ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಯುವಕರು ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸಲಿದೆ ಎಂದು ಸಮಾಜ ಸೇವಕಿ ಚೈತ್ರ ಶಶಿಧರ್‌ಗೌಡ ಅಭಿಪ್ರಾಯಪಟ್ಟರು.ಸಮೀಪದ ದೇವರಹಳ್ಳಿಯಲ್ಲಿ ಡಿವಿ ಬಾಯ್ಸ್ ವತಿಯಿಂದ ಮಾರಮ್ಮ ಕಪ್- 2024 ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಯುವಜನತೆ ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಒಳ್ಳೆಯ ಬೆಳವಣಿಗೆಯಾಗಿದೆ. ಕ್ರೀಡೆಯಲ್ಲಿನ ಸಾಧನೆಯಿಂದಾಗಿ ಉದ್ಯೋಗದಲ್ಲೂ ಹೆಚ್ಚಿನ ಅವಕಾಶ ದೊರೆಯಲಿದೆ ಎಂದು ಹೇಳಿದರು.
ದೇಶಿ ಕ್ರೀಡೆಗಳಲ್ಲಿ ಒಂದಾದ ಕಬಡ್ಡಿಯು ಗ್ರಾಮೀಣ ಪ್ರದೇಶದ ಮಕ್ಕಳ ಅಚ್ಚುಮೆಚ್ಚಿನ ಆಟ. ಇದಕ್ಕೆ ರಾಷ್ಟ್ರ ಮನ್ನಣೆಯೂ ದೊರೆತಿದೆ. ಕಬಡ್ಡಿಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ರಾಜ್ಯ- ರಾಷ್ಟ್ರಮಟ್ಟದ ಕ್ರೀಡಾಪಟುಗಳಾಗಿ ಕೀರ್ತಿ ತನ್ನಿ ಎಂದು ಕಿವಿಮಾತು ಹೇಳಿದರು.ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಬಡ್ಡಿ ಆಟವು ಪುರುಷ ಪ್ರಧಾನವಾಗಿತ್ತು. ಕಬಡ್ಡಿ ಆಟದಲ್ಲಿ ಮಹಿಳೆಯರು ಸಕ್ರಿಯರಾಗಿರುವುದರಿಂದ ನೇಪಥ್ಯಕ್ಕೆ ಸರಿಯುವ ಹಂತದಲ್ಲಿದ್ದ ಕಬಡ್ಡಿ ಆಟವು ಮತ್ತೆ ತನ್ನ ವೈಭವವನ್ನು ಉಳಿಸಿಕೊಂಡಿದೆ. ಸೋಲು- ಗೆಲುವು ಲೆಕ್ಕಕ್ಕೆ ಇಟ್ಟುಕೊಳ್ಳದೇ ಕ್ರೀಡೆಯಲ್ಲಿ ಸಕ್ರಿಯರಾಗುವುದು. ಕ್ರೀಡಾಸ್ಫೂರ್ತಿಯನ್ನು ಮೆರೆಯುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಲಕ್ಷಣ ಎಂದರು.
ಕ್ರೀಡಾಸ್ಫೂರ್ತಿಯಿಂದ ಭಾಗವಹಿಸುವುದರಿಂದ ಕ್ರೀಡಾಪಟು ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು. ಕ್ರೀಡೆಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರೋತ್ಸಾಹ-ನೆರವು ದೊರೆಯುತ್ತಿರುವ ಹಿನ್ನೆಲೆಯಲ್ಲಿ ಕ್ರೀಡಾಕ್ಷೇತ್ರವು ಬಲಿಷ್ಠವಾಗಲು ಸಾಧ್ಯವಾಗಲಿದೆ. ಸರ್ಕಾರಗಳು ಕ್ರೀಡಾಪಟುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೆರವು ನೀಡುತ್ತಿವೆ ಎಂದು ತಿಳಿಸಿದರು.ಜೆಡಿಎಸ್ ಮುಖಂಡರಾದ ದೇವರಹಳ್ಳಿ ವೆಂಕಟೇಶ್, ಕುಮಾರ್, ಯುವ ಮುಖಂಡ ಪ್ರಜ್ವಲ್, ಡಿವಿ ಬಾಯ್ಸ್ ತಂಡದ ಅಮಿತ್, ರಾಜೇಶ್, ಅರುಣ್, ತೇಜಸ್, ಸಚ್ಚಿನ್, ಪವನ್, ಸಂತೋಷ, ಪ್ರಜ್ವಲ್, ಯಶ್ವಂತ್, ಶ್ರೇಯಸ್ ಸೇರಿದಂತೆ ಮತ್ತಿತರರಿದ್ದರು.