ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಸೌಂದರ್ಯೀಕರಣ ಹಾಗೂ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ಅತಿಕ್ರಮಣಗಳ ವಿರುದ್ಧ ದಂಡು ಮಂಡಳಿ (ಕಂಟೋನ್ಮೆಂಟ್ ಬೋರ್ಡ್) ಅಧಿಕಾರಿಗಳು ಭಾನುವಾರ ವಿಶೇಷ ಕಾರ್ಯಾಚರಣೆ ನಡೆಸಿ, ಸಾರ್ವಜನಿಕ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿದ್ದ ಹತ್ತಾರು ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸಿದರು.ಇತ್ತೀಚೆಗೆ ನಡೆದ ದಂಡು ಮಂಡಳಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಕಾರ್ಯಾಚರಣೆ ನಡೆಸಲಾಗಿದ್ದು, ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಉಂಟುಮಾಡುತ್ತಿದ್ದ ಅತಿಕ್ರಮಣ ಪ್ರದೇಶಗಳನ್ನು ಮೊದಲೇ ಗುರುತಿಸಲಾಗಿತ್ತು. ಮೊದಲ ಹಂತದಲ್ಲಿ ಟಿಳಕವಾಡಿಯ ಮೊದಲ ರೈಲ್ವೆ ಗೇಟ್ ಪ್ರದೇಶದಲ್ಲಿ ರಸ್ತೆ ಬದಿ ಅತಿಕ್ರಮಿಸಿಕೊಂಡಿದ್ದ ಅನಧಿಕೃತ ಕಟ್ಟಡಗಳು, ತಾತ್ಕಾಲಿಕ ಶೆಡ್‌ಗಳು ಹಾಗೂ ಅಂಗಡಿಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು. ಈ ಭಾಗದಲ್ಲಿ ಸಾರ್ವಜನಿಕರ ಓಡಾಟ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದ ಎಲ್ಲ ಅತಿಕ್ರಮಣಗಳನ್ನು ಅಧಿಕಾರಿಗಳು ತೆರವುಗೊಳಿಸಿದರು.
ಬಳಿಕ ಕಾರ್ಯಾಚರಣೆ ಕೇಂದ್ರ ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಿಗೂ ವಿಸ್ತರಿಸಲಾಯಿತು. ಪ್ರಮುಖ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡಿದ್ದ ವ್ಯಾಪಾರಿಗಳಿಗೆ ಕೂಡಲೇ ಜಾಗ ಖಾಲಿ ಮಾಡುವಂತೆ ಅಧಿಕಾರಿಗಳು ಸೂಚಿಸಿದರು.ಈ ವೇಳೆ ಅತಿಕ್ರಮಣದಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಅಧಿಕಾರಿಗಳು, ಸಾರ್ವಜನಿಕ ರಸ್ತೆ, ಫುಟ್ಪಾತ್ ಹಾಗೂ ಸರ್ಕಾರಿ ಜಾಗಗಳನ್ನು ಮತ್ತೆ ಒತ್ತುವರಿ ಮಾಡಿದರೆ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಿ, ಭಾರೀ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.
ದಂಡು ಮಂಡಳಿಯ ದಿಢೀರ್ ಕಾರ್ಯಾಚರಣೆಯಿಂದ ಅತಿಕ್ರಮಣದಾರರು ಆತಂಕಕ್ಕೊಳಗಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಕ್ರಮವನ್ನು ಸ್ವಾಗತಿಸಿ ಸಂತಸ ವ್ಯಕ್ತಪಡಿಸಿದರು.