ಸಾರಾಂಶ
ಎಸ್.ಎಂ. ಸೈಯದ್ ಗಜೇಂದ್ರಗಡ
ಸಮೀಪದ ಕಾಲಕಾಲೇಶ್ವರ ಗ್ರಾಮದಲ್ಲಿನ ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಅಸಂಖ್ಯಾತ ಭಕ್ತ ಸಮೂಹದ ಆರಾಧ್ಯದೈವ ಕಾಲಕಾಲೇಶ್ವರ ದೇವಸ್ಥಾನಕ್ಕೆ ರೋಪ್ ವೇ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟದಲ್ಲಿ ಹಸಿರು ನಿಶಾನೆ ದೊರೆತಿದ್ದು, ಭಕ್ತ ಸಮೂಹದಲ್ಲಿ ಸಂಭ್ರಮ ಮನೆಮಾಡಿದೆ.ಹೊಸ ಪ್ರವಾಸಿ ಹಾಗೂ ಐತಿಹಾಸಿಕ ತಾಣಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ೨೦೨೪-೨೫ನೇ ಸಾಲಿನ ಆಯ-ವ್ಯಯದಲ್ಲಿ ರಾಜ್ಯದ ಪ್ರಮುಖ ೧೨ ಸ್ಥಳಗಳಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ರೋಪ್ ವೇ ಸೌಲಭ್ಯ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಕಾಲಕಾಲೇಶ್ವರ ದೇವಸ್ಥಾನದಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಕರ್ನಾಟಕ ಪ್ರವಾಸೋದ್ಯಮ ಮೂಲಸೌಲಭ್ಯ ನಿಗಮ (ಕೆಟಿಐಎಲ್) ಮೂಲಕ ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರ ಕೋರಿಕೆಯಂತೆ, ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ೨೦೨೪ ಜೂ.೧೫ರಂದು ಸರ್ಕಾರದ ನಿಯಮಾವಳಿ ಪಾಲಿಸುವಂತೆ ಸೂಚಿಸಿದ್ದರು.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕಾಲಕಾಲೇಶ್ವರ ದೇವಸ್ಥಾನ ಹಾಗೂ ಜಿಲ್ಲೆಯ ಹೊಳಲಮ್ಮ ದೇವಸ್ಥಾನ ಸೇರಿ ರಾಜ್ಯದ ಒಟ್ಟು ೧೨ ಸ್ಥಳಗಳಲ್ಲಿ ರೋಪ್ ವೇ ನಿರ್ಮಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.ಕಾಲಕಾಲೇಶ್ವರ ದೇವಸ್ಥಾನಕ್ಕೆ ಭಕ್ತರು ೧೦೦ಕ್ಕೂ ಅಧಿಕ ಮೆಟ್ಟಿಲುಗಳನ್ನು ಹತ್ತಬೇಕಿದ್ದು, ವೃದ್ಧರು ಹಾಗೂ ಅಂಗವಿಕಲರು ದೇವರ ದರ್ಶನಕ್ಕೆ ಪರದಾಡಬೇಕಾಗಿತ್ತು. ಹೀಗಾಗಿ ಶಾಸಕ ಜಿ.ಎಸ್. ಪಾಟೀಲ ಅವರು ೨೦೨೪ರಲ್ಲಿ ರೋಪ್ ವೇ ನಿರ್ಮಿಸಲು ಪ್ರಸ್ತಾವನೆ ಜತೆಗೆ ಸಚಿವರ ಗಮನ ಸೆಳೆದಿದ್ದರು.
ಪ್ರವಾಸಿ ತಾಣದ ಕೂಗಿಗೆ ಸಿಕ್ಕ ಬಲ: ಭವ್ಯ ಪರಂಪರೆ ಹಾಗೂ ಸುವರ್ಣ ಇತಿಹಾಸ ಹೊಂದಿರುವ ತಾಲೂಕಿನ ಸೂಡಿ, ಇಟಗಿ, ಕಾಲಕಾಲೇಶ್ವರ, ರೋಣ, ಡಂಬಳ ಸೇರಿ ಅನೇಕ ಸ್ಥಳಗಳನ್ನು ಪ್ರವಾಸಿ ತಾಣಗಳನ್ನಾಗಿ ಮಾರ್ಪಡಿಸಬೇಕು ಎಂಬ ಕೂಗಿತ್ತು. ಈಗ ಬೆಟ್ಟಗಳ ಸಾಲಿನಲ್ಲಿರುವ ಹಾಗೂ ಮಳೆಗಾಲದಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕರೆಯುವ, ಪಟ್ಟಣದಿಂದ ೫ ಕಿಮೀ ದೂರದಲ್ಲಿನ ಕಾಲಕಾಲೇಶ್ವರ ದೇವಸ್ಥಾನಕ್ಕೆ ರಾಜ್ಯ -ಹೊರ ರಾಜ್ಯಗಳ ಭಕ್ತರು ಆಗಮಿಸುತ್ತಾರೆ. ಈಗ ರೋಪ್ ವೇ ನಿರ್ಮಾಣಕ್ಕೆ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿರುವುದು ಭಕ್ತರ ಸಂತಸಕ್ಕೆ ಕಾರಣವಾಗಿದೆ.ಉದ್ಯೋಗ ಸೃಷ್ಟಿ ನಿರೀಕ್ಷೆ: ಪಟ್ಟಣ ಸೇರಿ ರೋಣ ಮತಕ್ಷೇತ್ರದಲ್ಲಿ ಹೇಳಿಕೊಳ್ಳುವ ಕೈಗಾರಿಕೆಗಳು ಇಲ್ಲ. ಇಲ್ಲಿಯ ಜನತೆ ಉದ್ಯೋಗ ಅರಸಿ ಅನೇಕ ಶಹರಗಳಿಗೆ ಹೋಗುವುದು ಸಾಮಾನ್ಯ. ತಾಲೂಕಿನಲ್ಲಿನ ಸೂಡಿ ಜೋಡಿ ಕಳಸ, ಇಟಗಿ ಭೀಮಾಂಬಿಕಾ ದೇವಸ್ಥಾನ, ಗಜೇಂದ್ರಗಡ ಕೋಟೆ ಇತರ ಸ್ಥಳಗಳು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಯಾದರೆ ಇಲ್ಲಿನ ದುಡಿಯುವ ಕೈಗಳಿಗೆ ಕೆಲಸ ಸಿಗುವ ಅವಕಾಶ ಹೆಚ್ಚಬಹುದು ಎಂಬ ಆಸೆ ಚಿಗುರೊಡೆದಿದೆ.
2 ತಿಂಗಳಲ್ಲಿ ಕ್ರಿಯಾಯೋಜನೆ: ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ದೇವಸ್ಥಾನಕ್ಕೆ ರೋಪ್ ವೇ ನಿರ್ಮಾಣ ಕುರಿತು ಕ್ರಿಯಾಯೋಜನೆ ಇನ್ನೂ ಎರಡು ತಿಂಗಳಲ್ಲಿ ಪೂರ್ಣಗೊಳ್ಳವ ಸಾಧ್ಯತೆಯಿದೆ. ಅಂದಾಜು ₹೧೦೦ ಕೋಟಿ ಮಂಜೂರಾಗುವ ನಿರೀಕ್ಷೆಯಿದ್ದು, ಸಾರ್ವಜನಿಕ ಸಹಭಾಗಿತ್ವ ಆಗಿರುವುದರಿಂದ ಖಾಸಗಿ ವ್ಯಕ್ತಿಗಳು ನಡೆಸಲಿದ್ದು, ಬಂದ ಹಣದಲ್ಲಿ ಶೇ. ೩೦ರಷ್ಟು ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.ತಾಲೂಕಿನಲ್ಲಿ ಪ್ರವಾಸೋದ್ಯಮವನ್ನು ಮುನ್ನಲೆಗೆ ತರುವ ಉದ್ದೇಶದಿಂದ ಪ್ರಾಥಮಿಕ ಹಂತದಲ್ಲಿ ಕಾಲಕಾಲೇಶ್ವರ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣಕ್ಕೆ ಸಚಿವ ಸಂಪುಟ ಅಸ್ತು ಎಂದಿದೆ. ಅಲ್ಲದೆ ರೋಣ, ಡಂಬಳ, ಸೂಡಿ, ಸವಡಿ, ಸೇರಿ ಅನೇಕ ಸ್ಥಳಗಳ ಕುರಿತು ಅಧಿಕಾರಿಗಳು ಮತ್ತು ಪ್ರವಾಸೋದ್ಯಮ ಸಚಿವರ ಗಮನ ಸೆಳೆಯಲಾಗಿದೆ. ಮುಂದೆ ಒಪ್ಪಿಗೆ ಸಿಗುವ ನಿರೀಕ್ಷೆಯಿದೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದ್ದಾರೆ.