ಶಿಕ್ಷಣದ ಜೊತೆಯಲ್ಲೇ ಮಕ್ಕಳಲ್ಲಿ ಮೌನವೀಯ ಮೌಲ್ಯಗಳನ್ನು ಬೆಳೆಸಬೇಕು. ಗುರು-ಹಿರಿಯರು, ತಂದೆ-ತಾಯಿಯರನ್ನು ಗೌರವಿಸುವ, ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುವಂತೆ ಸಂಸ್ಕಾರವೂ ಮಕ್ಕಳಲ್ಲಿ ಮೂಡಿಸುವುದು ಅತ್ಯಗತ್ಯ. ಓದಿನ ವಿಷಯದಲ್ಲಿ ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಕ್ಕಳ ಶೈಕ್ಷಣಿಕ ಬೆಳವಣಿಗೆ ವಿಚಾರದಲ್ಲಿ ಶಿಕ್ಷಕರಷ್ಟೇ ಪೋಷಕರ ಜವಾಬ್ದಾರಿಯೂ ಇರುತ್ತದೆ. ಮಕ್ಕಳ ಓದಿನ ಬಗ್ಗೆ ಗಮನಹರಿಸುತ್ತಾ ಕಲಿಕೆಯತ್ತ ಆಸಕ್ತಿ ಮೂಡುವಂತೆ ಮಾಡಬೇಕು ಎಂದು ರಾಮನಗರ ಡಯಟ್ ಉಪನ್ಯಾಸಕ ಕೆ.ಪಿ.ಬಾಬು ಹೇಳಿದರು.

ಮದ್ದೂರು ಪಟ್ಟಣದ ಕುದರಗುಂಡಿ ಕಾಲೋನಿಯಲ್ಲಿರುವ ನಳಂದ ವಿದ್ಯಾಪೀಠದಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ-ಪರಿವರ್ತನಾ ಕಾರ್ಯಾಗಾರದಲ್ಲಿ ಮಾತನಾಡಿ, ಮಕ್ಕಳ ಆಸಕ್ತಿಯನ್ನು ಗುರುತಿಸಿ ಅದಕ್ಕೆ ಪ್ರಾಮುಖ್ಯತೆಯನ್ನು ನೀಡಬೇಕು. ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವುದಕ್ಕೆ ಅವಕಾಶ ನೀಡಬೇಕು. ಇದರಿಂದ ಕ್ರಿಯಾಶೀಲತೆ ಹೆಚ್ಚುತ್ತದೆ. ಏಕಾಗ್ರತೆ ಮೂಡುತ್ತದೆ. ಯಾವುದಾದರೊಂದು ಕ್ರೀಡೆಯಲ್ಲಿ ತೊಡಗುವಂತೆ ಮಕ್ಕಳನ್ನು ಪ್ರೇರೇಪಿಸುವಂತೆ ಸಲಹೆ ನೀಡಿದರು.

ಶಿಕ್ಷಣದ ಜೊತೆಯಲ್ಲೇ ಮಕ್ಕಳಲ್ಲಿ ಮೌನವೀಯ ಮೌಲ್ಯಗಳನ್ನು ಬೆಳೆಸಬೇಕು. ಗುರು-ಹಿರಿಯರು, ತಂದೆ-ತಾಯಿಯರನ್ನು ಗೌರವಿಸುವ, ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುವಂತೆ ಸಂಸ್ಕಾರವೂ ಮಕ್ಕಳಲ್ಲಿ ಮೂಡಿಸುವುದು ಅತ್ಯಗತ್ಯ. ಓದಿನ ವಿಷಯದಲ್ಲಿ ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು. ಮಕ್ಕಳಿಗೆ ಇಷ್ಟೇ ಅಂಕ ಗಳಿಸಬೇಕೆಂಬ ಗುರಿಯನ್ನೂ ಕೊಡಬೇಡಿ. ಇದರಿಂದ ಅವರು ಭಯ, ಆತಂಕ, ಮಾನಸಿಕ ಒತ್ತಡಕ್ಕೆ ಸಿಲುಕುವ ಸಾಧ್ಯತೆಗಳಿರುತ್ತವೆ. ಕೆಲವೊಂದು ಮಕ್ಕಳು ಖಿನ್ನತೆಗೂ ಒಳಗಾಗಬಹುದು. ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ಬೆಳೆಸುವುದರ ಜೊತೆಗೆ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಲು ಪ್ರೋತ್ಸಾಹ ನೀಡುವಂತೆ ಹೇಳಿದರು.

ಪರೀಕ್ಷೆಗಳು ಸಮೀಪಿಸುತ್ತಿರುವ ಹೊತ್ತಿನಲ್ಲಿ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಆಸಕ್ತರಾಗಬೇಕು. ಮೊಬೈಲ್-ಟೀವಿಯಿಂದ ದೂರವಿರಬೇಕು. ಎಸ್ಸೆಸ್ಸೆಲ್ಸಿ ಜೀವನಕ್ಕೆ ತಿರುವು ನೀಡುವ ಘಟ್ಟ. ಇಲ್ಲಿ ಯಾವ ಕಾರಣಕ್ಕೂ ಮೈಮರೆಯಬಾರದು. ಸ್ಪರ್ಧಾತ್ಮಕ ಯುಗದಲ್ಲಿರುವುದರಿಂದ ಪೈಪೋಟಿ ಹೆಚ್ಚಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ಕಡೆಗೆ ಗುರಿಯನ್ನು ಇಟ್ಟುಕೊಂಡು ಓದಿನಲ್ಲಿ ತೊಡಗುವಂತೆ ತಿಳಿಸಿದರು.

ಕೆಲವು ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಅವಲೋಕನ ಮಾಡುವುದು. ನಿಮಗೆ ನೀವೇ ಪ್ರಶ್ನೆಪತ್ರಿಕೆಗಳನ್ನು ತಯಾರಿಸಿಕೊಂಡು ಅವುಗಳನ್ನು ಎದುರಿಸುವ ಕೌಶಲ್ಯ ಬೆಳೆಸಿಕೊಳ್ಳಬೇಕು. ಯಾವ ಪ್ರಶ್ನೆ ಹೆಚ್ಚು ಬಾರಿ ಬಂದಿರುವುದಿಲ್ಲವೋ ಅದಕ್ಕೆ ಹೆಚ್ಚು ಒತ್ತು ಕೊಟ್ಟು ಓದಬೇಕು. ಅರ್ಥೈಸಿಕೊಳ್ಳಬೇಕು. ಕಷ್ಟದ ವಿಷಯಗಳನ್ನು ಹೆಚ್ಚು ಸಮಯ ಕೊಟ್ಟು ಗಮನವಿಟ್ಟು ಓದಿ. ಸಮಸ್ಯೆಗಳಿದ್ದರೆ, ಗೊಂದಲಗಳಿದ್ದರೆ ಶಿಕ್ಷಕರಿಂದ ಕೂಡಲೇ ಪರಿಹಾರ ಕಂಡುಕೊಳ್ಳಿ. ಆಗ ಪರೀಕ್ಷೆಯ ಭಯ ದೂರವಾಗುತ್ತದೆ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಈಗಲೇ ಗುರಿಯನ್ನಿಟ್ಟುಕೊಂಡು ಅಭ್ಯಾಸದಲ್ಲಿ ನಿರತರಾಗಬೇಕು. ಪೋಷಕರ ಶ್ರಮ ವ್ಯರ್ಥವಾಗುವಂತೆ ಮಾಡಬಾರದು. ಈಗ ನೀವು ಶ್ರಮಪಟ್ಟು ವ್ಯಾಸಂಗ ಮಾಡಿದರೆ ಭವಿಷ್ಯ ಸುಖಮಯವಾಗಿರುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದಲ್ಲಿ ಏನಾಗಬೇಕೆಂಬುದನ್ನು ಈಗಲೇ ನಿರ್ಧರಿಸಿಕೊಂಡು ಓದಿನಲ್ಲಿ ತೊಡಗುವಂತೆ ತಿಳಿಸಿದರು.

ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳು, ವಿಜ್ಞಾನ-ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಶೈಕ್ಷಣಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಎಐ ತಂತ್ರಜ್ಞಾನ ಸಾಕಷ್ಟು ಬೆಳವಣಿಗೆಯನ್ನು ಕಾಣುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ನೀವೇನಾಗಬೇಕು ಎಂಬುದನ್ನು ನಿರ್ಧರಿಸಿಕೊಳ್ಳುವಂತೆ ಹೇಳಿದರು.

ಕಾರ್ಯಕ್ರಮದಲ್ಲಿ ನಳಂದಾ ವಿದ್ಯಾಪೀಠದ ಅಧ್ಯಕ್ಷ ರಾಮಕೃಷ್ಣ ಸೇರಿದಂತೆ ಶಿಕ್ಷಕರು ಹಾಜರಿದ್ದರು.