ಯುವಕರಲ್ಲಿ ರಾಷ್ಟ್ರಪ್ರೇಮ, ಕರ್ತವ್ಯ ಪ್ರಜ್ಞೆ ಸದಾ ಜಾಗೃತವಾಗಿರಲಿ

| Published : Oct 21 2024, 12:41 AM IST

ಯುವಕರಲ್ಲಿ ರಾಷ್ಟ್ರಪ್ರೇಮ, ಕರ್ತವ್ಯ ಪ್ರಜ್ಞೆ ಸದಾ ಜಾಗೃತವಾಗಿರಲಿ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮ, ಜಾತಿ ಸಂಘರ್ಷದ ಆತಂಕ ದೂರ ಮಾಡಲು ಮಾನವ ಧರ್ಮಕ್ಕೆ ಜಯವಾಗಲಿ

ಲಕ್ಷ್ಮೇಶ್ವರ: ರಾಷ್ಟ್ರದ ಸಂಪತ್ತಾದ ಯುವಕರಲ್ಲಿ ರಾಷ್ಟ್ರಪ್ರೇಮ, ಕರ್ತವ್ಯ ಪ್ರಜ್ಞೆ ಸದಾ ಜಾಗೃತವಾಗಿರಬೇಕು. ವಿಜ್ಞಾನ-ತಂತ್ರಜ್ಞಾನ ಮತ್ತು ರಾಜಕೀಯ ಸಂಘರ್ಷದಲ್ಲಿ ಧರ್ಮ ದಾರಿ ತಪ್ಪದಿರಲಿ ಎಂದು ಬಾಳೇಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಅವರು ಭಾನುವಾರ ಪಟ್ಟಣದ ಇಟಗಿ ಬಸವೇಶ್ವರ ದೇವಸ್ಥಾನದಲ್ಲಿ ಲಿಂ.ಜ.ವೀರಗಂಗಾಧರ ಶಿವಾಚಾರ್ಯರ ೪೨ನೇ ಪುಣ್ಯಸ್ಮರಣೋತ್ಸವದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಲಿಂ.ವೀರಗಂಗಾಧರ ಜಗದ್ಗುರುಗಳ ಬಗ್ಗೆ ಅಪಾರ ಭಕ್ತಿ, ಗೌರವ ಹೊಂದಿರುವ ಪಟ್ಟಣದ ಜನತೆ ಆ ಪರಂಪರೆ ಮಠ-ಪೀಠದೊಂದಿಗೆ ಮುಂದುವರೆಸಿಕೊಂಡು ಬರುತ್ತಿರುವುದು ಸದಾ ಸಂತಸವನ್ನುಂಟು ಮಾಡುತ್ತದೆ. ಸ್ವತಃ ಕೃಷಿ ಮಾಡುತ್ತಿದ್ದ ಅವರಿಗೆ ರೈತರ ಬಗ್ಗೆ ಅಪಾರ ಗೌರವ ಪ್ರೀತಿ ಹೊಂದಿದ್ದರು. ಧರ್ಮದ ಪುನರುತ್ಥಾನ ಮತ್ತು ಲೋಕೋದ್ಧಾರವನ್ನೆ ಜೀವನದ ಉಸಿರಾಗಿಸಿಕೊಂಡಿದ್ದ ಜಗದ್ಗುರುಗಳು ತಮ್ಮನ್ನೇ ಸಮರ್ಪಿಸಿಕೊಂಡಿದ್ದರು. ಧರ್ಮ, ಜಾತಿ ಸಂಘರ್ಷದ ಆತಂಕ ದೂರ ಮಾಡಲು ಮಾನವ ಧರ್ಮಕ್ಕೆ ಜಯವಾಗಲಿ...ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ವಿಶ್ವ ಶಾಂತಿಯ ಸಂದೇಶ ಸಾರಿದ್ದಾರೆ. ತೋರಿದ ಧರ್ಮ ಮಾರ್ಗದಲ್ಲಿ ಎಲ್ಲರೂ ಪರಸ್ಪರ ಸ್ನೇಹ, ಪ್ರೀತಿ, ಸಹೋದರತ್ವದಿಂದ ಬಾಳುವ ಸಂಕಲ್ಪ ಮಾಡೋಣ. ಲಿಂ. ವೀರಗಂಗಾಧರ ಜಗದ್ಗುರುಗಳ ತವರು ಲಕ್ಷ್ಮೇಶ್ವರದಂತೆಯೇ ಜಿಲ್ಲೆಯ ಗ್ರಾಮೀಣ ಪ್ರದೇಶ ಅಬ್ಬಿಗೇರಿ ಭಾಗದ ಜನರಲ್ಲೂ ಪೀಠದ ಬಗ್ಗೆ ಧರ್ಮಾಭಿಮಾನ, ಗೌರವ ಹೊಂದಿದ್ದಾರೆ. ಅದಕ್ಕೆ ಇತ್ತೀಚಿಗೆ ನಡೆದ ದಸರಾ ಸಮ್ಮೇಳನ ಸಾಕ್ಷಿಯಾಗಿದೆ ಎಂದರು.

ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಆಶೀರ್ವಚನ ನೀಡಿ, ಸೂರ್ಯ ಚಂದ್ರರಿರುವರೆಗೂ ಅವರು ಅಜರಾಮರ ಮತ್ತು ಭಕ್ತರ ಬದುಕಿನ ಬೆಳಕಾಗಿರುವರು. ವೀರಗಂಗಾಧರ ಜಗದ್ಗುರುಗಳು ಈ ನೆಲದ ನಡೆದಾಡುವ ದೇವರು ಅವರ ಆಶೀರ್ವಾದ ಶ್ರೀರಕ್ಷೆಯಲ್ಲಿ ಬದುಕುವ ನಾವೆಲ್ಲ ತ್ರಿಕೋಟಿ ಲಿಂಗ ಕಾರ್ಯಕ್ಕೆ ಕೈ ಜೋಡಿಸೋಣ. ಡಿಸಿಎಂ ಡಿ.ಕೆ. ಶಿವಕುಮಾರ ಪ್ರತಿಷ್ಠಾಪನಾ ಕಾರ್ಯಕ್ಕೆ ಈಗಾಗಲೇ ಕೋಟ್ಯಾಂತರ ಅನುದಾನ ಕಲ್ಪಿಸಿದ್ದು ಆದಷ್ಟು ಬೇಗ ಈ ಮಹೋನ್ನತ ಕಾರ್ಯ ಲೋಕಾರ್ಪಣೆಗೊಂಡು ಶ್ರೀಕ್ಷೇತ್ರ ಪವಿತ್ರ ತಾಣವಾಗಲಿದೆ ಎಂದರು.

ನೆಗಳೂರಿನ ಗುರುಶಾಂತಲಿಂಗ ಸ್ವಾಮಿಗಳು, ಮಾಜಿ ಶಾಸಕ ಜಿ.ಎಂ ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ ಮಾತನಾಡಿದರು. ವಿಜಯಕುಮಾರ ಮಹಾಂತಶೆಟ್ಟರ, ಚಂಬಣ್ಣ ಬಾಳಿಕಾಯಿ, ಸೋಮಣ್ಣ ಶಿರಹಟ್ಟಿ, ಸುರೇಶ ರಾಚನಾಯ್ಕರ, ಬಸಪ್ಪ ಉಮಚಗಿ, ಲಕ್ಷಪ್ಪ ಗೊಜನೂರ, ಬಸವಣ್ಣೆಪ್ಪ ಸೊಪ್ಪಿನ, ನಿಂಗಪ್ಪ ಜಾವೂರ, ಶೇಖಪ್ಪ ಹುರಕಡ್ಲಿ, ಮಂಜುನಾಥ ಜಲ್ಲಿ, ರುದ್ರಯ್ಯ ಘಂಟಾಮಠ, ವಿರುಪಾಕ್ಷ ಆದಿ, ಮಯೂರಗೌಡ ಪಾಟೀಲ, ಈರಣ್ಣ ಮುಳಗುಂದ, ಬಂಗಾರಪ್ಪ ಮುಳಗುಂದ, ನಂದೀಶ ಬಂಡಿವಾಡ, ಕಾಶಪ್ಪ ಮುಳಗುಂದ, ಮಲ್ಲೇಶಪ್ಪ ಹೊಟ್ಟಿ, ಮುತ್ತು ಕಟ್ಟಿಗೌಡ್ರ, ಬಸಯ್ಯ ಶಿಗ್ಲಿಮಠ ಸೇರಿ ಇಟಗಿ ಬಸವೇಶ್ವರ ದೇವಸ್ಥಾನ ಕಮೀಟಿ, ಪಂಚಾಚಾರ್ಯ ಭಜನಾ ಕಮೀಟಿ, ಸದ್ಬಕ್ತ ಮಂಡಳಿ, ಓಣಿಯ ಹಿರಿಯರು, ಮಹಿಳೆಯರು ಪಾಲ್ಗೊಂಡಿದ್ದರು. ಈಶ್ವರ ಮೆಡ್ಲೇರಿ, ಜಯಪ್ರಕಾಶ ಹೊಟ್ಟಿ, ನಾಗರಾಜ ಕಳಸಾಪುರ ನಿರ್ವಹಿಸಿದರು.