ಸಾರಾಂಶ
ಗಜೇಂದ್ರಗಡ: ಪಟ್ಟಣದಲ್ಲಿ ನಡೆಯುವ ಐತಿಹಾಸಿಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ರೋಣ ರಸ್ತೆಯ ಸಿಬಿಎಸ್‌ಸಿ ಶಾಲೆಯಲ್ಲಿ ಜ.೨೦ ಹಾಗೂ ೨೧ ರಂದು ನಡೆಯಲಿರುವ ಜಿಲ್ಲಾ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆ ಸ್ಥಳೀಯ ಜಿ.ಕೆ. ಬಂಡಿ ಗಾರ್ಡ್‌ನಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಕರ್ನಾಟಕ ಏಕೀಕರಣ ಸೇರಿದಂತೆ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ತಾಲೂಕು ನಮ್ಮದಾಗಿದೆ. ಸಾಹಿತ್ಯವು ನಮ್ಮ ಪರಂಪರೆ ಹಾಗೂ ಸಂಸ್ಕೃತಿಯ ಪ್ರತೀಕವಾಗಿದ್ದು ಪಟ್ಟಣದಲ್ಲಿ ನಡೆಯುತ್ತಿರುವ ಜಿಲ್ಲಾ ೧೦ನೇ ಸಾಹಿತ್ಯ ಸಮ್ಮೇಳನವು ಐತಿಹಾಸವಾಗಿದೆ. ಹೀಗಾಗಿ ಸಮ್ಮೇಳನದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಕನ್ನಡಪರ ಸಂಘಟನೆಗಳು, ಸಂಘ ಸಂಸ್ಥೆಗಳು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಭಾಗವಹಿಸುವ ಮೂಲಕ ಕನ್ನಡದ ತೇರನ್ನು ಎಳೆಯೋಣ ಎಂದ ಅವರು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗಾಗಿ ಈಗಾಗಲೇ ಅನೇಕ ಸಮಿತಿ ರಚಿಸಿ ಆಯಾ ಜವಾಬ್ದಾರಿ ನೀಡಲಾಗಿದೆ. ಜ. ೧೬ ರಂದು ನಡೆಯುವ ಪೂರ್ವಭಾವಿ ಸಭೆಗೆ ಸಮ್ಮೇಳನದ ರೂಪರೇಷ ಸಿದ್ಧಪಡಿಸಿ ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಪಟ್ಟಣದಲ್ಲಿ ನಡೆಯುವ ಜಿಲ್ಲಾ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಅನೇಕ ಪ್ರಥಮಗಳಿಗೆ ಕಾರಣವಾಗಲಿದೆ.ರಾಜ್ಯದ ಇತಿಹಾಸದಲ್ಲಿ ಪಟ್ಟಣದಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಐತಿಹಾಸಿಕ ಹಾಗೂ ಮಾದರಿಯಾಗಲಿದೆ. ಜಿಲ್ಲಾ ಸಮ್ಮೇಳನ ವಾತಾವರಣ ಸೃಷ್ಠಿಸಲು ಈಗಾಗಲೇ ಶಾಸಕ ಜಿ.ಎಸ್. ಪಾಟೀಲ ತಾಯಿ ಭುವನೇಶ್ವರಿ ರಥಯಾತ್ರೆಗೆ ಚಾಲನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜ.೧೯ ರಂದು ಜಕ್ಕಲಿ ಗ್ರಾಮದಿಂದ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಯಲ್ಲಿ ನೆರೆಯ ೫ ಜಿಲ್ಲೆ ಹಾಗೂ ಸ್ಥಳೀಯ ೫ ಕಲಾ ತಂಡಗಳು ಭಾಗವಹಿಸಲಿದ್ದು, ಜ.೨೦ ಸಮ್ಮೇಳನದ ಉದ್ಘಾಟನಾ ವೇದಿಕೆಗೆ ಆಗಮಿಸಲಿದೆ. ಇದಕ್ಕೂ ಮುನ್ನ ಪಟ್ಟಣದ ಮೈಸೂರ ಮಠದಿಂದ ಬೆಳಗ್ಗೆ ೮.೩೦ಕ್ಕೆ ಆರಂಭವಾಗುವ ವಿವಿಧ ಕಲಾ ತಂಡಗಳು,ವಿದ್ಯಾರ್ಥಿಗಳು, ಸಾಹಿತಿಗಳು, ಕವಿಗಳು ಸೇರಿ ಸಾವಿರಾರು ಸಂಖ್ಯೆಯಲ್ಲಿ ಪುಸ್ತಕ ಹಿಡಿದು ಮುಖ್ಯ ವೇದಿಕೆಗೆ ಆಗಮಿಸಲಿದ್ದು ಜಿಲ್ಲಾ ಕನ್ನಡ ಸಾಹಿತ್ಯ ಸಮೇಳನವು ಬೆಳಗ್ಗೆ ೧೧.೩೦ಕ್ಕೆ ಉದ್ಘಾಟನೆಯಾಗಲಿದೆ ಎಂದರು.ಪಟ್ಟಣದಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ಪಟ್ಟಣದ ೪ ರಸ್ತೆಯಲ್ಲಿ ವಿದ್ಯುತ್ ಕಂಬಗಳಿಗೆ ಕನ್ನಡ ಬಾವುಟ ಬಟ್ಟೆಯ ಅಲಂಕಾರ,ದೀಪಾಲಂಕಾರ ಸೇರಿ ಬ್ಯಾನರ್ ಅಳವಡಿಸಲು ತೀರ್ಮಾನಿಸಲಾಯಿತು.ಸಮ್ಮೇಳನದ ಮೊದಲ ದಿನದ ಉಪಾಹಾರದಲ್ಲಿ ಸಿರಾ ಹಾಗೂ ಉಪ್ಪಿಟ್ಟು,ಎರಡನೇ ದಿನ ಒಗ್ಗರಣೆ, ಮಿರ್ಚಿ. ಮೊದಲ ದಿನದ ಮಧ್ಯಾಹ್ನದ ಊಟಕ್ಕೆ ಉದರ ಸಜ್ಜಕಾ, ಅನ್ನಸಾರು, ಎರಡನೇಯ ದಿನ ಗೋದಿ ಹುಗ್ಗಿ, ಅನ್ನಸಾರು ಹಾಗೂ ಎರಡೂ ದಿನದ ರಾತ್ರಿಯ ಊಟಕ್ಕೆ ಅನ್ನಸಾರು ವ್ಯವಸ್ಥೆ ಕಲ್ಪಿಸುವ ತಿರ್ಮಾನಿಸಲಾಯಿತು. ಈ ವೇಳೆ ಕೆಲವರು ಅಕ್ಕಿ, ಸಿಹಿ ತಿನಿಸು ಹಾಗೂ ವಿವಿಧ ಪಲ್ಯ ಅಭಿಮಾನದಿಂದ ನೀಡುವದಾಗಿ ತಿಳಿಸಿದರು.
ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಸ್ಥಾಯಿ ಸಮಿತಿ ಚೇರಮನ್ ಮುದಿಯಪ್ಪ ಮುಧೋಳ, ಎ.ಪಿ. ಗಾಣಿಗೇರ, ಸಿದ್ದಣ್ಣ ಬಂಡಿ, ಅಶೋಕ ಬಾಗಮಾರ, ಶಶಿಧರ ಹೂಗಾರ, ಎಚ್.ಎಸ್. ಸೋಂಪುರ, ವೀರಣ್ಣ ಶೆಟ್ಟರ್, ಸುಭಾನಸಾಬ್ ಆರಗಿದ್ದಿ, ಬಿ.ಎಸ್. ಶೀಲವಂತರ, ಶರಣು ಪೂಜಾರ, ಸಿದ್ದಣ್ಣ ಚೋಳಿನ, ಶ್ರೀಧರ ಬಿದರಳ್ಳಿ, ಅರಿಹಂತ ಬಾಗಮಾರ, ಪುಂಡಲೀಕ ಕಲ್ಲಿಗನೂರ, ನಿಂಗಪ್ಪ ಕಾಶಪ್ಪನವರ, ಹೂವಾಜಿ ಚಂದುಕರ ಸೇರಿ ಇತರರು ಇದ್ದರು.