ಸಾರಾಂಶ
ದೇಶದ ಸಂರಕ್ಷಣೆ, ಸೈನಿಕರ ಹೋರಾಟದ ಯಶಸ್ಸಿಗಾಗಿ ಎಲ್ಲರೂ ಪ್ರಾರ್ಥಿಸಲು ಕರೆ
ಕನ್ನಡಪ್ರಭ ವಾರ್ತೆ ಉಳ್ಳಾಲಸ್ಪೀಕರ್ ಖಾದರ್ ಅವರ ಬೇಡಿಕೆಯನ್ನ ಪರಿಗಣಿಸಿ ಸುಮಾರು ಮೂರು ಕೋಟಿ ರುಪಾಯಿ ಅನುದಾನವನ್ನ ಉಳ್ಳಾಲ ಉರೂಸಿಗೆ ಸರ್ಕಾರದಿಂದ ನೀಡಲಾಗಿದೆ. ಉಳ್ಳಾಲ ದರ್ಗಾಕ್ಕೆ ಭಕ್ತರು ಭಕ್ತಿ ಪೂರ್ವಕವಾಗಿ ಕುರಿಗಳನ್ನ ಹರಕೆ ನೀಡಿ ಸೇವೆ ಸಲ್ಲಿಸುತ್ತಾರೆ. ನಾನು ಕೂಡ ಉರೂಸ್ ಸಮಾರಂಭದ ಅನ್ನದಾನಕ್ಕೆ 50 ಕುರಿಗಳನ್ನ ಕೊಟ್ಟು ಸೇವೆ ಸಲ್ಲಿಸೋದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.ದಕ್ಷಿಣದ ಅಜ್ಮೀರ್ ಎಂದೇ ಖ್ಯಾತಿ ಪಡೆದಿರುವ ಉಳ್ಳಾಲ ದರ್ಗಾದಲ್ಲಿ ನಡೆಯುತ್ತಿರುವ ಪಂಚ ವಾರ್ಷಿಕ ಉರೂಸ್ ಕಾರ್ಯಕ್ರಮದಲ್ಲಿ ಶನಿವಾರ ಭಾಗವಹಿಸಿದ ಡಿಕೆಶಿ, ‘ಮದನಿ ಸಂಗಮ’ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪವಿತ್ರವಾದ ಈ ಪುಣ್ಯ ಕ್ಷೇತ್ರಕ್ಕೆ ಬಂದಿರುವುದು ನನ್ನ ದೊಡ್ಡ ಭಾಗ್ಯ. ನನ್ನ ಕಷ್ಟ ಸುಖದಲ್ಲಿ ಅಜ್ಮೀರ್‌ಗೆ ಭೇಟಿ ನೀಡುತ್ತಿದ್ದೆ. ಇದೀಗ ದಕ್ಷಿಣದ ಅಜ್ಮೀರ್ ಖ್ಯಾತಿಯ ಉಳ್ಳಾಲ ದರ್ಗಾಕ್ಕೆ ಬಂದಿದ್ದೇನೆ. ದರ್ಗಾ ಆಡಳಿತದಿಂದ ಆರೋಗ್ಯ, ಶಿಕ್ಷಣ, ಧಾರ್ಮಿಕ, ಸಾಮಾಜಿಕ ಸೇವಾ ಚಟುವಟಿಕೆಗಳು ನಡೆಯುತ್ತಿರುವುದು ಶ್ಲಾಘನೀಯ. ನಮಗೆ ಸಿಕ್ಕಿದ ಅವಕಾಶದಲ್ಲಿ ಸಮಾಜಕ್ಕೆ ಏನು ಕೊಡುಗೆ ನೀಡುತ್ತೇವೆಂಬುದೇ ಪ್ರಾಮುಖ್ಯ. ದೇಶದ ಐಕ್ಯತೆ, ಸೈನಿಕರ ಹೋರಾಟದ ಯಶಸ್ಸಿಗಾಗಿ ಶುಕ್ರವಾರದಂದು ಮುಸ್ಲಿಂ ಭಾಂದವರು ಮಸೀದಿಗಳಲ್ಲಿ ಪ್ರಾರ್ಥಿಸಿದ್ದು, ಸರ್ಕಾರದ ಪರವಾಗಿ ಅವರಿಗೆ ಕೋಟಿ ನಮನಗಳು ಎಂದ ಅವರು, ದೇಶದ ಸಂರಕ್ಷಣೆ, ಐಕ್ಯತೆ, ಸೈನಿಕರ ಹೋರಾಟದ ಯಶಸ್ಸಿಗೆ ಎಲ್ಲರೂ ಪ್ರಾರ್ಥಿಸುವಂತೆ ಕರೆ ನೀಡಿದರು.ರಾತ್ರಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಹಂಝ ಮಿಸ್ಬಾಹಿ ಓಟ್ಟಪ್ಪದವ್, ಅಬ್ದುಲ್ ಖಾದರ್ ಸಖಾಫಿ ಮುದುಗುಡ ಮುಖ್ಯ ಭಾಷಣ ಮಾಡಿದರು. ಅಬ್ದುಲ್ ಖಾದರ್ ಹಾಜಿ ಬೆಂಗಳೂರು ದುಆ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್, ಪುತ್ತೂರು ಶಾಸಕ ಅಶೋಕ್ ರೈ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮುಖಂಡರಾದ ಮಿಥುನ್ ರೈ, ಪದ್ಮರಾಜ್, ರಕ್ಷಿತ್ ಶಿವರಾಮ್, ಇನಾಯತ್ ಅಲಿ, ಉಳ್ಳಾಲ ತಹಸೀಲ್ದಾರ್ ಪುಟ್ಟರಾಜು, ಹಳೆ ಕೋಟೆ ಮಸೀದಿ ಅಧ್ಯಕ್ಷ ಮುಹಮ್ಮದ್ ಹಾಜಿ ಕುತ್ತಾರ್, ಖತೀಬರಾದ ಸಿರಾಜುದ್ದೀನ್ ಹಿಮಮಿ, ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕಾರ್ಯದರ್ಶಿ ಮುಸ್ತಫಾ ಮದನಿನಗರ, ಇಸ್ಹಾಕ್, ಕೋಶಾಧಿಕಾರಿ ನಾಝೀಮ್ ಮುಕಚೇರಿ ಮತ್ತಿತರರು ಉಪಸ್ಥಿತರಿದ್ದರು. ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.---------------
ಉಳ್ಳಾಲ ದರ್ಗಾ ಉರೂಸಿನ ಕೊನೆಯ ದಿನವಾದ ಮೇ 17ರಂದು ಸಂಜೆ 7 ಗಂಟೆಗೆ ಸಾರ್ವಜನಿಕ ಅನ್ನದಾನ ಪ್ರಾರಂಭವಾಗಿ 18ರ ರಾತ್ರಿ ವರೆಗೂ ನಡೆಯಲಿದೆ. ದೇಶದ ವಿವಿಧ ಕಡೆಗಳಿಂದ ಬರುವ ಸುಮಾರು ಐದು ಲಕ್ಷ ಭಕ್ತರು ಅನ್ನದಾನ ಸ್ವೀಕರಿಸಲಿದ್ದಾರೆ. ಅನ್ನದಾನದಲ್ಲಿ ಒಂದು ಸಾವಿರ ಕುರಿಗಳ ಮಾಂಸ, ಐವತ್ತು ಸಾವಿರ ಕೆ.ಜಿ. ಘೀ ರೈಸನ್ನು ಭಕ್ತರಿಗೆ ವಿತರಿಸಲಾಗುತ್ತದೆ.। ಹನೀಫ್ ಹಾಜಿ,ಉಳ್ಳಾಲ ದರ್ಗಾ ಅಧ್ಯಕ್ಷರು.