ಇಂದಿಗೂ ದಲಿತರಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ : ಡಾ.ಜಿ.ಪರಮೇಶ್ವರ್

| N/A | Published : Apr 26 2025, 12:49 AM IST / Updated: Apr 26 2025, 01:13 PM IST

ಇಂದಿಗೂ ದಲಿತರಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ : ಡಾ.ಜಿ.ಪರಮೇಶ್ವರ್
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದಲಿತರಿಗಿನ್ನೂ ದೇವಸ್ಥಾನಕ್ಕೆ ಪ್ರವೇಶಿಸುವಂತಿಲ್ಲ. ಬೇರೆಯವರಿಗೆ ಸಂವಿಧಾನ ಬೇಕು, ಸಂವಿಧಾನ ರಚಿಸಿದ ದಲಿತ ಅಂಬೇಡ್ಕರ್ ಎಂದೇ ಈಗಲೂ ಬಿಂಬಿಸುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.

 ಮಾಗಡಿ : ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದಲಿತರಿಗಿನ್ನೂ ದೇವಸ್ಥಾನಕ್ಕೆ ಪ್ರವೇಶಿಸುವಂತಿಲ್ಲ. ಬೇರೆಯವರಿಗೆ ಸಂವಿಧಾನ ಬೇಕು, ಸಂವಿಧಾನ ರಚಿಸಿದ ದಲಿತ ಅಂಬೇಡ್ಕರ್ ಎಂದೇ ಈಗಲೂ ಬಿಂಬಿಸುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ 136ನೇ ಹಾಗೂ ಬಾಬು ಜಗಜೀವನ ರಾಂ 118ನೇ ಜಯಂತ್ಯುತ್ಸವ, ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಅಂಬೇಡ್ಕರ್‌ ಕೇವಲ ಒಂದು ಜನಾಂಗಕ್ಕೆ ಮಾತ್ರ ಸಂವಿಧಾನ ರಚಿಸಿಲ್ಲ. ಸಕಲರಿಗೂ ಸಮಾನ ಸೌಲಭ್ಯಗಳನ್ನು ಒದಗಿಸುವ ರೀತಿಯಲ್ಲಿ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಡಿವೈಎಸ್ಪಿ ಕಚೇರಿ ಮಾಗಡಿಗೆ: ಶಾಸಕ ಬಾಲಕೃಷ್ಣರ ಮನವಿಯಂತೆ ಡಿವೈಎಸ್ಪಿ ಕಚೇರಿ ಮಾಗಡಿಗೆ ವರ್ಗಾಯಿಸಲಾಗುವುದು. ಜೊತೆಗೆ ಪೊಲೀಸ್ ಮತ್ತು ಗೃಹರಕ್ಷಕ ಸಿಬ್ಬಂದಿಗೆ ಅನುಕೂಲವಾಗುವ ವಸತಿ ಸಮುಚ್ಛಯ ನಿರ್ಮಾಣಕ್ಕೆ ಅನುಮೋದನೆ ನೀಡಲಾಗುವುದು. ಮಾಗಡಿ ತಾಲೂಕಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಲು ನಾನು ಸಿದ್ದನಿದ್ದೇನೆ. ಎಲ್ಲರನ್ನೂ ಒಗ್ಗೂಡಿಸಿ ಇಬ್ಬರು ಮಹಾ ನಾಯಕರ ಜಯಂತಿಯನ್ನು ಯಶಸ್ವಿಯಾಗಿ ಶಾಸಕ ಬಾಲಕೃಷ್ಣ ಆಚರಿಸುತ್ತಿರುವು ಉತ್ತಮ ಕೆಲಸ. ಎಲ್ಲರೂ ಒಗ್ಗಟ್ಟಾಗಿ ನಮಗೆ ಬರಬೇಕಾದ ಸೌಲಭ್ಯಗಳನ್ನು ಪಡೆದಾಗ ಮಾತ್ರ ಅಂಬೇಡ್ಕರ್ ನಮಗೆ ಸಂವಿಧಾನ ನೀಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಮುಂದಿನ 2028ರಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ಎರಡನೇ ಸಾಲಿನಲ್ಲಿರುವ ಶಾಸಕರಿಗೆ ಸಚಿವ ಸ್ಥಾನ ಕೊಟ್ಟಾಗ ಮಾತ್ರ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಶಾಸಕ ಬಾಲಕೃಷ್ಣರಿಗೆ ಈ ಬಾರಿ ಸಚಿವ ಸ್ಥಾನ ಕೊಡಬೇಕು ಎಂದು ನಾನು ಜಿ.ಪರಮೇಶ್ವರ್ ಖುದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.

ಶಾಸಕ ಬಾಲಕೃಷ್ಣ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗೂ ಮುಖ್ಯಮಂತ್ರಿ ಸ್ಥಾನ ಸಿಗಲಿದೆ. ಒಬ್ಬರಿಗೆ ಮೊದಲು ಸಿಗಬಹುದು. ಇನ್ನೊಬ್ಬರಿಗೆ ನಂತರ ಸಿಗಬಹುದು. 75 ವರ್ಷ ಕಳೆದರೂ ಇಂದಿಗೂ ತಾಲೂಕಿನಲ್ಲಿ ದಲಿತರಿಗೆ ಸ್ಮಶಾನ ಜಾಗ ಇಲ್ಲದಿರುವುದು ಬೇಸರದ ವಿಚಾರ. ಅಧಿಕಾರಿಗಳಿಗೆ ಹೇಳಿ ಮುಂದಿನ ಅಂಬೇಡ್ಕರ್ ಜಯಂತಿ ಒಳಗೆ ಎಲ್ಲಾ ದಲಿತ ಕಾಲೋನಿಗಳಲ್ಲಿ ಸ್ಮಶಾನ ಹಾಗೂ ಉಳುವವರಿಗೆ ಭೂಮಿ ಮಂಜೂರಾತಿ ಮಾಡಿಸುತ್ತೇವೆ. ದಲಿತ ಮುಖಂಡರು ಯಶಸ್ವಿಯಾಗಿ ಅಂಬೇಡ್ಕರ್ ಜಯಂತಿಯನ್ನು ಅದ್ಧೂರಿಯಾಗಿ ತಾಲೂಕಿನಲ್ಲಿ ಆಚರಿಸಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಮೈಸೂರು ಉರಿಲಿಂಗ ಪೆದ್ದಿ ಮಠದ ದಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಈ ದೇಶವನ್ನು ಇಬ್ಬರಿಗೆ ಹಂಚಿದ್ದು ಒಬ್ಬರು ಮಾರುವವರು ಇನ್ನೊಬ್ಬರು ಕೊಳ್ಳುವವರಿಗೆ ನೀಡಲಾಗಿದೆ. ಸಂವಿಧಾನ ಜಾರಿಗೆ ತರುವ ಸ್ಥಾನಕ್ಕೆ ದಲಿತರು ಇಲ್ಲಿವರೆಗೂ ಬರೆದಿರುವುದು ಬೇಸರ ತಂದಿದೆ. ಜೈ ಭೀಮ್ ಎಂದು ಹೇಳುವ ನಾವು ಮಲ್ಲಿಕಾರ್ಜುನ ಖರ್ಗೆಗೆ ಜಿ.ಪರಮೇಶ್ವರ್ ಅವರಿಗೆ ಮುನಿಯಪ್ಪನವರಿಗೆ ಇಲ್ಲಿಯವರೆಗೂ ಕಾನೂನು ಜಾರಿ ಮಾಡುವ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ ಎಂದರೆ ಬೇಸರ ಹೊರಹಾಕಿದರು.

ಪಟ್ಟಣದ ಕಲ್ಯಾಗೇಟ್ ನ ವಿನಾಯಕ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾವ್ ಜೀವನ ಆಧಾರಿತ ವಿಶೇಷ ವಾಹನಕ್ಕೆ ಚಾಲನೆ ನೀಡಲಾಯಿತು. ವಿವಿಧ ಕಲಾತಂಡಗಳೊಂದಿಗೆ ಮಾಗಡಿ ಪಟ್ಟಣದಲ್ಲಿ ಅದ್ಧೂರಿ ಮೆರವಣಿಗೆ ಮಾಡಲಾಯಿತು.

ಇದೇ ವೇಳೆ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿರುವ ಪರಿಶಿಷ್ಟ ಮುಖಂಡರು, ಆಶಾ, ಅಂಗನವಾಡಿ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸೋಲೂರಿನ ಪಾಲನಹಳ್ಳಿ ಮಠದ ಸಿದ್ದರಾಜ ಸ್ವಾಮೀಜಿ, ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಎಚ್.ಎಂ.ರೇವಣ್ಣ, ಮಾಜಿ ಸಂಸದ ಡಿ.ಕೆ.ಸುರೇಶ್, ಬೆಸ್ಕಾಂ ಮಾಜಿ ನಿರ್ದೇಶಕ ಬಿ.ವಿ.ಜಯರಾಂ, ಗುತ್ತಿಗೆದಾರ ಕೆಂಪರಾಜು, ಮುಖಂಡರಾದ ಕಮಲಮ್ಮ ಕಲ್ಕೆರೆ ಶಿವಣ್ಣ, ಮಂಜೇಶ್, ವನಜ, ನರಸಿಂಹಮೂರ್ತಿ, ರಮ್ಯಾ ನರಸಿಂಹಮೂರ್ತಿ, ಬಿ.ಟಿ. ವೆಂಕಟೇಶ್, ಕೃಷ್ಣ, ನಾಗರಾಜು, ಗೋಪಾಲ್, ಶಿವಕುಮಾರ್ ಇತರರು ಭಾಗವಹಿಸಿದ್ದರು.