂ ಈ ಬಗ್ಗೆ ಸಂಘದ ದೃಷ್ಟಿಕೋನ ಏನು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರೇ ಇದು ಸಂಘದ ವಿರಾಟ ರೂಪದ ಒಂದು ಪ್ರತೀಕ. ಜಗತ್ತಿನ ಅನೇಕ ಕಡೆ ಯುದ್ಧ ನಡೆದು ಮಾನವೀಯತೆಗೆ ಸವಾಲೊಡ್ಡಿದೆ. ಇಂದು ಅನೇಕ ರಾಷ್ಟ್ರಗಳು ಯುದ್ಧ ಕೊನೆಗಾಣಲು ಭಾರತದ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕೆಂದು ಎದುರು ನೋಡುತ್ತಿರುವುದಕ್ಕೆ ಹಿಂದೂ ಸಂಸ್ಕೃತಿಯೇ ಕಾರಣ. ಇದು ಪೂರ್ವಜರ ತಪಸ್ಸಿನ ಫಲ. ಯಾರಿಗೂ ಆಕ್ರಮಣ, ಮತಾಂತರ ಮಾಡುವ, ಸಮರ ಸಾರುವ ಮನೋಭಾವ ಹಿಂದೂ ಸಮಾಜದಲ್ಲಿಲ್ಲ. ಆಕ್ರಮಣ ಎದುರಾದರೂ ಅದನ್ನು ಸಹಿಸಿಕೊಂಡು ತಮ್ಮತನ ಉಳಿಸಿಕೊಂಡಿದ್ದು ಭಾರತ ಹಿಂದೂ ಸಮಾಜ ಎಂದು ವಿವರಿಸಿದರು.ರೋಲೆಕ್ಸ್, ಹುಬ್ಲಾಟ್ ಮೊದಲಾದ ವಿದೇಶಿಗರ ಬ್ರ್ಯಾಂಡ್‌ಗಳನ್ನೇ ಪ್ರತಿಷ್ಠೆಯಾಗಿಸುವ ಮನೋಭಾವದಿಂದ ಹೊರಬಂದು ಸ್ವದೇಶಿ ಭಾವ ಜಾಗೃತವಾಗಬೇಕು. ಸ್ವದೇಶಿ ಬಟ್ಟೆ ಒಂದೇ ದಿನದ ಆಚರಣೆಯಾಗಬಾರದು, ಗೋ ಆಧಾರಿತ ಕೃಷಿ ಕೇಂದ್ರಿತ ಸ್ವದೇಶಿ ಚಿಂತನೆ, ವಿದೇಶಿ ವಸ್ತುಗಳ ವ್ಯಾಮೋಹದಿಂದ ದೂರವಾಗಬೇಕಿದೆ ಎಂದು ತಿಳಿಸಿದರು.
ಕೆಲವೊಂದು ಸಮಾಜ ಘಾತುಕ ಶಕ್ತಿಗಳಿಗೆ ವಿದೇಶಿ ಮತಾಂಧ ಶಕ್ತಿಗಳು ಬಲ ತುಂಬುತ್ತಿವೆ. ವಿಧಾನಸೌಧದ ಪವಿತ್ರ ಸ್ಥಳದಲ್ಲಿ ಪಾಕ್ ಘೋಷಣೆ ಮೊಳಗಿದೆ. ಇದಕ್ಕೆ ಯಾರು ಪ್ರೇರಣೆ, ಯಾರಿಂದ ಅವರಿಗೆ ಪ್ರೋತ್ಸಾಹ ಸಿಗುತ್ತಿದೆ. ಪ್ರೆಷರ್ ಕುಕ್ಕರ್ ಬಾಂಬ್ ಇರಿಸಿದ ವ್ಯಕ್ತಿಗಳನ್ನು ಹಿರಿಯ ಜವಾಬ್ದಾರಿ ರಾಜಕೀಯ ಮುಖಂಡ ಅವರನ್ನು ಬ್ರದರ್ ಎಂದು ಕರೆದ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಹಿಂದೂ ಎಂದರೆ ಜಾತಿ ಸೂಚಕವಲ್ಲ, ಇಲ್ಲಿನ ಗಾಳಿ, ಬೆಳಕು ಸ್ವೀಕರಿಸುತ್ತಿರುವ ಪ್ರತಿಯೊಬ್ಬರು ಹಿಂದೂಗಳು, ಈ ಚಿಂತನೆ ಸಮಾಜದಲ್ಲಿ ಬೇರೂರಬೇಕಿದೆ. ಮುಸಲ್ಮಾನರು ಸಹ ಹಿಂದೂಗಳೇ, ಘೋರಿ, ಆದಿಲ್ ಷಾಹಿ ಮೊದಲಾದವರಿಂದ ಹೆದರಿಯೋ, ಒತ್ತಾಯದಿಂದಲೋ ಅವರು ಮುಸಲ್ಮಾನರಾಗಿದ್ದಾರೆ ಎಂದು ತಿಳಿಸಿದರು.ಡಾ.ಕೇಶವ ಹೆಗಡೆವಾರ ಅವರು ಅಂದು ಮನಸ್ಸು ಮಾಡಿದರೇ ವೈದ್ಯರಾಗಿ ದೊಡ್ಡ ಪ್ರಮಾಣದಲ್ಲಿ ದುಡ್ಡು ಗಳಿಸಬಹುದಿತ್ತು. ಆದರೆ, ಮುಂದೆ ಯಾವತ್ತೂ ಭಾರತ ಪರಕೀಯರ ಆಳ್ವಿಕೆಗೆ ಒಳಪಡದೇ ಸ್ವಾಭಿಮಾನಿಯಾಗಬೇಕು. ಹಿಂದೂ ಸಮಾಜ ಜಾಗೃತವಾದರೇ ಮಾತ್ರ ಇದು ಸಾಧ್ಯ ಎಂದು ಅರಿತು ಮಹಾರಾಣಾ ಪ್ರತಾಪ್ ಸಿಂಹ್ ಅವರ ಜೀವನದಿಂದ ಸ್ಫೂರ್ತಿ ಪಡೆದು ಸಂಘವನ್ನು ರೂಪಿಸಿದರು ಎಂದು ವಿವರಿಸಿದರು.ನಿವೃತ್ತ ಪೊಲೀಸ್ ಉಪ ಅಧೀಕ್ಷಕ ಶಂಕರ ಜೀರಗಾಳ ಮಾತನಾಡಿ, ಸಂಘ ಶಿಸ್ತು, ದೇಶಾಭಿಮಾನಕ್ಕೆ ಇನ್ನೊಂದು ಹೆಸರು, ಮಹಾತ್ ಗಾಂಧೀಜಿ ಸಹ ಸಂಘದ ಶಿಸ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನೆಹರೂ ಅವರು ಸಹ ಗಣರಾಜ್ಯೋತ್ಸಚ ಪರೇಡ್‌ಗೆ ಸಂಘ ಸ್ವಯಂ ಸೇವಕರನ್ನು ಆಹ್ವಾನಿಸಿದರು ಎಂದರು.
ಆರ್.ಎಸ್.ಎಸ್ ವಿಜಯಪುರ ವಿಭಾಗ ಸಂಘ ಚಾಲಕ ಚಿದಂಬರ ಕರಮರಕರ ಮುಂತಾದವರು ಇದ್ದರು. ಮುನ್ನ ಗಣವೇಷಧಾರಿಗಳಿಂದ ಆತ್ಮ ರಕ್ಷಣಾ ಕಲೆಯ ಪ್ರದರ್ಶನ, ವಿವಿಧ ಯೋಗಾಸನಗಳ ಪ್ರದರ್ಶನ ನಡೆಯಿತು. ಶಿಸ್ತು ಹಾಗೂ ಏಕತೆ ಪ್ರತಿಬಿಂಬಿಸುವ ಸಮತಾ ಪ್ರಯೋಗವನ್ನು ಗಣವೇಷಧಾರಿಗಳು ಪ್ರದರ್ಶಿಸಿದರು.ಕೋಟ್....ಗಣಪತಿಯ ಮೆರವಣಿಗೆ ಅಲ್ಲಿ ಹಾದು ಹೋಗಬಾರದು ಎಂದರೇ ಇದೇನು ಪಾಕಿಸ್ತಾನವೇ? ಭಾರತ ಮಾತಾ ಕೀ ಜೈ ಎಂದು ಘೋಷಣೆ ಕೂಗಿದವರನ್ನು ಬಂಧಿಸಿದ ದೊಡ್ಡ ದುರ್ದೈವ ನಡೆದು ಹೋಯಿತು. ಲವ್ ಜಿಹಾದ್ ದೊಡ್ಡ ಸವಾಲು, ವಿದೇಶಿ ಶಕ್ತಿಗಳು ಇದಕ್ಕೆ ಕುಮ್ಮಕ್ಕು ನೀಡುತ್ತಿವೆ. ರಾಷ್ಟ್ರೀಯತೆಯ ಚಿಂತನೆ ನಮ್ಮ ನರ ನಾಡಿಗಳಲ್ಲಿ ಪಸರಿಸಬೇಕಿದೆ.-ಸುಧೀರಸಿಂಗ್ ಘೋರ್ಪಡೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಂಪರ್ಕ ಪ್ರಮುಖರು.