ಸಾರಾಂಶ
ಮುಂಡರಗಿ: ಮಹಿಳೆಯರು ತಮ್ಮ ಆತ್ಮ ನಿರ್ಧಾರದ ಮೇಲೆ ಕಾರ್ಯ ನಿರ್ವಹಿಸಲು ಶಿಕ್ಷಣ ಅತ್ಯಂತ ಅವಶ್ಯವಾಗಿದೆ. ಶಿಕ್ಷಣ ಪಡೆಯುವುದರಿಂದ ಆತ್ಮಧೈರ್ಯ ಬೆಳೆಸಿಕೊಳ್ಳಲು ಸಾಧ್ಯ. ಶ್ರಮ ವಹಿಸಿ ಕಾರ್ಯ ನಿರ್ವಹಿಸುವವರಿಗೆ ಪ್ರತಿಫಲ ಕಟ್ಟಿಟ್ಟ ಬುತ್ತಿ ಎಂದು ಜ.ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.
ಅವರು ಶನಿವಾರ ಶ್ರೀಅನ್ನದಾನೀಶ್ವರ ವಿದ್ಯಾ ಸಮಿತಿಯ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಎಂ.ಎಸ್. ಡಂಬಳ ಹೆಣ್ಣು ಮಕ್ಕಳ ಪ್ರೌಢಶಾಲೆ ಹಾಗೂ ಎಂ.ಎಸ್. ಡಂಬಳ ಮಹಿಳಾ ಪಪೂ ಕಾಲೇಜಿನ ಆಶ್ರಯದಲ್ಲಿ ಜರುಗಿದ ಮಹಿಳಾ ಸಬಲೀಕರಣ ಉಪನ್ಯಾಸ, ಮಹಿಳಾ ಸಾಧಕರಿಗೆ ಸನ್ಮಾನ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಇಂದು ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮುಂಚೂಣಿಯಲ್ಲಿದ್ದು ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಅನ್ನದಾನೀಶ್ವರ ಶಾಲಾ-ಕಾಲೇಜುಗಳಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಕಲಿತ ಶಾಲೆಗೆ, ಶಿಕ್ಷಣ ಸಂಸ್ಥೆಗೆ ತನು,ಮನ, ಧನದಿಂದ ಸಹಾಯ ಸಹಕಾರ ನೀಡುತ್ತಾ ಬಂದಿದ್ದಾರೆ. ಇದೀಗ ವಿದ್ಯಾ ಸಮಿತಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು ಅದಕ್ಕೆ ಹಾಗೂ ಪಿಯು ಕಾಲೇಜಿನ ಕಟ್ಟಡ ನಿರ್ಮಾಣಕ್ಕಾಗಿಯೂ ಸಹ ಧನ ಸಹಾಯ ನೀಡಲು ಮುಂದಾಗಿರುವುದು ಸಂತಸ ತಂದಿದೆ ಎಂದರು.
ನ್ಯಾಯಾಧೀಶೆ ಬಿ.ಯು.ಗೀತಾ ಮಾತನಾಡಿ, 40 ವರ್ಷಗಳ ಹಿಂದೆ ಇಲ್ಲಿ ವ್ಯಾಸಂಗ ಮಾಡಿದೆ. ಅಂದು ಇಲ್ಲಿ ನಾನೂ ಸಹ ಸಾಮಾನ್ಯ ವಿದ್ಯಾರ್ಥಿಯಾಗಿದ್ದೆ. ನನ್ನ ಶಾಲೆ ನನ್ನ ಹೆಮ್ಮೆ.ಇಲ್ಲಿನ ಶಿಕ್ಷಕರು ನಮಗೆ ನೀಡಿದ ಗುಣಮಟ್ಟದ ಶಿಕ್ಷಣ ಇಂದು ನಾವು ಉನ್ನತ ಹುದ್ದೆಗೇರಲು ಕಾರಣವಾಗಿದೆ. ನಮಗೆ ಪ್ರೇರಣೆಯಾದ ಗುರುಗಳ ಬಗ್ಗೆ ಗೌರವ ಇರಬೇಕು. ಇಂದಿನ ವಿದ್ಯಾರ್ಥಿಗಳು ಅಂದಿನ ಅಭ್ಯಾಸ ಅಂದೇ ಓದಬೇಕು. ಮೊಬೈಲ್ ನಲ್ಲಿ ನಮಗೆ ಬೇಕಾದಷ್ಟು ಮಾತ್ರ ಬಳಕೆ ಮಾಡಿಕೊಂಡು ಹೆಚ್ಚು ಸಮಯ ಅದರಿಂದ ದೂರ ಇರಬೇಕು ಎಂದರು.ಐ.ಎಸ್. ಹಿರೇಮಠ ಮಾತನಾಡಿ, ನಾನು ಸರ್ಕಾರಿ ಶಾಲೆಗೆ ಸೇರುವ ಮೊದಲು ಇಲ್ಲಿ ಕೆಜಿಯಿಂದ ಪಿಜಿವರೆಗೆ ಪಾಠ ಮಾಡಲು ಅವಕಾಶ ನೀಡಿದ್ದು ಅನ್ನದಾನೀಶ್ವರ ಸಂಸ್ಥೆ. ಅದು ನನ್ನ ಮೊದಲ ಅನುಭವವಾಗಿದೆ.ನಮ್ಮ ಪ್ರತಿಸ್ಪರ್ಧಿ ಎದುರಿಸುವ ಶಕ್ತಿ ನೀಡಿದ್ದು ಸಹ ಈ ಅನ್ನದಾನೀಶ್ವರ ಸಂಸ್ಥೆ ಎನ್ನಲು ಹೆಮ್ಮೆಯಾಗುತ್ತದೆ. ನಾನೀಗ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ತರಬೇತಿದಾರಳಾಗಿಯೂ ಕಾರ್ಯ ನಿರ್ವಹಿಸುತ್ತಿರುವೆ ಎಂದರು.
ಗಾಯತ್ರಿದೇವಿ ಹಿರೇಮಠ, ಆಶಾ ಯು.ಬಿ. ದೀಪಾ ಹೂಗಾರ ಮಾತನಾಡಿದರು. ಇದೇ ಸಂದರ್ಭದಲ್ಲಿ ಈ ಸಂಸ್ಥೆಯಲ್ಲಿ ಕಲಿತ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ದೀಪಾ ಹೂಗಾರ, ಎಂ.ಎಸ್.ಶಿವಶೆಟ್ಟರ್ ಸಂಸ್ಥೆಗೆ ತಲಾ ಒಂದು ಲಕ್ಷ ದೇಣಿಗೆ ನೀಡಿದರು.ಕಾರ್ಯಕ್ರಮದಲ್ಲಿ ಗಿರಿಜಾ ಜಕ್ಕಲಿ, ಪ್ರೇಮಾ ಶೇಡದ, ಪ್ರಿಯದರ್ಶಿನಿ ಮೇಟಿ, ಪ್ರತಿಭಾ ಹೊಸಮನಿ, ಶಂಕ್ರಮ್ಮ ಡಂಬಳ, ರಾಜೇಶ್ವರಿ ಸಾಲಿಮಠ, ಡಾ.ಮಂಗಳಾ ಇಟಗಿ, ದೀಪಾ ಹೂಗಾರ, ನೇತ್ರಾ ಅಳವಂಡಿ, ಗಾಯತ್ರಿ ಹಿರೇಮಠ, ಗೀತಾ ರಿತ್ತಿ, ಐ.ಎಸ್. ಹಿರೇಮಠ, ಸುಧಾರಾಣಿ ಬ್ಯಾಳಿಗೆ ಗೌರವ ಸನ್ಮಾನ ಜರುಗಿತು.
ಕಾಲೇಜು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಎಂ.ಎಸ್. ಶಿವಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಆರ್.ಆರ್. ಹೆಗಡಾಳ, ಕರಬಸಪ್ಪ ಹಂಚಿನಾಳ, ಬಿ.ಎಸ್. ಮೇಟಿ, ಐ.ಕೆ. ಹೂಗಾರ, ಆರ್.ಎಲ್. ಪೊಲೀಸ್ ಪಾಟೀಲ, ನಾಗೇಶ ಹುಬ್ಬಳ್ಳಿ, ಯು.ಸಿ. ಹಂಪಿಮಠ, ಗುಡದೀರಪ್ಪ ಲಿಂಬಿಕಾಯಿ, ಗಿರೀಶ ಅಂಗಡಿ, ಪ್ರತಿಭಾ ಹೊಸಮನಿ, ಗಂಗಾಧರ ಅಣ್ಣೀಗೇರಿ, ಎಂ.ವಿ. ಕೋರಿ, ಐ.ಎನ್. ಪೂಜಾರ ಉಪಸ್ಥಿತರಿದ್ದರು.ವೀರಣ್ಣ ಮೇಟಿ ಸ್ವಾಗತಿಸಿದರು. ಡಾ.ಬಿ.ಜಿ.ಜವಳಿ ಪ್ರಾ ಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಹರ್ತಿ ನಿರೂಪಿಸಿ, ವಂದಿಸಿದರು.