ಸಾರಾಂಶ
ಹುದಿಕೇರಿಯಲ್ಲಿ ವಿವಿಧ ಕೊಡವ ಸಂಘ ಸಂಸ್ಥೆ ಹಾಗೂ ಸಾರ್ವಜನಿಕರಿಂದ ಶಾಮಿಯಾನ ಹಾಕಿ ಬೃಹತ್ ಜನಸ್ತೋಮದಿಂದ ರಸ್ತೆ ತಡೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಕಟ್ಟೆಮಾಡು ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುದಿಕೇರಿಯಲ್ಲಿ ವಿವಿಧ ಕೊಡವ ಸಂಘ- ಸಂಸ್ಥೆ ಹಾಗೂ ಸಾರ್ವಜನಿಕರಿಂದ ಶಾಮಿಯಾನ ಹಾಕಿ ಬೃಹತ್ ಜನಸ್ತೋಮದಿಂದ ರಸ್ತೆ ತಡೆ ನಡೆಯಿತು.ರಸ್ತೆ ತಡೆಯಲ್ಲಿ ಟಿ.ಕೊಡವ ಸಮಾಜ, ಯುಕೊ ಸಂಘಟನೆ, ತಿಂಗಕೊರ್ ಮೊಟ್ಟ್ ತಲಕಾವೇರಿ ಕೊಡವ ಕಾವೇರಿ ಭಕ್ತಾದಿಗಳ ಸಂಘ, ಟಿ. ಶೆಟ್ಟಿಗೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟ ಹಾಗೂ ವಿವಿಧ ರಾಜಕೀಯ ಪಕ್ಷದ ಸ್ಥಳೀಯ ಮುಖಂಡರು ಸೇರಿದಂತೆ ಕೊಡವ ಜನಾಂಗದವರು ಭಾಗವಹಿಸಿದ್ದರು.
ಈ ಸಂದರ್ಭ ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಟಿ. ಶೆಟ್ಟಿಗೇರಿ ಕೊಡವ ಸಮಾಜ ಅಧ್ಯಕ್ಷ ಕೈಬುಲೀರ ಹರೀಶ್ ಅಪ್ಪಯ್ಯ, ತಿಂಗಕೊರ್ ಮೊಟ್ಟ್ ತಲಕಾವೇರಿ ಕಾವೇರಿ ಭಕ್ತಾದಿಗಳ ಸಂಘದ ಮಲ್ಲಪನೆರ ವಿನು ಚಿಣ್ಣಪ್ಪ ಅವರು ಮಾತನಾಡಿ ಘಟನೆಯನ್ನು ತೀವ್ರವಾಗಿ ಖಂಡಿಸಿದರು.ಪೊಲೀಸರು ವಶಕ್ಕೆ ತೆಗೆದುಕೊಂಡ ಸಂದರ್ಭ ಜಾಥಾ ಆಯೋಜಕರು ಹಾಗೂ ಇತರ ಕೊಡವ ಹೋರಾಟಗಾರರನ್ನು ಕೂಡಲೇ ವಾಪಸು ಕರೆತರಬೇಕು, ಕಟ್ಟೆಮಾಡಿನಲ್ಲಿ ಕೊಡವ ಭಕ್ತಾದಿಗಳ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿ ಗಳನ್ನು ಬಂಧಿಸಬೇಕು. ಇದಲ್ಲದೆ ಬಿಜೆಪಿ ಜಿಲ್ಲಾಧ್ಯಕ್ಷ ಕಾಂಗಿನ ಸತೀಶ್ ಅವರು ಕಟ್ಟೆಮಾಡಿನಲ್ಲಿ ಕೊಡವ ಭಕ್ತಾದಿಗಳ ಮೇಲೆ ಹಲ್ಲೆ ಮಾಡಿದ್ದು ಹಾಗೂ ಪ್ರಚೋದನೆ ನೀಡಿದ್ದು ಈತನನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು, ಹಾಗೂ ಮುಂದೆ ಜೀವನ ಪರ್ಯಂತ ಅವರಿಗೆ ಯಾವುದೇ ಪಕ್ಷದಲ್ಲಿ ಸ್ಥಾನಮಾನ ನೀಡಬಾರದು ಎಂದು ಒತ್ತಾಯಿಸಿದರು.
ಬೆಳಗ್ಗೆ 11ರಿಂದ ಅಪರಾಹ್ನ 3ರ ವರೆಗೆ ರಸ್ತೆ ತಡೆ ನಡೆಯಿತು. ರಸ್ತೆಯಲ್ಲಿ ನೂರಾರು ವಾಹನಗಳು ಖಾಸಗಿ ಬಸ್ಸುಗಳು ಮತ್ತು ಕರ್ನಾಟಕ ಸಾರಿಗೆ ಬಸ್ಸುಗಳು ರಸ್ತೆಯಲ್ಲಿ ನಿಲ್ಲುವಂತಾಯಿತು.ಟಿ. ಶೆಟ್ಟಿ ಗೇರಿಯಲ್ಲಿ ಪ್ರತಿಭಟನೆ
ಶ್ರೀಮಂಗಲ: ಟಿ. ಶೆಟ್ಟಿಗೇರಿಯಲ್ಲಿಯೂ ಇಲ್ಲಿನ ಕೊಡವ ಸಮಾಜ, ಮಾಜಿ ಸೈನಿಕರ ಸಂಘ, ಸ್ಥಳೀಯ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದವು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಇಲ್ಲಿನ ಜಂಕ್ಷನ್ ನಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು.