ಸಾರಾಂಶ
- ಸರ್ಕಾರಿ, ಅರೆ ಸರ್ಕಾರಿ ನೇಮಕಾತಿ, ಎಸ್‌ಸಿಗೆ ಸಂಬಂಧಿಸಿದ ಹಣಕಾಸು, ಇತರೆ ಎಲ್ಲ ಸೌಲಭ್ಯ ಸ್ಥಗಿತಕ್ಕೆ ತಾಕೀತು - 23ರಂದು ಒಳಮೀಸಲಾತಿ ಜಾರಿಗಾಗಿ ಮಾದಿಗ, ಛಲವಾದಿಗಳಿಂದ ಪ್ರತಿಭಟನೆ: ಪ್ರವಾಸಿ ಮಂದಿರದಲ್ಲಿ ಮುಖಂಡರ ಹೇಳಿಕೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಸುಪ್ರೀಂ ಕೋರ್ಟ್ ಆದೇಶದಂತೆ ಪರಿಶಿಷ್ಟ ಜಾತಿಯಲ್ಲಿ ತಕ್ಷಣವೇ ಒಳಮೀಸಲಾತಿ ಸೌಲಭ್ಯ ಕಲ್ಪಿಸುವವರೆಗೂ ರಾಜ್ಯದಲ್ಲಿ ಎಲ್ಲ ಸರ್ಕಾರಿ, ಅರೆ ಸರ್ಕಾರಿ ನೇಮಕಾತಿಗಳನ್ನು ಹಾಗೂ ಪರಿಶಿಷ್ಟ ಜಾತಿಗೆ ಸಂಬಂಧಿಸಿದ ಹಣಕಾಸು ಮತ್ತು ಇತರೆ ಎಲ್ಲ ಸೌಲಭ್ಯಗಳನ್ನು ಸ್ಥಗಿತಗೊಳಿಸುವಂತೆ ಮಾದಿಗ ಮತ್ತು ಛಲವಾದಿ ಇತರೆ ಸಮುದಾಯಗಳು ಒತ್ತಾಯಿಸಿವೆ.ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಡಗೈ-ಬಲಗೈ ಸಮುದಾಯದ ಮುಖಂಡರು, ನಿವೃತ್ತ ಪೊಲೀಸ್ ಅಧೀಕ್ಷಕರಾದ ರವಿನಾರಾಯಣ, ಎನ್.ರುದ್ರಮುನಿ, ನಿವೃತ್ತ ಕೆಎಎಸ್ ಅಧಿಕಾರಿ ಬಿ.ಎಸ್.ಪುರುಷೋತ್ತಮ ಇತರರು, ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಗೆ ಒತ್ತಾಯಿಸಿ ಸೆ.23ರಿಂದ ರಾಜ್ಯವ್ಯಾಪಿ ತೀವ್ರ ಸ್ವರೂಪದ ಹೋರಾಟ ಶುರುವಾಗಲಿದೆ. ದಾವಣಗೆರೆಯಲ್ಲೂ ಹೋರಾಟ ಕಾವು ಪಡೆಯಲಿದೆ ಎಂದರು.
ಒಳ ಮೀಸಲಾತಿಗಾಗಿ ಅ.23ರ ಬೆಳಗ್ಗೆ 10.30ಕ್ಕೆ ನಗರದ ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟು, ಉಪವಿಭಾಗಾಧಿಕಾರಿ ಕಚೇರಿಗೆ ತಲುಪಲಾಗುವುದು. ಅಲ್ಲಿ ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಗುವುದು ಎಂದರು.ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ತೀರ್ಪಿನಂತೆ ಒಳ ಮೀಸಲಾತಿ ಕಲ್ಪಿಸುವ ಕೆಲಸ ಆಗಬೇಕು. ಈಗಾಗಲೇ ಸರ್ಕಾರದ ಬಳಿ ಲಭ್ಯ ದತ್ತಾಂಶಗಳ ಆಧಾರದಲ್ಲಿ ಒಳ ಮೀಸಲಾತಿ ನೀಡಲು ಯಾವುದೇ ಅಡ್ಡಿ, ಆತಂಕ ಇಲ್ಲ. ಯಾವುದೇ ಕಾಯ್ದೆ, ಕಾನೂನು ತಿದ್ದುಪಡಿ ಮಾಡುವ ಅಗತ್ಯವೂ ಇಲ್ಲ. ಆದರೆ, ರಾಜ್ಯ ಸರ್ಕಾರ ಒಳ ಮೀಸಲಾತಿ ನೀಡಲು ಮೀನ-ಮೇಷ ಎಣಿಸುತ್ತಿರುವುದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದರು.
ಇದು ಮುಖಂಡರ ಹೋರಾಟವಲ್ಲ. ಸಮುದಾಯಗಳ ಹೋರಾಟ. ನಮ್ಮ ಹೋರಾಟಕ್ಕೆ ಸ್ಪಂದಿಸದಿದ್ದರೆ ರಾಜ್ಯವ್ಯಾಪಿ ಆಮರಣಾಂತ ಉಪವಾಸ ಸತ್ಯಾಗ್ರಹ ಸೇರಿದಂತೆ ಹೋರಾಟ ತೀವ್ರ ಸ್ವರೂಪಕ್ಕೆ ಕೊಂಡೊಯ್ಯಬೇಕಾದೀತು ಎಂದು ಅವರು ಎಚ್ಚರಿಸಿದರು.ನ್ಯಾಯಮೂರ್ತಿ ಸದಾಶಿವ ಆಯೋಗ, ನಾಗಮೋಹನ ದಾಸ್ ಆಯೋಗ, ಕಾಂತರಾಜು ಆಯೋಗದ ವರದಿ, ಮಾಧುಸ್ವಾಮಿ ನೇತೃತ್ವದ ಸಮಿತಿ ವರದಿಗಳು ಸರ್ಕಾರದ ಮುಂದಿವೆ. ಎಲ್ಲ ಮಾಹಿತಿ, ವಿವರ ನಿಮ್ಮ ಬಳಿಯೇ ಇದ್ದು, ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ ಮೀಸಲಾತಿ ಘೋಷಣೆಗೆ ಮುಂದಾಗಬೇಕು. ಅ.24 ಅಥವಾ 25ರ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಘೋಷಿಸದಿದ್ದರೆ ರಾಜಸ್ಥಾನದ ಗುಜ್ಜರ್ ಸಮುದಾಯದ ಮಾದರಿಯ ಹೋರಾಟ ಇಲ್ಲಿ ನಡೆಸಬೇಕಾದೀತು ಎಂದು ಅವರು ಸೂಚ್ಯವಾಗಿ ಹೇಳಿದರು.
ಮಾದಿಗ, ಛಲವಾದಿ ಇತರೆ ಸಮುದಾಯಗಳ ಮುಖಂಡರಾದ ಎಚ್.ಮಲ್ಲೇಶ, ಪಾಲಿಕೆ ಸದಸ್ಯರಾದ ಬಿ.ಎಚ್. ಉದಯಕುಮಾರ, ಎಲ್.ಡಿ.ಗೋಣೆಪ್ಪ, ಎಲ್.ಎಂ.ಎಚ್.ಸಾಗರ್, ಆಲೂರು ನಿಂಗರಾಜ, ಬಿ.ಎಂ. ನಿರಂಜನ, ಹೆಗ್ಗೆರೆ ರಂಗಪ್ಪ, ಕುಂದುವಾಡ ಮಂಜುನಾಥ, ಹಿರಿಯ ಪತ್ರಕರ್ತ ಕೆ.ಏಕಾಂತಪ್ಪ, ಕೆ.ಎಸ್. ಗೋವಿಂದರಾಜ, ಎಸ್.ಮಲ್ಲಿಕಾರ್ಜುನ, ಎಚ್.ಕೆ. ಬಸವರಾಜ, ಶೇಖರಪ್ಪ, ನಾಗಭೂಷಣ, ಓಂಕಾರಪ್ಪ, ಸೋಮಲಾಪುರ ಹನುಮಂತಪ್ಪ, ಎನ್.ನೀಲಗಿರಿಯಪ್ಪ, ಕೆಟಿಜೆ ನಗರ ರವಿಕುಮಾರ, ಕೆಟಿಜೆ ನಗರ ದುಗ್ಗಪ್ಪ, ಕಣ್ಣಾಳ ಅಂಜಿನಪ್ಪ ಇತರರು ಇದ್ದರು.- - -
ಬಾಕ್ಸ್ * ದಲಿತರ ಬಗ್ಗೆ ಸೌಜನ್ಯ ತೋರದ ಸರ್ಕಾರ: ಹಾಲೇಶ ಮಾದಿಗ ಸಮಾಜ ಮುಖಂಡ, ಪಾಲಿಕೆ ಮಾಜಿ ಸದಸ್ಯ ಎಂ.ಹಾಲೇಶ ಮಾತನಾಡಿ, ದಲಿತರ ಕಣ್ಣಲ್ಲಿ ಇಂದು ರಕ್ತ ಸುರಿಯುತ್ತಿದ್ದರೂ ಅದನ್ನು ಒರೆಸುವ ಸೌಜನ್ಯ ಸರ್ಕಾರ ತೋರುತ್ತಿಲ್ಲ. ಇಲ್ಲಿವರೆಗಿನ ಶಾಂತಿಯುತ ಹೋರಾಟ, ಬೇಡಿಕೆಗೆ ಸರ್ಕಾರ ಕಿವಿಗೊಟ್ಟಿಲ್ಲ. ಎಲ್ಲೆಲ್ಲೋ ಆಗುವಂತೆ ಬಸ್ಸಿಗೆ ಬೆಂಕಿ ಸೇರಿದಂತೆ ತೀವ್ರ ಸ್ವರೂಪದ ಹೋರಾಟಗಳು ಇಲ್ಲಿ ಆದಾಗ ಮಾತ್ರ ಸರ್ಕಾರ ಬೇಡಿಕೆ ಈಡೇರಿಸುತ್ತದಾ ಎಂದು ಪ್ರಶ್ನಿಸಿದರು. ಹುಬ್ಬಳ್ಳಿ ಘಟನೆಯಿಂದಲೂ ರಾಜ್ಯ ಸರ್ಕಾರ ಪಾಠ ಕಲಿತಿಲ್ಲವೆಂದರೆ, ದಾವಣಗೆರೆ ಹೋರಾಟ ಹೇಗಿರುತ್ತದೆ ಎಂಬುದನ್ನು ತೋರಿಸಿಕೊಡುತ್ತೇವೆ ಎಂದು ಗುಟುರು ಹಾಕಿದರು.- - - -20ಕೆಡಿವಿಜಿ1:
ದಾವಣಗೆರೆಯಲ್ಲಿ ಮಾದಿಗ, ಛಲವಾದಿ ಸಮುದಾಯಗಳ ಮುಖಂಡರು, ನಿವೃತ್ತ ಎಸ್‌ಪಿಗಳಾದ ರವಿನಾರಾಯಣ, ಎನ್.ರುದ್ರಮುನಿ, ನಿವೃತ್ತ ಕೆಎಎಸ್ ಅಧಿಕಾರಿ ಬಿ.ಎಸ್. ಪುರುಷೋತ್ತಮ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.