ಸಾರಾಂಶ
ಕನ್ನಡಪ್ರಭ ವಾರ್ತೆ ನೆಲಮಂಗಲ
ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗುವ ಪ್ರಕರಣಗಳನ್ನು ವಿಲೇವಾರಿ ಮಾಡುವಾಗ ನೈಜ ಪ್ರಕರಣಗಳು ಹಾಗೂ ಸುಳ್ಳು ಪ್ರಕರಣಗಳು ಎರಡೂ ಇರುತ್ತವೆ. ಸುಳ್ಳು ಪ್ರಕರಣಗಳಿಂದ ನೈಜ ಪ್ರಕರಣಗಳ ವಿಲೇವಾರಿ ವಿಳಂಬವಾಗುತ್ತಿದ್ದು ಸಾರ್ವಜನಿಕರು ಸುಳ್ಳು ಕೇಸ್ ದಾಖಲಿಸಬೇಡಿ ಎಂದು ಉಪಲೋಕಾಯುಕ್ತ ನ್ಯಾ. ಬಿ ವೀರಪ್ಪ ಅವರು ಹೇಳಿದರು.ನಗರದ ಗೋಪಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನೆಲಮಂಗಲ ತಾಲೂಕಿನಲ್ಲಿ ಬಾಕಿ ಇರುವ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯಲ್ಲಿ ಉಪಲೋಕಾಯುಕ್ತರು ಮಾತನಾಡಿದರು.
ರಾಜ್ಯಾದ್ಯಂತ ಲೋಕಾಯುಕ್ತದಲ್ಲಿ 25 ಸಾವಿರ ಪ್ರಕರಣಗಳು ಬಾಕಿ ಇವೆ. ಇದರಲ್ಲಿ ಸುಮಾರು 10 ಸಾವಿರ ಸುಳ್ಳು ಕೇಸ್ಗಳು ಇವೆ. ಸುಳ್ಳು ಕೇಸ್ ಗಳಿಂದ ನೈಜ ಕೇಸ್ಗಳು ವಿಳಂಬವಾಗುತ್ತಿವೆ. ಜೊತೆಗೆ ನಿಷ್ಠಾವಂತ ಅಧಿಕಾರಿಗಳ ಕೆಲಸ- ಕಾರ್ಯಗಳಿಗೆ ತೊಂದರೆ ಆಗುತ್ತಿವೆ.ಸುಳ್ಳು ಕೇಸ್ ಸಾಬೀತಾದರೆ ಆರು ತಿಂಗಳಿಂದ ಮೂರು ವರ್ಷ ಜೈಲು ಶಿಕ್ಷೆ, ಜೊತೆಗೆ ಐದು ಸಾವಿರ ದಂಡ ವಿಧಿಸಬಹುದು. ಕೋರ್ಟ್ ನಲ್ಲಿ ಕೇಸ್ ಇರುವಾಗ ಲೋಕಾಯುಕ್ತ ಸಂಸ್ಥೆಯಲ್ಲಿ ಕೇಸ್ ವಿಚಾರಣೆ ಮಾಡಲು ಬರುವುದಿಲ್ಲ. ಹಾಗಾಗಿ ಸಾರ್ವಜನಿಕರು ಸುಳ್ಳು ಕೇಸ್ ಗಳನ್ನ ದಾಖಲಿಸಬೇಡಿ ಎಂದು ತಿಳಿಹೇಳಿದರು.ಮಾಜಿ ಸೈನಿಕರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ನಿವೇಶನ, ಪಿಂಚಣಿ ಇತರೆ ಸರ್ಕಾರಿ ಸವಲತ್ತು ನೀಡಲು ವಿಳಂಬ ಧೋರಣೆ ಹಾಗೂ ನಿರ್ಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು. ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಸೈನಿಕರು ಪ್ರತಿ ದಿನ ಕಚೇರಿಗಳಿಗೆ ಅಲೆದಾಡುವುದು ಅವರಿಗೆ ಅಗೌರವ ತೋರಿಸಿರುವುದು ಸಹಿಸಲು ಸಾಧ್ಯವಿಲ್ಲ. ಹಾಗಾಗಿ 175 ತಾಲೂಕುಗಳ ತಹಸೀಲ್ದಾರ್ ಗಳ ಮೇಲೆ ಲೋಕಾಯುಕ್ತ ಸಂಸ್ಥೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿದ್ದೇವೆ ಎಂದರು.
ಲೋಕಾಯುಕ್ತ ಸಂಸ್ಥೆ ಜನಸೇವೆಗಾಗಿ ಇದೆ, ತಾರತಮ್ಯ ಸಹಿಸುವುದಿಲ್ಲ. ಕಾನೂನು ಮುಂದೆ ಎಲ್ಲರೂ ಸಮಾನರು. ಹಿಂದೆ ಮುಖ್ಯ ಮಂತ್ರಿ, ಸಚಿವರನ್ನು ಸಹ ಜೈಲಿಗೆ ಕಳುಹಿಸಲಾಗಿದೆ. ಸರ್ಕಾರಿ ಅಧಿಕಾರಿಗಳು ನಿಮ್ಮ ಕೆಲಸವನ್ನು ಕಾಯಾ, ವಾಚಾ, ಮನಸ್ಸಿನಿಂದ ನಿರ್ವಹಿಸಿ ಎಂದು ಕರೆ ನೀಡಿದರು.ಹಕ್ಕು ಪತ್ರ ಕೊಡಿ ನಾವೇ ಕೊಡ್ತೀವಿ:
ಹಲವಾರು ದಿನಗಳಿಂದ ಹಕ್ಕುಪತ್ರ ನೀಡುತಿಲ್ಲ ಎಂಬ ದೂರುದಾರರ ಅರ್ಜಿಗೆ ಪ್ರತಿಕ್ರಿಯಿಸಿದ ನೆಲಮಂಗಲ ತಹಸೀಲ್ದಾರ್, ಹಕ್ಕುಪತ್ರಗಳು ಸಿದ್ಧ ಇದ್ದು ಶೀಘ್ರದಲ್ಲೇ ವಿತರಿಸಲಾಗುವುದು ಎಂದರು. ತಕ್ಷಣ ಪ್ರತಿಕ್ರಿಯಿಸಿದ ಉಪ ಲೋಕಾಯುಕ್ತರು, ಸಿದ್ದವಾಗಿದ್ದರೆ ಈಗಲೇ ಕೊಡಿ, ಅವುಗಳಿಗೆ ಮತ್ತಷ್ಟು ಕಾಲಾವಕಾಶ ಏಕೆ ಬೇಕು, ಇಲ್ಲಿಯೇ ಡೀಸಿ, ಸಿಇಒ ಇದ್ದಾರೆ. ನಿಮ್ಮ ಶಾಸಕರನ್ನೂ ಕರೆಯಿರಿ, ಅವರೇ ಪೋಟೋ ಹಾಕಿಸಿಕೊಳ್ಳಲಿ, ಆಗುವ ಒಳ್ಳೆಯ ಕೆಲಸ ಆಗಲಿ ಎಂದಾಗ ತಹಸೀಲ್ದಾರ್ ಪ್ರತಿಕ್ರಿಯಿಸಿ, ಶಾಸಕರು ಇದೇ ತಿಂಗಳ 28 ಕ್ಕೆ ಸಮಯ ನೀಡಿದ್ದಾರೆ ಎಂದು ತಿಳಿಸಿದರು.ಅನಧೀಕೃತ ರಸ್ತೆ ಬದಿಯ ಅಂಗಡಿಗಳ ತೆರವಿಗೆ ಸೂಚನೆ:
ರಸ್ತೆ ಬದಿಯಲ್ಲಿ ಅನಧೀಕೃತವಾಗಿ ನಿರ್ಮಿಸಿರುವ ಅಂಗಡಿಗಳು, ನಗರಾದಾದ್ಯಂತ ಹಾಗೂ ಬೇಗೂರಿನಲ್ಲಿ ಹಾರಾಡುತ್ತಿರುವ ಬ್ಯಾನರ್, ಫ್ಲೆಕ್ಸ್ ಗಳನ್ನು ತೆರವು ಮಾಡಲು ಅಧಿಕಾರಿಗಳಿಗೆ ಉಪಲೋಕಾಯುಕ್ತರು ಸೂಚಿಸಿದರು.ಪೊಲೀಸ್ ಸ್ಟೇಷನ್ಗಳಲ್ಲಿ ಅಮಾಯಕರಿಗೆ ಕಿರುಕುಳ ನೀಡುವುದು ತಪ್ಪು:
ಪೊಲೀಸ್ ಸ್ಟೇಷನ್ ನಲ್ಲಿ ಅಮಾಯಕರ ಮೇಲೆ ಸುಳ್ಳು ಕೇಸ್ ದಾಖಲಿಸಿ, ಕಿರುಕುಳ ಕೊಡುವುದನ್ನು ಮೊದಲು ನಿಲ್ಲಿಸಿ. ಬಲಿಷ್ಠರ ಒತ್ತಡಕ್ಕೆ ಮಣಿದು ಅಮಾಯಕರ ಮೇಲೆ ಕೇಸ್ ದಾಖಲಿಸುವುದು, ಕಿರುಕುಳ ನೀಡುವುದು ಪೊಲೀಸ್ ಅಧಿಕಾರಿಗಳಿಗೆ ಸಮಂಜಸವಲ್ಲ ಎಂದರು.ಭೂ ಸ್ವಾಧೀನ ಪರಿಹಾರ ಹಣ ಬೇರೆಯವರಿಗೆ ಪಾವತಿ:
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಭೂಸ್ವಾಧೀನ ಮಾಡಿದ ಸಂದರ್ಭದಲ್ಲಿ ಮೂಲ ಜಾಮೀನು ಮಾಲೀಕನಿಗೆ ಸಿಗಬೇಕಾದ ಪರಿಹಾರ ಹಣದ ಮೊತ್ತ 10,90,973 ರು.ಗಳನ್ನು ಮತ್ತೊಬ್ಬ ನಕಲಿ ದಾಖಲೆ ನೀಡಿ 2018ರಲ್ಲಿ ಪರಿಹಾರ ಹಣ ಪಡೆದಿದ್ದಾರೆ. ಇದನ್ನು ಉಪಲೋಕಾಯುಕ್ತರು ಗಂಭೀರವಾಗಿ ಪರಿಗಣಿಸಿದ್ದು, ಒಂದು ತಿಂಗಳ ಗಡುವು ನೀಡಿ ಪರಿಹಾರ ಹಣ ಪಡೆದಿರುವ ವ್ಯಕ್ತಿಯ ವಿರುದ್ಧ ಕೇಸ್ ದಾಖಲಿಸಿ, ಪರಿಹಾರ ಹಣ ಹಾಗೂ ಅದರ ಮೇಲಿನ ಇದುವರೆಗಿನ ಬಡ್ಡಿಯನ್ನು ಸೇರಿಸಿ ಕೋರ್ಟ್ ನಲ್ಲಿ ಠೇವಣಿ ಇಡಬೇಕು. ಕೋರ್ಟ್ ನಲ್ಲಿ ಕೇಸ್ ವಿಲೇವಾರಿ ಆದ ನಂತರ ಮೂಲ ಮಾಲೀಕನಿಗೆ ಪರಿಹಾರ ಮೊತ್ತ ಹಿಂದಿರುಗಿಸಬೇಕು ಎಂದು ವಿಶೇಷ ಭೂ ಸ್ವಾಧೀನ ಅಧಿಕಾರಿಗೆ ಸೂಚಿಸಿದರು.40 ಪ್ರಕರಣಗಳ ಇತ್ಯರ್ಥ:
ಸರ್ಕಾರಿ ಭೂಮಿ ಒತ್ತುವರಿ, ಸರ್ಕಾರಿ ರಸ್ತೆ ಕಬಳಿಕೆ, ಅಕ್ರಮ ಖಾತೆ, ಇ- ಖಾತೆ, ಹಕ್ಕು ಪತ್ರ ವಿತರಣೆ, ಪೋಡಿ ದುರಸ್ಥಿ, ಕಾನೂನು ಬಾಹಿರ ಚಟುವಟಿಕೆ, ಅಧಿಕಾರಿಗಳ ಕಿರುಕುಳ, ಸರ್ವೇ ಕಾರ್ಯ ಸಂಬಂಧಿಸಿದಂತೆ ನೆಲಮಂಗಲ ತಾಲೂಕು ವ್ಯಾಪ್ತಿಯ 123 ಪ್ರಕರಣಗಳ ಪೈಕಿ 40 ವಿಲೇವಾರಿ ಮಾಡಲಾಗಿದ್ದು ಉಳಿದ ಅರ್ಜಿಗಳನ್ನು ಮುಂದಿನ ವಿಚಾರಣೆಗೆ ನೀಡಲಾಗಿದೆ.ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಬಸವರಾಜು, ಜಿಪಂ ಸಿಇಒ ಡಾ.ಕೆ.ಎನ್ ಅನುರಾಧ, ಲೋಕಾಯುಕ್ತ ಬೆಂಗಳೂರು ಗ್ರಾಮಾಂತರ ಪೊಲೀಸ್ ಅಧೀಕ್ಷಕರಾದ ಡಾ.ಕೆ.ವಂಶಿಕೃಷ್ಣ, ಉಪ ನಿಬಂಧಕರಾದ ಅರವಿಂದ್ ಎನ್.ವಿ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಶ್ರೀ ಶೈಲ್ ಭೀಮಸೇನ ಬಗಾಡಿ, ಎಎಸ್ಪಿ ನಾಗರಾಜ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಅರ್ಜಿದಾರರು ಹಾಜರಿದ್ದರು.