ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಒಳಚರಂಡಿ ಮಂಡಳಿ ವತಿಯಿಂದ ರಸ್ತೆ ಬದಿ ಕಾಮಗಾರಿ ನಡೆಯುತ್ತಿದ್ದು ಪಾದಚಾರಿಗಳು ಹೆದ್ದಾರಿ ಮತ್ತು ಸಂಪರ್ಕ ರಸ್ತೆಯಲ್ಲಿ ಓಡಾಡಲು ಪರದಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಒಳ ಚರಂಡಿ ಮಂಡಳಿ ವತಿಯಿಂದ ಹೆದ್ದಾರಿ ರಸ್ತೆಯ ಬದಿಯಲ್ಲಿ ಪೈಪ್ಗಳನ್ನು ಅಳವಡಿಸಲು ಜೆಸಿಬಿ ಯಂತ್ರ ಬಳಸಿ ಗುಂಡಿ ತೆಗೆಯುತ್ತಿದ್ದು ಇದರಿಂದ ಇಡೀ ರಸ್ತೆ ಕೆಸರುಮಯವಾಗಿದ್ದು ವಾಹನ ಸಂಚಾರಕ್ಕೂ ತೊಡಕುಂಟಾಗಿದೆ.

ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು ರಸ್ತೆಯಲ್ಲಿ ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ನಾಗರಿಕರು ದೂರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಗಿರೀಶ್ ಆದಷ್ಟು ಬೇಗನೆ ಒಳಚರಂಡಿ ಕಾಮಗಾರಿ ಪೂರ್ಣ ಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.


ಕಳೆದ 12 ವರ್ಷಗಳಿಂದ ಕುಶಾಲನಗರ ಪಟ್ಟಣದ ಒಳಚರಂಡಿ ಕಾಮಗಾರಿ ನಡೆಯುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.