ಸಾರಾಂಶ
ಸಿರಿಗೆರೆ: ಶ್ರೀ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ವಿಶೇಷ ಅತಿಥಿಯೊಬ್ಬರ ಆಗಮನ ಆಗಲಿದ್ದು, ಇನ್ನು ಮುಂದೆ ನೋಡುಗರು ಮತ್ತು ಮಕ್ಕಳಿಗೆ ರಂಜನೆಯ ತಾಣವಾಗಲಿದೆ. ಅದುವೇ ಮಾನವ ನಿರ್ಮಿತ ಯಾಂತ್ರಿಕ ಆನೆ ರೋಬೋ.ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ೩೪ನೆಯ ಶ್ರದ್ಧಾಂಜಲಿ ಸಂದರ್ಭದಲ್ಲಿ ಇದು ಇಲ್ಲಿನ ಪ್ರಮುಖ ಆಕರ್ಷಣೆಯಾಗುತ್ತದೆ.ಮಠದಲ್ಲಿ ಈ ಹಿಂದೆ ಬಸಮ್ಮ, ಅಕ್ಕಮಹಾದೇವಿ ಹಾಗೂ ಭವಾನಿ ಎಂಬ ಮೂರು ಆನೆಗಳು ಇದ್ದವು. ಮಠದ ಬಹುತೇಕ ಧಾರ್ಮಿಕ, ಸಾಮಾಜಿಕ ಆಚರಣೆಗಳಲ್ಲಿ ಅವು ಪ್ರಮುಖ ಪಾತ್ರ ವಹಿಸಿ ನೋಡುಗರನ್ನು ಆಕರ್ಷಿಸುತ್ತಿದ್ದವು. ದಶಕಗಳ ಹಿಂದೆ ಭವಾನಿ ಕೊನೆಯುಸಿರೆಳೆದ ನಂತರ ಮತ್ತೆ ಮಠಕ್ಕೆ ಆನೆಯನ್ನು ತರಿಸುವ ಕೆಲಸಗಳು ಆಗಿರಲಿಲ್ಲ. ಈ ಕೊರತೆ ಎದ್ದು ಕಾಣುತ್ತಿರುವ ವೇಳೆ ರೋಬೋ ಆನೆಯೊಂದು ಮಠದ ಅಂಗಳಕ್ಕೆ ಕಾಲಿಡುತ್ತಿದೆ.ಸಹಜ ಆನೆಗಳಂತೆಯೇ ಇದು ಕಣ್ಣುಗಳನ್ನು ಅರಳಿಸಿ ದಿಟ್ಟಿಸುತ್ತದೆ. ತಲೆ ಅಲ್ಲಾಡಿಸಿ ಬೇಕು ಬೇಡಗಳ ಸಂಜ್ಞೆ ಮಾಡುತ್ತದೆ. ಅಗಲವಾದ ತನ್ನ ಕಿವಿಗಳನ್ನು ಗಾಳಿಪಠದಂತೆ ಬೀಸುತ್ತದೆ. ಬಾಲ ಅಲ್ಲಾಡಿಸುತ್ತದೆ, ತನ್ನ ಉದ್ದನೆಯ ಸೊಂಡಿಲಿನಿಂದ ನೀರು ಎಳೆದುಕೊಂಡು ಚಿಮ್ಮಿಸುತ್ತದೆ. ಜನರನ್ನು ತನ್ನ ಬೆನ್ನಿನ ಮೇಲೆ ಕುಳ್ಳಿರಿಸಿಕೊಂಡು ಸವಾರಿ ಮಾಡಿಸುತ್ತದೆ. ಇಷ್ಟಾದರೂ ಇದು ನಾವು ನೀವು ಅಲ್ಲಲ್ಲಿ ನೋಡಿದ ಆನೆಯಂತಲ್ಲ. ಇದು ರೊಬೋಟಿಕ್ ಆನೆ. ಸಂಪೂರ್ಣ ಮಾನವ ನಿರ್ಮಿತ ತಂತ್ರಜ್ಞಾನದಿಂದ ಸಿದ್ಧಗೊಳಿಸಿದ ಆನೆ. ರೊಬೋಟಿಕ್ ತಂತ್ರಜ್ಞಾನ ದಾಪುಗಾಲು ಇಡುತ್ತಿರುವ ಸಂದರ್ಭದಲ್ಲಿ ಈ ಆನೆಯ ಸೃಷ್ಟಿಯಿಂದ ವಿಸ್ಮಯವೊಂದನ್ನು ಧಾರ್ಮಿಕ ಕ್ಷೇತ್ರದ ಒಳಗೆ ಪ್ರವೇಶ ಮಾಡುತ್ತಿದೆ.ತರಳಬಾಳು ಮಠಕ್ಕೆ ಕೊಡುಗೆಯಾಗಿ ಬರುತ್ತಿರುವ ಈ ಅತಿಥಿಗೆ ಶಿವಕುಂಜರ ಎಂದು ನಾಮಕರಣ ಮಾಡಲಾಗಿದೆ.ತಯಾರಿಸಿರುವುದು ಹೇಗೆ:
ರಬ್ಬರ್, ಫೈಬರ್, ತಂತಿಯ ಜರಡಿ, ಫೋಮ್ ಮತ್ತು ಕಬ್ಬಿಣ ಬಳಸಿ ಆನೆಯನ್ನು ಸಿದ್ಧಗೊಳಿಸಲಾಗಿದೆ. ಮೂರು ಮೀಟರ್ ಎತ್ತರದ ಆನೆಯ ಭಾರ ಸರಾಸರಿ ಸುಮಾರು ೮೦೦ ಕೆಜಿ. ಆನೆಯನ್ನು ಸಿದ್ಧಗೊಳಿಸುವಾಗ ಅದರ ಹೊಟ್ಟೆಯೊಳಗೆ ಐದು ವಿದ್ಯುತ್ ಯಂತ್ರಗಳನ್ನು ಅಳವಡಿಸಲಾಗಿದೆ. ಯಂತ್ರಗಳನ್ನು ವಿದ್ಯುತ್ ಸಂಪರ್ಕದಿಂದ ಚಾರ್ಜ್ ಮಾಡಬಹುದಾಗಿದೆ. ಈ ಯಂತ್ರಗಳನ್ನು ರಿಮೋಟ್ ಸಾಧನದ ಮೂಲಕ ನಿಯಂತ್ರಿಸಲಾಗುತ್ತದೆ. ಸಹಜ ಪ್ರಾಣಿಗಳನ್ನು ಕಾಡಿನಲ್ಲಿಯೇ ಬದುಕು ಸಾಗಿಸುವ, ನಲಿದಾಡುವ ಸಹಚರರೊಂದಿಗೆ ಇರಲುಗೊಡದೆ ಅವುಗಳನ್ನು ಹೊರ ಜಗತ್ತಿಗೆ ತಂದು ಅವುಗಳ ಮೇಲೆ ದೈಹಿಕ ಮತ್ತು ಮಾನಸಿಕ ಒತ್ತಡ ಹೇರುವ ಪ್ರವೃತ್ತಿಯನ್ನು ಗಮನಿಸುತ್ತಾ ಬಂದಿರುವ ಎರಡು ಸಂಸ್ಥೆಗಳು – ಸೆಕೆಂಡ್ ಚಾನ್ಸ್ ಅಡಾಪ್ಷನ್ ಸೆಂಟರ್ (ಸಿಯುಪಿಎ) ಮತ್ತು ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್ (ಪಿಇಟಿಎ) ಸುಮಾರು ೬ ಲಕ್ಷ ರು.ಗಳ ಬೆಲೆ ಬಾಳುವ ರೋಬೋ ಆನೆಯನ್ನು ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ಕೊಡುಗೆ ನೀಡಲು ಮುಂದಾಗಿವೆ. ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಶ್ರೀಗಳ ೩೪ನೇ ಶ್ರದ್ಧಾಂಜಲಿ ಸಮಾರಂಭದ ಸಂದರ್ಭದಲ್ಲಿ ನವೀನ ತಂತ್ರಜ್ಞಾನದ ಈ ಅತಿಥಿ ಮಠದ ಪ್ರಾಂಗಣಕ್ಕೆ ಕಾಲಿಡಲಿದೆ.ಮಠದಲ್ಲಿ ಇದರಿಂದ ಆಕರ್ಷಣೀಯ ಸನ್ನಿವೇಶವೊಂದು ಸೃಷ್ಟಿಯಾಗಲಿದೆ. ಭಕ್ತರು ಇದನ್ನು ನೋಡಲು, ಅಪ್ಪಿಕೊಳ್ಳಲು, ಸೊಂಡಿಲ ಮೂಲಕ ಅದರ ಆಶೀರ್ವಾದ ಪಡೆಯಲು ಧಾವಿಸಲಿದ್ದಾರೆ. ಮಕ್ಕಳು ಹೊಸ ಅತಿಥಿಯ ಮೈದಡವಿ, ಅದರ ಅಂಗಾಂಗಳನ್ನು ಮುಟ್ಟಿ ರೋಮಾಂಚನಗೊಳ್ಳಲೂ ಬಹುದು. ಮಠದ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಇದನ್ನು ಬಳಸಿಕೊಳ್ಳುವ ಉದ್ದೇಶ ಮಠದ ಆಡಳಿತ ವರ್ಗದ್ದು. ಮಠದಲ್ಲಿ ನಡೆಯುವ ಶ್ರದ್ಧಾಂಜಲಿ ಕಾರ್ಯಕ್ರಮ ಹಾಗೂ ರಾಜ್ಯದ ನಾನಾ ಕಡೆ ನಡೆಯುವ ತರಳಬಾಳು ಹುಣ್ಣಿಮೆ ಮಹೋತ್ಸವಗಳಲ್ಲಿ ಇನ್ನು ಮುಂದೆ ಇದು ಪ್ರಮುಖ ಆಕರ್ಷಣೆ ಆಗುವ ಸಾಧ್ಯತೆ ಇದೆ.ಆನೆಯನ್ನು ತಯಾರಿಸುವಾಗ ಅದನ್ನು ಜೀವಂತ ಆನೆಯ ಪ್ರತಿರೂಪವೆಂಬಂತೆ ತಯಾರಿಸಲು ಕಲಾವಿದರು ಬಹಳ ಎಚ್ಚರಿಕೆ ವಹಿಸಿದ್ದಾರೆ. ಹಾಗಾಗಿ ಚರ್ಮ, ಕಿವಿ, ಉಗುರು ಸೊಂಡಿಲುಗಳಿಗೆ ನೈಜ ರೂಪ ಕೊಟ್ಟಿದ್ದಾರೆ. ಇದು ಸಹಜವೆಂಬಂತೆ ನೋಡುಗರ ಆಸಕ್ತಿಯನ್ನು ಇಮ್ಮಡಿಗೊಳಿಸಲಿದೆ.ಪ್ರಾಣಿ ಸಂಕುಲ ವಿನಾಶದ ಕಡೆಗೆ ದಾಪುಗಾಲು ಹಾಕುತ್ತಿದೆ. ಅವು ತಮ್ಮ ಸಹಚರರ ಜೊತೆಗೆ ಕಾಡಿನಲ್ಲಿ ವಾಸ ಮಾಡಬೇಕು. ಅವು ತಮಗಿರುವ ಸ್ವತಂತ್ರವನ್ನು ಅನುಭವಿಸಬೇಕು. ಅವು ಬಂಧಿಯಾಗಿ ಮನುಷ್ಯರ ಬಳಿ ಇರಬಾರದು. ಈ ಹಿನ್ನೆಲೆಯಲ್ಲಿ ಪಿಇಟಿಎ ಇಂಡಿಯಾ ಇದುವರೆಗೆ ಇಂತಹ ೧೩ ಆನೆಗಳನ್ನು ಕರ್ನಾಟಕ ಮತ್ತು ಕೇರಳ ರಾಜ್ಯಗಳ ದೇವಾಲಯಗಳಿಗೆ ಕೊಡುಗೆ ನೀಡಿದೆ. ಎರಿಕಾ ಗೋಯಲ್, ನಿರ್ದೇಶಕರು, ಪಿಇಟಿಎ ಶ್ರೀಗಳಿಗೆ ರಕ್ಷಣೆ ಮಾಡಿದ್ದ ಮಠದ ಆನೆಉತ್ತಂಗಿಯಲ್ಲಿ ಗುರುಶಾಂತರಾಜ ಶ್ರೀಗಳ ಮೆರವಣಿಗೆಗೆ ಅಡ್ಡಿಯಾಗಿದ್ದ ಕಿಡಿಗೇಡಿಗಳು ಕಲ್ಲುತೂರಲಾರಂಭಿಸಿದಾಗ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಮಠದ ಆನೆ ಬಸಮ್ಮ, ಶ್ರೀಗಳಿಗೆ ರಕ್ಷಣೆ ನೀಡಿದ್ದಲ್ಲದೆ ಪ್ರಾಣಾಪಾಯದಿಂದ ಅವರನ್ನು ರಕ್ಷಿಸಿದ್ದ ಘಟನೆಯನ್ನು ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಕನ್ನಡಪ್ರಭದೊಂದಿಗೆ ಹಂಚಿಕೊಂಡರು. ಮೆರವಣಿಗೆ ನಿಲ್ಲಿಸಲು ಯತ್ನಿಸಿದ್ದ ಕಿಡಿಗೇಡಿಗಳು ಕಲ್ಲು ತೂರಲಾರಂಭಿಸಿದರು. ಆಗ ಇನ್ನೂ ಬ್ರಿಟಿಷರ ಆಡಳಿತ. ಕಲ್ಲೊಂದು ಬ್ರಿಟೀಷ್ ಅಧಿಕಾರಿಯ ಟೋಪಿಗೆ ಬಿದ್ದು ಟೋಪಿ ನೆಲಕ್ಕುರುಳಿತು. ಆಗ ಕೆರಳಿದ ಅಧಿಕಾರಿ ಆನೆಯ ಸೊಂಡಿಲಿಗೆ ಸರಪಳಿಯೊಂದನ್ನು ಕೊಟ್ಟು ರಕ್ಷಣೆಗೆ ಮುಂದಾಗಲು ಮನವಿ ಮಾಡಿದರು. ಕೂಡಲೇ ಕಾರ್ಯಪ್ರವೃತ್ತವಾದ ಬಸಮ್ಮ ಸರಪಳಿಯನ್ನು ಸುತ್ತಲೂ ಬೀಸತೊಡಗಿತು. ಕಿಡಿಗೇಡಿಗಳು ದಿಕ್ಕಾಪಾಲಾಗಿ ಓಡಿದರು. ಮೆರವಣಿಗೆ ಸಾಂಗವಾಗಿ ನಡೆಯಿತು. ಹೀಗೆ ಮಠದ ಪಟ್ಟದಾನೆ ಬಸಮ್ಮ ಶ್ರೀಗಳನ್ನು ಅಂದು ರಕ್ಷಿಸಿತು ಎಂದು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಮಠಕ್ಕೆ ಆಗಮಿಸುತ್ತಿರುವ ಹೊಸ ಅತಿಥಿಗೆ ಶಿವಕುಂಜರ ಎಂದು ನಾಮಕರಣ ಮಾಡಲಾಗಿದೆ. ಪಿಇಟಿಎ ಸಂಸ್ಥೆಯವರು ಇದೇ ಸೆ.೨೩ರಂದು ನೀಡಲಿದ್ದಾರೆ. ಇದು ಮಠದ ಕಾರ್ಯಕ್ರಮಗಳಲ್ಲಿ ಪ್ರಮುಖ ಆಕರ್ಷಣೆಯಾಗಲಿದೆ.- ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ.