ಸಾರಾಂಶ
ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಈ ಭಾಗದ ಮಾದರಿ ರಸ್ತೆಯಾಗಬೇಕಿದ್ದ, ಉತ್ತರ ಕರ್ನಾಟಕದ ಮೊದಲ ಟೆಂಡರ್ ಶ್ಯೂರ್ ರಸ್ತೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಿರ್ಲಕ್ಷ್ಯ, ನಿರ್ವಹಣೆ ಕೊರತೆಯಿಂದ ಹದಗೆಟ್ಟಿದೆ. ಅನಧಿಕೃತ ಪಾರ್ಕಿಂಗ್, ಡಬ್ಬಾ ಅಂಗಡಿಗಳ ತಾಣವಾಗಿ ಪರಿವರ್ತನೆಯಾಗಿದೆ.
ಏನಿದು?ಟೆಂಡರ್ ಶ್ಯೂರ್ ರಸ್ತೆ ಎನ್ನುವುದು ಅತ್ಯಂತ ಮಾದರಿ ರಸ್ತೆ. ರಾಜಧಾನಿ ಬೆಂಗಳೂರಲ್ಲಿ ಒಂದೆರಡ್ಮೂರು ಕಡೆ ಈ ಮಾದರಿಯ ರಸ್ತೆಗಳನ್ನು ನಿರ್ಮಿಸಲಾಗಿದೆ. ಅಲ್ಲಿ ನಿರ್ವಹಣೆ ಸಮರ್ಪಕವಾಗಿರುವುದರಿಂದ ಮಾದರಿ ರಸ್ತೆಗಳು ಎನಿಸಿವೆ. ಅದೇ ರೀತಿ ಉತ್ತರ ಕರ್ನಾಟಕ ಭಾಗದಲ್ಲಿ ಈ ರಸ್ತೆ ಮಾದರಿ ರಸ್ತೆಯಾಗಲಿ ಎಂಬ ಉದ್ದೇಶದಿಂದ ಸೆಂಟ್ರಲ್ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮುತುವರ್ಜಿ ವಹಿಸಿ ಹುಬ್ಬಳ್ಳಿಗೆ ಈ ರಸ್ತೆ ಮಂಜೂರು ಮಾಡಿಸಿದ್ದರು. ಕಾಡಸಿದ್ದೇಶ್ವರ ಕಲಾ ಕಾಲೇಜ್ ವೃತ್ತದಿಂದ ಶಿರೂರು ಪಾರ್ಕ್ ಮೂಲಕ ತೋಳನಕರೆಗೂ 2.19 ಕಿಮೀ ರಸ್ತೆಯನ್ನು ಟೆಂಡರ್ ಶ್ಯೂರ್ ರಸ್ತೆಯನ್ನಾಗಿ ನಿರ್ಮಿಸಲಾಗಿದೆ. 2.19 ಕಿಮೀ ರಸ್ತೆಗೆ ಬರೋಬ್ಬರಿ ₹44 ಕೋಟಿ ಖರ್ಚು ಮಾಡಲಾಗಿದೆ. 2019ರಲ್ಲಿ ಇದರ ಉದ್ಘಾಟನೆಯನ್ನು ನೆರವೇರಿಸಲಾಗಿದೆ.
ವಾಟರ್ ಪೈಪ್‌ಲೈನ್, ವಿದ್ಯುತ್ ತಂತಿ ಸೇರಿದಂತೆ ಎಲ್ಲ ಬಗೆಯ ಯುಟಿಲಿಟಿಗಳನ್ನು ಭೂಗತ ಮಾಡಿಯೇ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಅಕ್ಕಪಕ್ಕದಲ್ಲಿ ಸೈಕಲ್ ಪಾಥ್, ಪಾದಚಾರಿಗಳ ಸಂಚಾರಕ್ಕೆ ಫುಟ್‌ಪಾತ್, ಫೆವರ್ಸ್ ಅಳವಡಿಕೆ ಸೇರಿದಂತೆ ಅತ್ಯಂತ ಸುಸಜ್ಜಿತ ರಸ್ತೆಯನ್ನಾಗಿ ಇದನ್ನು ಅಭಿವೃದ್ಧಿ ಪಡಿಸಲಾಗಿತ್ತು. ಆದರೆ ಇದು ಕೇವಲ ಕೆಲ ತಿಂಗಳಷ್ಟೇ ನಿರ್ವಹಣೆ ಮಾಡಲಾಯಿತು. ಬರಬರುತ್ತಾ ಉಳಿದ ರಸ್ತೆಗಳಂತೆ ಇದು ಕೂಡ ಕೆಟ್ಟು ಹೋಗಿದೆ. ಎಲ್ಲೆಂದರಲ್ಲಿ, ರಸ್ತೆ ಮೇಲೆಯೇ ಕಾರು, ದ್ವಿಚಕ್ರವಾಹನಗಳ ಪಾರ್ಕಿಂಗ್, ಪುಟ್‌ಪಾತ್, ಸೈಕಲ್ ಪಾತ್‌ಗಳನ್ನು ಅತಿಕ್ರಮಿಸಿಕೊಂಡಿರುವ ಡಬ್ಬಾಅಂಗಡಿಗಳು, ಜಾಹೀರಾತು ಫಲಕಗಳು ತಲೆ ಎತ್ತಿವೆ. ಪ್ರತಿದಿನ ಸಂಜೆಯಾದರೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಬೇಕಿತ್ತು. ಆದರೆ ಇಲ್ಲಿ ಆಗಿರುವುದೇ ಬೇರೆ. ಉಳಿದ ರಸ್ತೆಗಳಿಗೂ ಈ ರಸ್ತೆಗೂ ಯಾವುದೇ ಬಗೆಯ ವ್ಯತ್ಯಾಸವೇ ಇಲ್ಲದಂತಾಗಿದೆ.ಇದೊಂದು ಮಾದರಿ ರಸ್ತೆಯಾಗಬೇಕಿತ್ತು. ಸರಿಯಾಗಿ ಪಾರ್ಕಿಂಗ್, ಅತಿಕ್ರಮಣಕ್ಕೆ ಅವಕಾಶ ಇಲ್ಲದಂತೆ ಇರಬೇಕು. ಬೆಂಗಳೂರಿನ ಬ್ರಿಗೇಡ್, ಎಂ.ಜಿ.ರಸ್ತೆಯಂತೆ ಈ ರಸ್ತೆ ಗೋಚರಿಸಬೇಕಿತ್ತು. ಈ ರಸ್ತೆಯ ಕಲ್ಪನೆಯೇ ಅದಾಗಿತ್ತು. ಬೇರೆ ಬೇರೆ ಊರುಗಳಿಂದ ಈ ರಸ್ತೆ ನಿರ್ವಹಣೆ ನೋಡಲು ಆಗಮಿಸುವಂತಾಗಬೇಕಿತ್ತು. ಆ ರೀತಿ ಇದು ನಿರ್ವಹಣೆ ಮಾಡಬೇಕಿತ್ತು. ಆದರೆ ಇಲ್ಲಿನ ಜನತೆಯೇ ಆ ರಸ್ತೆಗೆ ಹೋಗಲು ಬೇಸರಪಟ್ಟುವಂತಾಗಿದೆ ಎಂಬುದು ಗೋಳು ಜನರದ್ದು.
ಇಲ್ಲಿನ ಪಾರ್ಕಿಂಗ್ ವ್ಯವಸ್ಥೆಯನ್ನು ಪೊಲೀಸರು ನಿಭಾಯಿಸಬೇಕು. ಇನ್ನುಳಿದಂತೆ ಪುಟ್‌ಪಾತ್ ಅತಿಕ್ರಮಣ ತಡೆಯಲು ಪಾಲಿಕೆ, ಪೊಲೀಸರು ಇಬ್ಬರು ಕ್ರಮ ಕೈಗೊಳ್ಳಬೇಕು. ಬೀದಿ ದೀಪಗಳ ನಿರ್ವಹಣೆ ಸರಿಯಾಗಿ ಮಾಡಬೇಕು. ಇನ್ಮೇಲಾದರೂ ಪಾಲಿಕೆ ಅಧಿಕಾರಿಗಳು ಈ ರಸ್ತೆ ನಿರ್ವಹಣೆಯತ್ತ ಗಮನ ಹರಿಸುತ್ತಾರೆಯೇ ಎಂಬುದನ್ನು ಕಾಯ್ದು ನೋಡಬೇಕಷ್ಟೇ!ಟೆಂಡರ್ ಶ್ಯೂರ್ ರಸ್ತೆಯನ್ನು ಪಿಡಬ್ಲುಡಿಯಿಂದ ಮಾಡಿಸಿ ಪಾಲಿಕೆಗೆ ಹಸ್ತಾಂತರಿಸಲಾಗಿದೆ. 2.19 ಕಿಮೀ ರಸ್ತೆಗೆ ₹44 ಕೋಟಿ ಖರ್ಚಾಗಿತ್ತು. ಇದೊಂದು ಉತ್ತರ ಕರ್ನಾಟಕದಲ್ಲೇ ಮಾದರಿ ರಸ್ತೆಯನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ನಿರ್ಮಿಸಲಾಗಿತ್ತು. ಆದರೆ ಪಾಲಿಕೆ ಪೊಲೀಸರ ನಿರ್ಲಕ್ಷ್ಯದಿಂದಾಗಿ ನಿರ್ವಹಣೆಯಾಗುತ್ತಿಲ್ಲ. ನಿರ್ವಹಣೆ ಮಾಡಬೇಕು ಎಂದು ಮಾಹಿತಿ ನೀಡಿದರು ಮಾಜಿ ಸಿಎಂ ಜಗದೀಶ ಶೆಟ್ಟರ್.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಈ ಕುರಿತು ಮಾತನಾಡಿ, ಟೆಂಡರ್ ಶ್ಯೂರ್ ರಸ್ತೆಯಲ್ಲಿನ ಅವ್ಯವಸ್ಥೆ ಸರಿಪಡಿಸಿ ನಿರ್ವಹಣೆ ಮಾಡಲು ಇನ್ನೊಂದು ವಾರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ರಸ್ತೆಯ ಉದ್ದೇಶದಿಂದ ಅದನ್ನು ನಿರ್ವಹಿಸಲಾಗುವುದು ಎಂದಿದ್ದಾರೆ.