ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುನಿವೃತ್ತ ಪೊಲೀಸ್ ಅಧಿಕಾರಿಗಳು ಸಮಾಜ ಮತ್ತು ಪೊಲೀಸ್ ಇಲಾಖೆ ನಡುವಿನ ಸೇತುವೆ ಇದ್ದಂತೆ, ತಮ್ಮ ಅಪಾರ ಅನುಭವದ ಆಧಾರದಲ್ಲಿ ಇಲಾಖೆಗೆ ಸೂಕ್ತ ಸಲಹೆ ಸಹಕಾರ ನೀಡಿ ಇಲಾಖೆ ಜನಸ್ನೇಹಿ ಆಗಿ ಸೇವೆ ಸಲ್ಲಿಸಲು ಸಹಕಾರ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಹೇಳಿದರು.ಗುರುವಾರ ನಗರದಲ್ಲಿ ನಡೆದ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ೨೬ನೇ ವರ್ಷದ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ನಿಮ್ಮ ವಿಶ್ರಾಂತ ಬದುಕು ನೆಮ್ಮದಿಯಾಗಿರಲಿ. ಯಾವುದೇ ಸಮಸ್ಯೆಗಳಿದ್ದರೆ ನಮ್ಮೊಂದಿಗೆ ಸಮಾಲೋಚನೆ ಮಾಡಿ ಬಗೆಹರಿಸಿಕೊಳ್ಳಿ. ನಿವೃತ್ತರಿಗೆ ಇಲಾಖೆಯಿಂದ ದೊರೆಯಬೇಕಾಗಿರುವ ಸವಲತ್ತುಗಳನ್ನು ಸಕಾಲದಲ್ಲಿ ಒದಗಿಸಿಕೊಡುವ ಪ್ರಯತ್ನ ಮಾಡುವುದಾಗಿ ಹೇಳಿದರು.ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಕಚೇರಿಗಾಗಿ ನಿವೇಶನ ನೀಡಲು ಕೋರಿದ್ದೀರಿ. ಈ ಬಗ್ಗೆ ತಾವು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರಿಗೂ ಮನವಿ ಮಾಡಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈಗ ಗುರುತಿಸಿರುವ ಜಾಗವನ್ನು ಸಂಘಕ್ಕೆ ಮಂಜೂರು ಮಾಡಿಸಲಾಗುವುದು. ಇನ್ನೊಂದು ತಿಂಗಳಲ್ಲಿ ಈ ಕೆಲಸ ಆಗಲಿದೆ ಎಂದು ಎಸ್ಪಿ ಕೆ.ವಿ.ಅಶೋಕ್ ಹೇಳಿದರು.ಪೊಲೀಸ್ ಇಲಾಖೆಯಲ್ಲಿ ಕೆಲಸ ಪಡೆಯುವುದು, ಪಡೆದ ಮೇಲೆ ಕೆಲಸ ಮಾಡುವುದು ಈಗ ಸುಲಭವಲ್ಲ. ಇತ್ತೀಚೆಗೆ ಅಪರಾಧ ಪ್ರಕರಣಗಳೂ ಹೆಚ್ಚಾಗುತ್ತಿದೆ. ಈ ವರ್ಷದಲ್ಲಿ ಜಿಲ್ಲೆಯಲ್ಲಿ ಸುಮಾರು ಹತ್ತು ಸಾವಿರದಷ್ಟು ಎಫ್‌ಐಆರ್ ದಾಖಲಿಸಲಾಗಿದೆ. ಅಪರಾಧ ಪ್ರಕರಣಗಳ ಪತ್ತೆಗೆ ತಂತ್ರಜ್ಞಾನ ಅನುಸರಿಸಿದರೂ, ನಿಮ್ಮ ಅನುಭವ ಹಾಗೂ ಚಾತುರ್ಯ ಇಲಾಖೆಗೆ ನೆರವಾಗುತ್ತದೆ. ಅಂತಹ ಸಂದರ್ಭದಲ್ಲಿ ಸಹಕಾರ ನೀಡಲು ನೀವು ಮುಂದೆ ಬರಬೇಕು ಎಂದು ತಿಳಿಸಿದರು. ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಲ್.ಜಗದೀಶ್ ಮಾತನಾಡಿ, ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಹಳಷ್ಟು ಮಂದಿ ಸಂಘದ ಸದಸ್ಯರಾಗಿಲ್ಲ, ಅವರೆಲ್ಲಾ ಸದಸ್ಯರಾಗಲಿ, ಪೊಲೀಸ್ ಇಲಾಖೆಯಿಂದ ನಿವೃತ್ತರಿಗೆ ನೀಡುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಹೇಳಿದರು.ಸಂಘಕ್ಕೆ ನಿವೇಶನ ನೀಡಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ಈ ಬಗ್ಗೆ ಸಂಬಂಧಿಸಿದವರೊಂದಿಗೆ ಮಾತನಾಡಿ ನಿವೇಶನ ದೊರಕಿಸಿಕೊಡುವಂತೆ ಎಸ್ಪಿಯವರಿಗೆ ಮನವಿ ಮಾಡಿದರು.ಈ ವರ್ಷದಲ್ಲಿ ಮೃತಪಟ್ಟ ನಿವೃತ್ತ ಪೊಲೀಸರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. 2024-25ನೇ ಸಾಲಿನ ಸಂಘದ ಜಮಾ-ಖರ್ಚನ್ನು ಪರಿಶೀಲಿಸಿ ಅಂಗೀಕರಿಸಲಾಯಿತು. ಸಂಘದ ಗೌರವಾಧ್ಯಕ್ಷ, ನಿವೃತ್ತ ಎಸ್.ಪಿ ಜಿ.ಆನಂದ್, ಕಾರ್ಯಾಧ್ಯಕ್ಷ ಲೋಕೇಶ್ವರ್, ಉಪಾಧ್ಯಕ್ಷ ಎಸ್.ಬಿ.ಶಿವಬಸಪ್ಪ, ಖಜಾಂಚಿ ಸಿದ್ಧಗಂಗಯ್ಯ, ನಿರ್ದೇಶಕರಾದ ವೀರಭದ್ರಯ್ಯ, ಕೆ.ರಮೇಶ್, ಗಂಗಾಧರಯ್ಯ, ಟಿ.ಎಂ.ನಾಗರಾಜು, ಯು.ಆರ್.ಪ್ರಕಾಶ್, ರಾಮಕೃಷ್ಣಯ್ಯ. ಕೆ.ಜಿ.ನಾಗರಾಜು, ನಾಗಲಿಂಗಯ್ಯ, ಟಿ.ಎಸ್.ವೇಣುಗೋಪಾಲ್, ಸದಾಶಿವಪ್ಪ, ನಾಗರಾಜು, ಎಂ.ಪಿ.ಸುಶೀಲಮ್ಮ, ಎನ್.ಮಲ್ಲಶೆಟ್ಟಿ, ಮರುಳಯ್ಯ, ಶಿವಣ್ಣ, ನಾರಾಯಣಪ್ಪ, ಕೆ.ನಾಗಣ್ಣ, ಹೆಚ್.ಎಂ.ಕೃಷ್ಣಯ್ಯ, ಶಿವಶಂಕರಯ್ಯ, ಗೋಪಾಲನಾಯ್ಕ, ಕೃಷ್ಣಯ್ಯ ಮೊದಲಾದವರು ಭಾಗವಹಿಸಿದ್ದರು.