ಆಲೂರಿನ ದೇಗುಲಗಳಲ್ಲಿ ವೈಕುಂಠ ಏಕಾದಶಿ

| Published : Jan 12 2025, 01:17 AM IST

ಸಾರಾಂಶ

ಕುಂದೂರು ಹೋಬಳಿ ಅಡಿಬೈಲು ಗ್ರಾಮದಲ್ಲಿರುವ ರಂಗನ ಬೆಟ್ಟದಲ್ಲಿನ ಶ್ರೀ ಬಿಂದಿಗಮ್ಮ ರಂಗನಾಥ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ವಿವಿಧ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾದವು. ಮೊದಲಿಗೆ ಸುಪ್ರಭಾತ ಸೇವೆ, ಗುರು ಪರಂಪರ ಅನುಸಂಧಾನ, ಸಂಕಲ್ಪ ವಾಸುದೇವ ಪುಣ್ಯ, ಪಂಚಾಮೃತ ಅಭಿಷೇಕ ನಡೆಸಲಾಯಿತು. ಏಳು ಗಂಟೆಗೆ ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಂಗನಾಥ ಸ್ವಾಮಿಯ ಅಡ್ಡ ಪಲ್ಲಕ್ಕಿ ಉತ್ಸವ ನಡೆಸಿ, ವೈಕುಂಠ ದ್ವಾರ ಪ್ರವೇಶ ಪೂಜೆ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕಿನಾದ್ಯಂತ ವಿವಿಧ ದೇಗುಲಗಳಲ್ಲಿ ಶ್ರದ್ಧಾಭಕ್ತಿಯಿಂದ ವೈಕುಂಠ ಏಕಾದಶಿಯನ್ನು ಆಚರಿಸಲಾಯಿತು.

ವಿಶೇಷವಾಗಿ ಕುಂದೂರು ಹೋಬಳಿ ಅಡಿಬೈಲು ಗ್ರಾಮದಲ್ಲಿರುವ ರಂಗನ ಬೆಟ್ಟದಲ್ಲಿನ ಶ್ರೀ ಬಿಂದಿಗಮ್ಮ ರಂಗನಾಥ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ವಿವಿಧ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾದವು. ಮೊದಲಿಗೆ ಸುಪ್ರಭಾತ ಸೇವೆ, ಗುರು ಪರಂಪರ ಅನುಸಂಧಾನ, ಸಂಕಲ್ಪ ವಾಸುದೇವ ಪುಣ್ಯ, ಪಂಚಾಮೃತ ಅಭಿಷೇಕ ನಡೆಸಲಾಯಿತು. ಏಳು ಗಂಟೆಗೆ ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಂಗನಾಥ ಸ್ವಾಮಿಯ ಅಡ್ಡ ಪಲ್ಲಕ್ಕಿ ಉತ್ಸವ ನಡೆಸಿ, ವೈಕುಂಠ ದ್ವಾರ ಪ್ರವೇಶ ಪೂಜೆ ನೆರವೇರಿಸಲಾಯಿತು. ವಿಶೇಷ ಪೂಜೆಗಳ ನಂತರ ಸಾವಿರಾರು ಭಕ್ತರಿಗೆ ಪ್ರಸಾದ ವಿನಿಯೋಗ ನೆರವೇರಿಸಲಾಯಿತು.

ಆಲೂರು ಮಗ್ಗೆ ರಸ್ತೆಯಿಂದ ದೇವಸ್ಥಾನಕ್ಕೆ ಹೋಗುವ ರಸ್ತೆ ಕಳಪೆ ಕಾಮಗಾರಿಯಿಂದಾಗಿ ಸಂಪೂರ್ಣ ಹದಗೆಟ್ಟಿದ್ದು, ದೂರದ ಊರುಗಳಿಂದ ದೇವರ ದರ್ಶನಕ್ಕೆ ಆಗಮಿಸಿದ್ದ ಭಕ್ತಾದಿಗಳು, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದರು. ಕಡಿದಾದ ಹಾಗೂ ವಿಪರೀತ ತಿರುವುಗಳಿರುವ ರಸ್ತೆಯಲ್ಲಿ ವಾಹನಗಳು ಸಂಚರಿಸಲಾಗದೆ ಮಕ್ಕಳು, ವೃದ್ಧರು ಬೆಟ್ಟ ಹತ್ತಲು ಸಾಧ್ಯವಾಗದೆ ಪರದಾಡಿದರು. ತಾಲೂಕಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಈ ರಂಗನಾಥ ಸ್ವಾಮಿ ದೇವಾಲಯಕ್ಕೆ ಹೋಗುವ ರಸ್ತೆ ಈ ರೀತಿ ಹದಗೆಟ್ಟಿದ್ದರೂ ಯಾರೊಬ್ಬರೂ ತಲೆಕೆಡಿಸಿಕೊಳ್ಳದೆ ಇರುವುದಕ್ಕೆ ಭಕ್ತಾದಿಗಳು ಬೇಸರ ವ್ಯಕ್ತಪಡಿಸಿದರು.

ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಆಡಳಿತ ಮಂಡಳಿಯವರು, ರಸ್ತೆ ದುರಸ್ತಿಗೊಳಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಭಕ್ತಾದಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ಆನೆಗಳ ಹಾವಳಿ ಇದ್ದು, ಏನಾದರೂ ಮಾರ್ಗ ಮಧ್ಯದಲ್ಲಿ ವಾಹನ ಸಂಚರಿಸಲಾಗದೆ ನಿಂತಾಗ ಆನೆಗಳು ಎದುರಾದರೆ ಮುಂದಾಗಬಹುದಾದಂತಹ ಅನಾಹುತಕ್ಕೆ ಯಾರು ಹೊಣೆಯಾಗುತ್ತಾರೆ ಎಂದು ಕಳವಳ ಹೊರಹಾಕಿದರು. ಸಂಬಂಧಪಟ್ಟವರು ಶೀಘ್ರ ಇತ್ತ ಗಮನ ಹರಿಸಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.