ಕನ್ನಡಪ್ರಭ ವಾರ್ತೆ ಹಳಿಯಾಳ

ಕೇಂದ್ರ ಸರ್ಕಾರವು ಮುಂಬರುವ ಅಧಿವೇಶನದಲ್ಲಿ ವಿದ್ಯುತ್ ಸುಧಾರಣಾ ಕಾಯ್ದೆ 2026ನ್ನು ಜಾರಿಗೊಳಿಸುವ ಮೂಲಕ ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿರುವ ಕ್ರಮ ಖಂಡಿಸಿ ಗುರುವಾರ ಪಟ್ಟಣದಲ್ಲಿ ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಧರಣಿ ನಡೆಸಿದರು.

ಅಖಿಲ ಭಾರತ ವಿದ್ಯುತ್ ಎಂಜಿನಿಯರ್ ಮತ್ತು ನೌಕರರ ಒಕ್ಕೂಟ ಹಾಗೂ ವಿದ್ಯುತ್ ಇಲಾಖೆಯ ಇತರೇ ಸಂಘಟನೆಗಳು ಉದ್ದೇಶಿತ ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ದೇಶವ್ಯಾಪಿ ಮುಷ್ಕರ ನಡೆಸಲು ನೀಡಿದ ಕರೆ ಬೆಂಬಲಿಸಿ ಹಳಿಯಾಳದಲ್ಲೂ ಹಾಲಿ ಹಾಗೂ ಮಾಜಿ ಹೆಸ್ಕಾಂ ನೌಕರರು ಧರಣಿ ನಡೆಸಿದರು. ಖಾಸಗೀಕರಣದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಧರಣಿ ನಿರತರ ಉದ್ದೇಶಿಸಿ ಮಾತನಾಡಿದ ಕೆಪಿಟಿಸಿಎಲ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಗಣಪತಿ ಹಳ್ಯಾಳಕರ ಮಾತನಾಡಿ, ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ವಿದ್ಯುತ್ ಇಲಾಖೆಯ ಪಾತ್ರ ಅತೀ ಮಹತ್ವದಾಗಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಉದ್ದೇಶಿತ ವಿದ್ಯುತ್ ಕಾಯ್ದೆ ತಿದ್ದುಪಡಿಯಿಂದಾಗಿ ದೇಶದಲ್ಲಿನ ವಿದ್ಯುತ್ ಇಲಾಖೆಯ ಲಕ್ಷಾಂತರ ನೌಕರರ ವರ್ಗದ ಮೇಲೆ ಅವರ ಅವಲಂಬಿತರ ಬದುಕಿನ ಮೇಲೆ ಬಾರಿ ಪರಿಣಾಮ ಬೀರಲಿದೆ. ಖಾಸಗೀಕರಣದಿಂದ ಉದ್ಯೋಗದ ಭದ್ರತೆ ಅನಿಶ್ಚಿತತೆ ಎದುರಿಸಬೇಕಾಗುತ್ತದೆ. ರೈತರಿಗೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಇನ್ನೂ ಮುಂದಿನ ದಿನಗಳಲ್ಲಿ ಉಚಿತವಾಗಲಿ ಅಥವಾ ಸಬ್ಸಿಡಿಯಲ್ಲಿ ವಿದ್ಯುತ್ ಸೌಲಭ್ಯ ದೊರೆಯುವ ಸಾಧ್ಯತೆ ಕಡಿಮೆಯಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರವು ಆದಷ್ಟು ಬೇಗ ಈ ಉದ್ದೇಶಿತ ಕಾಯ್ದೆಯನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ವಿದ್ಯುತ್ ದೇಶದಲ್ಲಿನ ಜನಸಾಮಾನ್ಯರು, ಕೈಗಾರಿಕಾದ್ಯೋಮಿಗಳು ದೇಶವ್ಯಾಪಿ ಧರಣಿಗೆ ಮುಂದಾಗಬಹುದೆಂದರು.

ಧರಣಿಯಲ್ಲಿ ಕೆಪಿಟಿಸಿಎಲ್ ನೌಕರರ ಸಂಘದ ಅಧ್ಯಕ್ಷ ಪುಂಡ್ಲಿಕ್ ಜಾಧವ, ನಿವೃತ್ ನೌಕರರ ಸಂಘದ ಕೇಂದ್ರ ಸಮಿತಿಯ ಸದಸ್ಯ ವಿಠ್ಠಲ್ ಸೂರ್ಯವಂಶಿ, ಹಾಗೂ ಹೆಸ್ಕಾಂ ಸಿಬ್ಬಂದಿಗಳ ಕಲ್ಯಾಣ ಸಂಸ್ಥೆಯ ಕಾರ್ಯದರ್ಶಿ ಗಜಾನನ ಗಜಾಕೋಶ, ರೇವಣ ಸಿದ್ದಪ್ಪ, ನವೀನ್ ಪಾವೀನ್, ಹಳಿಯಾಳ ಶಾಖೆಯ ಸಹಾಯಕ ಎಂಜಿನಿಯರ್ ( ಶಾಖಾಧಿಕಾರಿ) ಗೋಪಾಲ್ ಮಿರಾಶಿ ಹಾಗೂ ಇತರರು ಇದ್ದರು.