ಸಾರಾಂಶ
ಬೆಂಗಳೂರು : ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪೊಲೀಸರಿಗೆ ರಜೆ ಕೊಡುವುದಿಲ್ಲ. ಸೂಕ್ಷ್ಮ ಸನ್ನಿವೇಶ ಯಾವಾಗ ಸಾಮಾನ್ಯ ಸ್ಥಿತಿಗೆ ಬರುತ್ತದೋ ಗೊತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸೂಕ್ಷ್ಮ ಸನ್ನಿವೇಶ ಇರುವುದರಿಂದ ಪೊಲೀಸರಿಗೆ ರಜೆ ಮಂಜೂರು ಮಾಡಲು ಹೋಗುವುದಿಲ್ಲ. ಸದ್ಯಕ್ಕೆ ಯಾವುದೇ ರಜೆ ಇಲ್ಲ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬಂದಾಗ ಕೇಂದ್ರ ಸರ್ಕಾರ ಮಾಹಿತಿ ನೀಡಲಿದೆ. ಯಾವುದೇ ಸನ್ನಿವೇಶ ಎದುರಿಸಲೂ ನಾವು ಸಿದ್ಧರಾಗಿದ್ದೇವೆ. ಆಹಾರ ಧಾನ್ಯ, ನೀರು, ಆಸ್ಪತ್ರೆ ಸಂಬಂಧ ತಯಾರಿ ಮಾಡಿಕೊಂಡಿದ್ದೇವೆ. ಅಹಿತಕರ ಘಟನೆಗಳು ನಡೆದರೆ ಎದುರಿಸಲು ತಯಾರಾಗಿದ್ದೇವೆ. ಪ್ರಸ್ತುತ ರಾಜ್ಯದಲ್ಲಿ ಅಂತಹ ಸನ್ನಿವೇಶ ಇಲ್ಲ ಎಂದು ತಿಳಿಸಿದರು.
ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸುವ ಮೂಲಕ ಸುರಕ್ಷತೆ ಕೈಗೊಂಡಿದ್ದೇವೆ. ಪ್ರತಿಯೊಂದು ನಗರ, ಪಟ್ಟಣದಲ್ಲಿ ಜಾಗೃತಿ ವಹಿಸಿದ್ದೇವೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಕಾನೂನು ಸುವ್ಯವಸ್ಥೆಗಿಂತ ಹೆಚ್ಚಾಗಿ, ಯುದ್ಧ ಭೀತಿ ಇದೆ. ಗಡಿ ಪ್ರದೇಶದಲ್ಲಿ ಆಗುತ್ತಿರುವ ಚಟುವಟಿಕೆಗಳು, ಉಗ್ರರ ವಿರುದ್ಧ ಸೇನಾ ಪಡೆ ಕ್ರಮ ತೆಗೆದುಕೊಂಡಿದೆ. ಸಂಘರ್ಷ ತೀವ್ರಗೊಂಡರೆ ಯುದ್ಧದ ಸ್ಥಿತಿ ಬರಬಹುದು ಎಂದು ಕೇಂದ್ರ ಸರ್ಕಾರ ಪ್ರತಿಯೊಂದು ರಾಜ್ಯ ಸರ್ಕಾರಗಳಿಗೆ ಕೆಲ ಸೂಚನೆಗಳನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ ಎಂದರು.