ಸಾರಾಂಶ
ಧಾರವಾಡ:
ಜಲಮಂಡಳಿಯಿಂದ ಎಲ್ ಆ್ಯಂಡ್ ಟಿ ಸಂಸ್ಥೆಗೆ ವರ್ಗಾವಣೆಯಾದ ನಂತರ ಅವಳಿ ನಗರದಲ್ಲಿ ಆಗಿರುವ ನೀರಿನ ಸಮಸ್ಯೆಗಳಿಗೆ ಇನ್ನೂ ಪರಿಹಾರ ದೊರೆತಿಲ್ಲ. ಪ್ರತಿ ಬಾರಿ ಸಭೆಯಲ್ಲಿ ಸದಸ್ಯರು ಎಲ್ ಆ್ಯಂಡ್ ಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೂ ಪರಿಹಾರ ಸಾಧ್ಯವಾಗಿಲ್ಲ. ಮುಂದುವರಿದ ಭಾಗವಾಗಿ ಮಂಗಳವಾರ ಧಾರವಾಡದ ಪಾಲಿಕೆ ಸಭಾಂಗಣದಲ್ಲಿ ಪಾಲಿಕೆ ಸದಸ್ಯರ ಕುಂದು-ಕೊರತೆ ಸಭೆಯಲ್ಲಿ ಮತ್ತದೇ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.ಮೇಯರ್ ರಾಮಪ್ಪ ಬಡಿಗೇರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೀರಿನ ಸಮಸ್ಯೆಗಳೇ ಪ್ರತಿಧ್ವನಿಸಿದವು. ನೀರು ಸರಬರಾಜು ವ್ಯವಸ್ಥೆಯನ್ನು ಎಲ್ ಆ್ಯಂಡ್ ಟಿಗೆ ವಹಿಸಿದ ಬಳಿಕ ಜನರಿಗೆ ಸಾಕಷ್ಟು ಸಮಸ್ಯೆಗಳು ಉದ್ಭವಿಸಿವೆ. ಸಕಾಲಕ್ಕೆ ನೀರು ಸರಬರಾಜು ಆಗುತ್ತಿಲ್ಲ. ದುರಸ್ತಿ ಕುರಿತು ದೂರು ನೀಡಿದರೂ ಪರಿಹರಿಸುವುದಿಲ್ಲ ಎಂಬ ದೂರುಗಳು ತೂರಿ ಬಂದವು.
ಮೇಯರ್ ಮಾತನಾಡಿ, ವಾರ್ಡ್‌ಗಳ ಕುಂದು-ಕೊರತೆ ಗಮನಿಸಿ ಪರಿಹರಿಸಲು ಕ್ರಮ ವಹಿಸಲಾಗುವುದು. ಪೈಪ್‌ಲೈನ್‌ಗೆ ಅಗೆದ ರಸ್ತೆ ಸರಿಪಡಿಸಿದ್ದನ್ನು ಅಧಿಕಾರಿಗಳು ಪರಿಶೀಲಿಸಿದ ಬಳಿಕವೇ ಹಣ ಪಾವತಿಸಬೇಕು. ಅಗೆದ ರಸ್ತೆಗೆ ಮೊದಲು ಸರಿಯಾಗಿ ಮಣ್ಣಿನಿಂದ ಮುಚ್ಚಬೇಕು. ಕೆಲ ತಿಂಗಳ ನಂತರ ಡಾಂಬರೀಕರಣ ಅಥವಾ ಕಾಂಕ್ರೀಟ್ ಮಾಡಬೇಕು. ಇದರಿಂದ ರಸ್ತೆ ಕುಸಿತ ತಪ್ಪಿಸಬಹುದು. ಈ ನಿಯಮವನ್ನು ಅಧಿಕಾರಿಗಳು ಪಾಲಿಸಬೇಕು ಎಂದು ಸೂಚಿಸಿದರು.ಸದಸ್ಯ ಮಯೂರ ಮೋರೆ ಮಾತನಾಡಿ, ಹೊಸ ನಳದ ಸಂಪರ್ಕಕ್ಕೆ ಐದಾರು ಮೀಟರ್ ಮಾತ್ರ ಪೈಪ್‌ಲೈನ್ ಮಾಡುತ್ತೇವೆ. ಉಳಿದಿದ್ದನ್ನು ಜನರೇ ಮಾಡಿಸಿಕೊಳ್ಳುವಂತೆ ಅಧಿಕಾರಿಗಳು ಹೇಳುತ್ತಿದ್ದಾರೆ. ಒಂದು ಸರ್ವೇ ನಂಬರ್‌ಗೆ ಒಂದೇ ಸಂಪರ್ಕ ಕಲ್ಪಿಸಲಾಗುತ್ತಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಪ್ರತಿ ಮನೆಗಳಿಗೆ ಪ್ರತ್ಯೇಕ ಸಂಪರ್ಕ ನೀಡಬೇಕು ಎಂದರು. ಇದಕ್ಕೆ ಧನಿಗೂಡಿಸಿದ ಕವಿತಾ ಕಬ್ಬೇರ, ನಾಲ್ಕು ವರ್ಷಗಳ ಹಿಂದೆ ನಿರ್ಮಾಣವಾದ ಮನೆಗಳಿಗೆ ಪೈಪ್‌ಲೈನ್ ಅಳವಡಿಸಲು ಎಲ್ ಆ್ಯಂಡ್ ಟಿ ತಕರಾರು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯ ಶಿವು ಹಿರೇಮಠ ಮಾತನಾಡಿ, ಪೈಪ್‌ಲೈನ್ ಅಳವಡಿಕೆ ನಂತರ ರಸ್ತೆ ದುರಸ್ತಿ ಯಾವ ರೀತಿ ಇರಬೇಕು ಎಂಬುದನ್ನು ಮೊದಲು ಅಧಿಕಾರಿಗಳು ತಿಳಿಯಲಿ. ಯಾವ ಸ್ಥಳದಲ್ಲೂ ರಸ್ತೆ ದುರಸ್ತಿ ಕಾರ್ಯವನ್ನು ಸರಿಯಾಗಿ ಮಾಡಿಲ್ಲ. ಇದಲ್ಲದೆ ಒಂದು ಬಿಲ್ ಸಮಸ್ಯೆ ಪರಿಹರಿಸಲು ಆರೇಳು ತಿಂಗಳಾಗುತ್ತಿದೆ. ಈ ಸಭೆಯಲ್ಲಿ ಚರ್ಚಿತವಾದ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸವಾಗಬೇಕೆ ಹೊರತು, ಕಾಟಾಚಾರದ ಸಭೆ ಆಗಬಾರದು ಎಂದರು. ಇದಕ್ಕೆ ವಿಪಕ್ಷ ನಾಯಕ ರಾಜಶೇಖರ ಕಮತಿ ಸಹ ಸಮ್ಮತಿಸಿದರು.ಸಹಾಯಕ ಆಯುಕ್ತ ಇ. ತಿಮ್ಮಪ್ಪ, ಕಂಪನಿಯ ಕೆಲ ಮಾರ್ಗಸೂಚಿಗಳಿಂದ ಸಮಸ್ಯೆ ಉದ್ಭವಿಸಿದೆ. ಮಾರ್ಗಸೂಚಿ ಬಿಟ್ಟು ಕೆಲಸ ಮಾಡುವ ಸಮಯದಲ್ಲಿ ವ್ಯವಸ್ಥಾಪಕ ನಿರ್ದೇಶಕರ ಅನುಮತಿ ಪಡೆಯಬೇಕಿದೆ. ಮಾರ್ಗಸೂಚಿಯಲ್ಲಿ ಬದಲಾವಣೆ ತರಲು ಪಾಲಿಕೆ ಸಭೆಯಲ್ಲಿ ನಿರ್ಣಯಿಸಿ ಸರ್ಕಾರಕ್ಕೆ ಕಳುಹಿಸಬೇಕು ಎಂದರು.
ಉಳಿದಂತೆ ಬಡಾವಣೆಗಳಲ್ಲಿನ ಕಸ ವಿಲೇವಾರಿ, ಸ್ವಚ್ಛತೆ, ಅಗತ್ಯಕ್ಕೆ ತಕ್ಕಂತೆ ಟಿಪ್ಪರ್ ವಿತರಣೆ, ಪೌರ ಕಾರ್ಮಿಕರ ನೇಮಕ ಸೇರಿ ವಿವಿಧ ವಿಷಯಗಳು ಕುರಿತು ಸದಸ್ಯರಾದ ಶಂಭುಗೌಡ ಸಾಲಮನಿ, ರತ್ನಾಬಾಯಿ ನಾಝರೆ, ಲಕ್ಷ್ಮಿ ಹಿಂಡಸಗೇರಿ ಗಮನ ಸೆಳೆದರು.ಉಮ ಮೇಯರ್ ದುರ್ಗಮ್ಮ ಬಿಜವಾಡ ಇದ್ದರು.