ಹೂವಿನಹಡಗಲಿ: ಮಲ್ಲಿಗೆನಾಡನ್ನು ಸುಂದರ ನಗರ ನಿರ್ಮಾಣಕ್ಕೆ ಫುಟ್‌ಪಾತ್ ಮೇಲೆ ಅನಧಿಕೃತ, ತಗಡಿನ ಶೆಡ್‌ಗಳನ್ನು ಅಡ್ಡಾದಿಡ್ಡಿಯಾಗಿ ನಿರ್ಮಿಸಿದ್ದೇ ದೊಡ್ಡ ತೊಂದರೆಯಾಗಿದೆ. ಸರ್ಕಾರಿ ಜಾಗ ಅಕ್ರಮ ಬಳಕೆಯ ಜತೆಗೆ ಬಾಡಿಗೆ ಹಣ ವಸೂಲಿ ದಂಧೆ ಎಗ್ಗಿಲ್ಲದೇ ಸಾಗಿದೆ.ಹೌದು, ಪಟ್ಟಣವನ್ನು ಸುಂದರೀಕರಣಗೊಳಿಸಲು ಈಗಾಗಲೇ ₹8 ಕೋಟಿ ವೆಚ್ಚದಲ್ಲಿ ರಸ್ತೆಯ ಎರಡೂ ಬದಿ ಸುಂದರ ಫುಟ್‌ಪಾತ್ ನಿರ್ಮಾಣ, ಬಣ್ಣ ಬಣ್ಣದ ಕರೆಂಟ್ ವ್ಯವಸ್ಥೆ, ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಲಾಲ್ ಬಹದ್ಧೂರ್ ಶಾಸ್ತ್ರಿ ವೃತ್ತದ ಎರಡೂ ಕಡೆಗೂ ಫುಟ್‌ಪಾತ್ ಕಾಮಗಾರಿ ನಿರ್ಮಾಣ ಆಮೆಗತಿಯಲ್ಲಿ ಸಾಗಿದೆ.
ಪಟ್ಟಣದಲ್ಲಿರುವ ರಾಜ್ಯ ಹೆದ್ದಾರಿ ಪಕ್ಕದ ಫುಟ್‌ಪಾತ್ ಒಂದಿಷ್ಟು ಜಾಗ ಇಲ್ಲದಂತೆ ಬೀದಿಬದಿ ವ್ಯಾಪಾರಸ್ಥರು ಅನಧಿಕೃತ ಶಾಶ್ವತ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಆ ಜಾಗದಲ್ಲಿ ವ್ಯಾಪಾರ ಮಾಡದೇ ಸಾಮಾನುಗಳ ಸಂಗ್ರಹಕ್ಕಾಗಿ ತಗಡಿನ ಶೆಡ್ ನಿರ್ಮಿಸಿ ಬಾಡಿಗೆ ಹಣ ವಸೂಲಿ ಮಾಡುತ್ತಿದ್ದರೂ ಪುರಸಭೆ, ತಾಲೂಕು ಆಡಳಿತ ಕಣ್ಮುಂಚಿಕೊಂಡಿದೆ.ಫುಟ್‌ಪಾತ್ ಮೇಲೆ ನಾಲ್ಕೈದು ಶೆಡ್‌ಗಳನ್ನು ಅಕ್ರಮವಾಗಿಟ್ಟು ಅವುಗಳನ್ನು ಬಾಡಿಗೆ ನೀಡಿದ್ದಾರೆ. ಇಂತಹ ವ್ಯವಸ್ಥೆಗೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ. ಪ್ರತಿ ತಿಂಗಳು ಕನಿಷ್ಠ 3 ಸಾವಿರದಿಂದ 8 ಸಾವಿರ ರು. ವರೆಗೂ ಬಾಡಿಗೆ ಹಣ ವಸೂಲಿ ದಂಧೆ ನಿರಂತರವಾಗಿ ನಡೆಯುತ್ತಿದೆ. ಈ ಅಕ್ರಮ ಶೆಡ್ ನಿರ್ಮಾಣದಿಂದ ಪಟ್ಟಣದ ಸೌಂದರ್ಯ ಸಂಪೂರ್ಣ ಹಾಳಾಗಿದೆ. ಫುಟ್‌ಪಾತ್ ಮೇಲೆ ಎಗ್‌ರೈಸ್ ಅಂಗಡಿ ಹಾವಳಿಯಂತೂ ಹೇಳತೀರದಂತಾಗಿದೆ. ರಸ್ತೆ ಮೇಲಿನ ಧೂಳು ಅನ್ನಕ್ಕೆ ಅಂಟಿಕೊಂಡಿದ್ದರೂ ಅದನ್ನೇ ಜನ ತಿಂದು ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ.
ಪಟ್ಟಣದ ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿ ರಸ್ತೆ, ಹರಪನಹಳ್ಳಿ ರಸ್ತೆ, ಮದಲಗಟ್ಟ ರಸ್ತೆ, ಬಸ್ ನಿಲ್ದಾಣದ ರಸ್ತೆ, ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿ ರಸ್ತೆ ಸೇರಿದಂತೆ ಎಲ್ಲ ಕಡೆಗೂ ಅನಧಿಕೃತ ಶೆಡ್ ಹಾಕಿದ್ದಾರೆ. ಆದರೆ ಬಹುತೇಕರು ವ್ಯಾಪಾರ ಮಾಡುವುದಿಲ್ಲ. ಆದರೆ ಇದು ನಮ್ಮ ಜಾಗ ಎಂದು ಹರಕು ಮುರುಕಲು ಬಂಡಿಗಳು, ನಾಲ್ಕು ಗೂಟ ಹಾಕಿ ಪ್ಲಾಸ್ಟಿಕ್ ಹಾಳಿ ಹೊದಿಕೆ, ಸಣ್ಣ ಗೋದಾಮು ಹೋಲುವ ತಗಡಿನ ಶೆಡ್ ಹಾಕಿರುವುದು ನಗರದ ಸೌಂದರ್ಯವನ್ನು ಹಾಳು ಮಾಡಿದೆ.ಲಾಲ್ ಬಹದ್ಧೂರ್ ಶಾಸ್ತ್ರಿ ವೃತ್ತದಲ್ಲಿ ಫುಟ್‌ಪಾತ್ ಬಿಟ್ಟು ರಸ್ತೆ ಮೇಲೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಜತೆಗೆ ರಸ್ತೆಯ ಮೇಲೆಯೇ ಆಟೋಗಳ ನಿಲುಗಡೆ, ಸಂಚಾರಿ ಹೋಟೆಲ್‌ಗಳಿವೆ. ಇದರಿಂದ ಸಾರಿಗೆ ಬಸ್ ನಿಲುಗಡೆ ಮಾಡಲು ರಸ್ತೆ ಇಲ್ಲದೇ ಟ್ರಾಫಿಕ್ ಜಾಮ್ ನಿರಂತರ ಹಿಂಸೆಯಾಗಿದೆ. ಈ ಕುರಿತು ಪೊಲೀಸ್ ಇಲಾಖೆ ಜಾಣ ಮೌನ ವಹಿಸಿದೆ ಎಂದು ಆರೋಪ ಕೇಳಿ ಬರುತ್ತಿದೆ.
ಹೂವಿನಹಡಗಲಿ ಪಟ್ಟಣದಲ್ಲಿ ಕೆಲ ತಿಂಗಳ ಹಿಂದೆ ಭೇಟಿ ನೀಡಿ ಫುಟ್‌ಪಾತ್ ತೆರವಿಗೆ, ಕ್ರಮ ವಹಿಸಲು ಮುಖ್ಯಾಧಿಕಾರಿಗೆ ಸೂಚಿಸಲಾಗಿತ್ತು. ಈಗ ಮತ್ತೆ ಅದನ್ನು ಪರಿಶೀಲನೆ ಮಾಡಿ ಕ್ರಮ ವಹಿಸುತ್ತೇವೆ ಎನ್ನುತ್ತಾರೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ.
ಪುರಸಭೆ ವ್ಯಾಪ್ತಿಯ ಫುಟ್‌ಪಾತ್ ಮೇಲೆ ಅನಧಿಕೃತ ಶೆಡ್ ನಿರ್ಮಾಣ ಕುರಿತು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ವಹಿಸುತ್ತೇವೆ ಎನ್ನುತ್ತಾರೆ ಹೂವಿನಹಡಗಲಿ ಪುರಸಭೆ ಮುಖ್ಯಾಧಿಕಾರಿ ಜಿ.ಹನುಮಂತಪ್ಪ.