ಅಂಧ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ನಾಯಕಿ ಟಿ.ಸಿ.ದೀಪಿಕಾ ಹಾಗೂ ರಾಜ್ಯದ ಇತರೆ ಇಬ್ಬರು ಮಹಿಳಾ ಆಟಗಾರ್ತಿಯರನ್ನು ನಗರದಲ್ಲಿ ಭಾನುವಾರ ಅದ್ಧೂರಿ ಮೆರವಣಿಗೆಯೊಂದಿಗೆ ಸ್ವಾಗತಿಸಿ, ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರು ಅಂಧ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ನಾಯಕಿ ಟಿ.ಸಿ.ದೀಪಿಕಾ ಹಾಗೂ ರಾಜ್ಯದ ಇತರೆ ಇಬ್ಬರು ಮಹಿಳಾ ಆಟಗಾರ್ತಿಯರನ್ನು ನಗರದಲ್ಲಿ ಭಾನುವಾರ ಅದ್ಧೂರಿ ಮೆರವಣಿಗೆಯೊಂದಿಗೆ ಸ್ವಾಗತಿಸಿ, ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದಿಂದ ಆಯೋಜಿಸಿದ್ದ ಈ ಅಭಿನಂದನಾ ಸಮಾರಂಭದ ಅಂಗವಾಗಿ ಬೆಳಗ್ಗೆ ಪುರಭವನ ವೃತ್ತದಿಂದ ತಂಡದ ನಾಯಕಿ ಟಿ.ಸಿ.ದೀಪಿಕಾ, ಕೊರಟಗೆರೆ ತಾಲೂಕಿನ ಕಾವ್ಯ ಹಾಗೂ ಶಿವಮೊಗ್ಗದ ಕಾವ್ಯ ಈ ಮೂವರನ್ನು ಬೆಳ್ಳಿರಥದಲ್ಲಿ ಕೂರಿಸಿ ಬಾಲಭವನದವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಜಾನಪದ ಕಲಾತಂಡಗಳ ವೈಭವದೊಂದಿಗೆ ಸಾವಿರಾರು ಜನ ಈ ಸಂಭ್ರಮದಲ್ಲಿ ಭಾಗಿಯಾದರು.ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಚಿತ್ರದುರ್ಗ ಕ್ಷೇತ್ರ ಸಂಸದರಾದ ಗೋವಿಂದ ಕಾರಜೋಳ ಅವರು ಟಿ.ಸಿ.ದೀಪಿಕಾ ಅವರ ತಂಡ ಕೊಲಂಬೋದಲ್ಲಿ ನೇಪಾಳದ ಜೊತೆ ಸೆಣಸಾಡಿ ಭಾರತಕ್ಕೆ ಜಯ ತಂದುಕೊಟ್ಟಿದ್ದಾರೆ. ಅಂಧ ಮಕ್ಕಳಾಗಿಯೂ ಇವರ ಸಾಧನೆ ಅಪ್ರತಿಮವಾದುದು. ಈ ಜಿಲ್ಲೆಯ ಮಗಳಾಗಿ ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸಿರುವ ದೀಪಿಕಾ ಈ ದೇಶದ ಹೆಮ್ಮೆಯ ಹೆಣ್ಣು ಮಗಳು ಎಂದು ಶ್ಲಾಘಿಸಿದರು.ಬಾಲ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಕಣ್ಣಿನ ತೊಂದರೆ ಇದ್ದರೂ ಈ ಹೆಣ್ಣು ಮಕ್ಕಳ ಸಾಧನೆ ಅನನ್ಯವಾದದ್ದು. ಇವರ ಸಾಧನೆ ಇತರರಿಗೆ ಸ್ಪೂರ್ತಿಯಾಗಬೇಕು. ಇಡೀ ರಾಷ್ಟ್ರವನ್ನು ಪ್ರತಿನಿಧಿಸಿರುವ ಹೆಣ್ಣು ಮಕ್ಕಳಲ್ಲಿ ತಂಡದ ನಾಯಕಿ ಈ ಜಿಲ್ಲೆಯವರು ಎಂಬುದು ನಮ್ಮ ಹೆಮ್ಮೆ. ಕಾಡುಗೊಲ್ಲ ಸಮುದಾಯದ ಬಡ ಕುಟುಂಬದ ಹೆಣ್ಣು ಮಗಳ ಈ ಸಾಧನೆಯನ್ನು ನಾವೆಲ್ಲಾ ಸ್ಮರಿಸಬೇಕು. ಇವರ ಜೊತೆ ಆಟವಾಡಿರುವ ರಾಜ್ಯದ ಇತರರನ್ನೂ ಇಲ್ಲಿ ಕರೆಸಿ ಅಭಿನಂದಿಸುತ್ತಿರುವುದು ಶ್ಲಾಘನೀಯ ಎಂದರು. ತುಮಕೂರು ಗ್ರಾಮಾಂತರ ಶಾಸಕರಾದ ಬಿ.ಸುರೇಶ್ ಗೌಡ ಮಾತನಾಡಿ, ಈ ರಾಜ್ಯದ ೪೪ ತಾಲೂಕುಗಳಲ್ಲಿ ಕಾಡುಗೊಲ್ಲರು ನಿರ್ಣಾಯಕವಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಈ ಸಮುದಾಯಕ್ಕೆ ನ್ಯಾಯ ಸಿಗಬೇಕಾಗಿದೆ. ಎಸ್ಟಿ ವರ್ಗಕ್ಕೆ ಸೇರ್ಪಡೆ ಮಾಡಬೇಕೆನ್ನುವ ವಿಚಾರವಾಗಿ ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ ಸೇರಿದಂತೆ ಹಲವರು ಈ ಹಿಂದೆ ಚರ್ಚಿಸಿ, ಕೇಂದ್ರದೊಂದಿಗೆ ಮಾತನಾಡಿದ್ದಾರೆ. ಎಲ್ಲ ಅರ್ಹತೆಯೂ ಇರುವುದರಿಂದ ಖಂಡಿತವಾಗಿಯೂ ಈ ಸಮುದಾಯ ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಯಾಗುವ ಆಶಾಭಾವನೆ ಇದೆ. ಇದಕ್ಕಾಗಿ ನಾವೂ ಸಹ ಕೆಲಸ ಮಾಡುತ್ತೇವೆ ಎಂದರು.

ವನಕಲ್ ಮಠದ ಬಸವ ರಮಾನಂದ ಸ್ವಾಮಿಗಳು ಆಶೀರ್ವಚನ ನೀಡಿ, ಕಾಡುಗೊಲ್ಲ ಸಮುದಾಯ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಜನಾಂಗವಾಗಿದೆ. ಈ ಸಮುದಾಯಕ್ಕೆ ಉನ್ನತ ಶಿಕ್ಷಣ ಬೇಕಾಗಿದೆ. ಸಂಘವು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ಕೆಲವು ತಾಲೂಕುಗಳಲ್ಲಿ ಕೌಶಲ್ಯ ತರಬೇತಿ ಕೇಂದ್ರ ತೆರೆಯಲು ಮುಂದಾಗಿರುವುದು ಸಂತಸದ ವಿಚಾರ. ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿಯಾದರೆ ಮಾತ್ರ ಈ ಸಮುದಾಯ ಮುಂದೆ ಬರಲು ಸಾಧ್ಯವಿದೆ ಎಂದ ಅವರು, ಕಾಡುಗೊಲ್ಲ ಸಮುದಾಯದಲ್ಲಿ ಒಬ್ಬರೂ ವಿಧಾನ ಪರಿಷತ್ ಸದಸ್ಯರಿಲ್ಲ. ಸರ್ಕಾರ ಈ ಕೊರತೆಯನ್ನು ನೀಗಿಸಬೇಕಾಗಿದೆ ಎಂದರು. ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ಬಿಬಿಎಂಪಿ ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ಕಾಡುಗೊಲ್ಲ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಸಮುದಾಯಕ್ಕೆ ಹಲವು ಸೌಲಭ್ಯಗಳು ಸಿಗಬೇಕಾಗಿದೆ. ಸರ್ಕಾರಗಳು ಈ ನಿಟ್ಟಿನಲ್ಲಿ ಮನಸ್ಸು ಮಾಡಿ ಈ ಜನಾಂಗವನ್ನು ಮುಖ್ಯವಾಹಿನಿಗೆ ತರಬೇಕಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯರಾದ ನಾಗರಾಜ ಯಾದವ್ ಸಂಘದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು. ಇದಕ್ಕೂ ಮುನ್ನ ಮೆರವಣಿಗೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾಜಿ ಸಚಿವರು, ಶಾಸಕರಾದ ಕೆ.ಎನ್.ರಾಜಣ್ಣ ಶುಭ ಕೋರಿ ಮಾತನಾಡಿದರು. ಸನ್ಮಾನಿತರಾಗಿ ದೀಪಿಕಾ ಮಾತನಾಡಿದರು. ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಜಿಲ್ಲಾಧ್ಯಕ್ಷ ದೊಡ್ಡೇಗೌಡ್ರು, ಗೌರವಾಧ್ಯಕ್ಷ ಎಸ್.ಡಿ.ಬಸವರಾಜ್, ರಾಜ್ಯ ಸಂಘದ ಮುಖಂಡರಾದ ಜಿ.ಡಿ.ಪ್ರಭುದೇವ್, ಬಸವರಾಜು, ಜಿಲ್ಲಾ ಸಂಘದ ಗಂಗಾಧರ್, ತಿಪ್ಪಯ್ಯ ಮುಂತಾದವರು ಉಪಸ್ಥಿತರಿದ್ದರು.