ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
70ರ ದಶಕದಲ್ಲಿ ನಡೆದ ಕರ್ನಾಟಕ ದಲಿತ ಚಳುವಳಿ 2025ನೇ ವರ್ಷದಲ್ಲಿ 50ರ ಸಂಭ್ರಮದಲ್ಲಿದೆ. ಇದರ ಅಂಗವಾಗಿ ಏ.28ರಂದು ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮ ಸಮಾವೇಶ ನಡೆಯಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಬಿ.ಕೆ. ವಸಂತ್ ಹೇಳಿದರು.ಅವರು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 50 ವರ್ಷಗಳ ಹಿಂದೆ ನಾಡಿನ ಸಮಕಾಲೀನ ಪ್ರಗತಿಪರ ಸಮಾನ ಮನಸ್ಕ ಚಿಂತಕರು, ಸಾಹಿತಿಗಳು, ಲೇಖಕರು, ಪತ್ರಕರ್ತರು ಹೋರಾಟಗಾರರು ನಡೆಸಿದ ಚಿಂತನೆ, ಹೋರಾಟಗಳ ಫಲವೆಂಬಂತೆ ಕರ್ನಾಟಕ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ‘ಬೂಸಾ’ ಚಳುವಳಿ ಹೊತ್ತಿಸಿದ ಕಿಡಿ ಪ್ರೊ.ಬಿ.ಕೃಷ್ಣಪ್ಪನವರ ನಾಯಕತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹುಟ್ಟಿಗೆ ಕಾರಣವಾಯಿತೆಂಬುದು ಇತಿಹಾಸ. ಚಂದ್ರಗುತ್ತಿಯ ಅನಿಷ್ಟ ಬೆತ್ತಲೆ ಸೇವೆ, ಬೆಂಡಿಗೇರಿ ದೌರ್ಜನ್ಯ, ಚುಂಚಿ ಕಾಲೋನಿ ಭೂ ಹೋರಾಟ, ಅನುಸೂಯಾ ಅತ್ಯಾಚಾರ ಪ್ರಕರಣ, ಕಂಬಾಲಪಳ್ಳಿ ದಲಿತರ ಸಾಮೂಹಿಕ ಸಜೀವ ದಹನ ಪ್ರಕರಣ ಮುಂತಾದ ನೂರಾರು ಘೋರ ದೌರ್ಜನ್ಯ ಪ್ರಕರಣಗಳ ವಿರುದ್ಧದ ಐತಿಹಾಸಿಕ ಹೋರಾಟಗಳ ಮೂಲಕ ಸಂಘಟನೆಯು ಶೋಷಿತ ಸಮುದಾಯಗಳನ್ನು ಸಂಘಟಿಸುತ್ತಾ ಹೋರಾಟಗಳ ಮೂಲಕ ರಾಜ್ಯಾದ್ಯಂತ ವ್ಯಾಪಿಸಿತು ಎಂದರು.
ಸಮಾವೇಶದಲ್ಲಿ ಮೈಸೂರು ವಿಶ್ವ ಮೈತ್ರಿ ಬೌದ್ಧ ವಿಹಾರದ ಡಾ. ಕಲ್ಯಾಣಸಿರಿ ಭಂತೇಶ್ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಕರ್ನಾಟಕ ವಿಧಾನ ಸಭಾ ಅಧ್ಯಕ್ಷ ಯು.ಟಿ. ಖಾದರ್ ಉದ್ಘಾಟನೆ ಮಾಡುವರು. ಕರ್ನಾಟಕ ದ.ಸಂ.ಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ರಾಜ್ಯ ಸಂಚಾಲಕ ಗುರುಮೂರ್ತಿ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಅರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಎಂಎಲ್‌ಸಿ ಪ್ರತಾಪ ಸಿಂಹ ನಾಯಕ್, ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.ಗೌರವಾಧ್ಯಕ್ಷ ಕೇಶವ ಮಾತನಾಡಿ, 50ವರ್ಷಗಳ ಹಿಂದೆ ಪ್ರಾರಂಭವಾದ ದಲಿತ ಸಮಿತಿಯ ಈ ಕಾರ್ಯಕ್ರಮಕ್ಕೆ ರಾಜಕೀಯ ನಾಯಕರು, ವಿವಿಧ ಸಂಘಟನೆಗಳು ಸಹಕಾರ ನೀಡಲಿದ್ದು, ಈ ಸಮಾವೇಶ ಮುಂದಿನ ಜನಾಂಗಕ್ಕೆ ಹೊಸ ರೂಪರೇಶೆ ಕೊಡುವ ಕಾರ್ಯಕ್ರಮ ಆಗಲಿದೆ ಎಂದರು.
ಕಾರ್ಯಾಧ್ಯಕ್ಷ ಶೇಖರ ಕುಕ್ಕೇಡಿ ಮಾತನಾಡಿದರು.ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಚುಶ್ರೀ ಬಾಂಗೇರು, ಕೋಶಾಧಿಕಾರಿ ಶ್ರೀಧರ್ ಎಸ್. ಕಳಂಜ, ಕಾರ್ಯಾಧ್ಯಕ್ಷರಾದ ಕೆ.ನೇಮಿರಾಜ್ ಕಿಲ್ಲೂರು, ಸಂಜೀವ ಆರ್. ಬೆಳ್ತಂಗಡಿ, ರಮೇಶ್ ಆರ್. ಬೆಳ್ತಂಗಡಿ, ಉಪಾಧ್ಯಕ್ಷ ಪಿ.ಕೆ. ರಾಜು ಪಡಂಗಡಿ, ಸವಿತಾ ಎನ್. ಅಟ್ರಿಂಜೆ, ಸುಂದರ ನಾಲ್ಕೂರು, ಸುರೇಶ್ ಗೇರುಕಟ್ಟೆ ಉಪಸ್ಥಿತರಿದ್ದರು.