ದಲಿತ ನಾಯಕನಾಗಿ ಅಂಬೇಡ್ಕರ್ ಸೀಮಿತ ಬೇಡ: ಡಾ.ಕರಿಯಪ್ಪ ಮಾಳಿಗೆ

| Published : Apr 15 2025, 12:56 AM IST

ದಲಿತ ನಾಯಕನಾಗಿ ಅಂಬೇಡ್ಕರ್ ಸೀಮಿತ ಬೇಡ: ಡಾ.ಕರಿಯಪ್ಪ ಮಾಳಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಅರಿವಿನ ಸಂಕೇತವಾದ ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಮೀಸಲಾತಿ ವಿಷಯಕ್ಕೆ, ಸಂವಿಧಾನದ ರಚನೆ ಪ್ರಸ್ತಾಪ, ಇಲ್ಲವೆ ದಲಿತ ನಾಯಕ ಎಂಬ ಹೇಳಿಕೆಗಳಿಗೆ ಸೀಮಿತಗೊಳಿಸುವುದು ಬೇಡ ಎಂದು ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ ಅಭಿಪ್ರಾಯ ಪಟ್ಟರು.

ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಅರಿವಿನ ಸಂಕೇತವಾದ ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಮೀಸಲಾತಿ ವಿಷಯಕ್ಕೆ, ಸಂವಿಧಾನದ ರಚನೆ ಪ್ರಸ್ತಾಪ, ಇಲ್ಲವೆ ದಲಿತ ನಾಯಕ ಎಂಬ ಹೇಳಿಕೆಗಳಿಗೆ ಸೀಮಿತಗೊಳಿಸುವುದು ಬೇಡ ಎಂದು ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ ಅಭಿಪ್ರಾಯ ಪಟ್ಟರು.

ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಆಧುನಿಕ ಭಾರತದ ರಚನೆಗೆ, ಸಮಾನತೆ, ಸೌಹಾರ್ದತೆ ಮತ್ತು ಸಾಮರಸ್ಯದ ಬದುಕಿಗೆ ಅಂಬೇಡ್ಕರ್ ಚಿಂತನೆಗಳು ಆದರ್ಶವಾಗಬೇಕಿದೆ ಎಂದರು.

ದೇಶದ ಒಂದು ಪುಟ್ಟ ಹಳ್ಳಿಯಿಂದ ಹಿಡಿದು, ವಿಶ್ವಸಂಸ್ಥೆಯ ವರೆಗೂ ಡಾ.ಬಿ.ಆರ್.ಅಂಬೇಡ್ಕರ್ ಅರಿವನ್ನು ವಿಸ್ತರಿಸಿದ್ದಾರೆ. ಅಂಬೇಡ್ಕರ್ ಕುರಿತ ಚರ್ಚೆಗಳು, ಸಂವಾದಗಳು, ಚಳುವಳಿಗಳು, ಜಯಂತಿಗಳು ನಡೆಯುತ್ತಿವೆ. ಸಂಭ್ರಮ ಸಡಗರ, ಅದ್ದೂರಿ ಆಡಂಬರದ ಸಮಾರಂಭಗಳೂ ನಡೆಯುತ್ತಿವೆ ಎಂದರು.

ಈ ಹೊತ್ತಿನ ಯಾವ ರಾಜಕೀಯ ಪಕ್ತಗಳೂ ಅಂಬೇಡ್ಕರ್ ಅವರನ್ನು ನಿರ್ಲಕ್ಷಿಸುವಂತಿಲ್ಲ. ಎಡ-ಬಲ ಪ್ರಗತಿಪರ ಪಕ್ತಗಳಿಗೂ ಅಂಬೇಡ್ಕರ್ ಬಳಕೆಯಾಗುತ್ತಿರುವುದು ಅವರ ಅನಿವಾರ್ಯ ಮತ್ತು ಅಗತ್ಯತೆಯನ್ನು ಮನದಟ್ಟು ಮಾಡಿವೆ. ಜೊತೆಗೆ ಇದು ಅಂಬೇಡ್ಕರ್ ಅವರ ಅರಿವಿಗೆ, ಅವರ ಚಿಂತನೆಗೆ, ಅವರ ಹೋರಾಟಕ್ಕೆ ಸಿಕ್ಕ ಗೌರವ ಎಂದರು.

ಅರಿವು, ಆಲೋಚನೆಗಳು, ಯಾರ ಸ್ವತ್ತು ಅಲ್ಲ. ಅವು ಸಾಧಕನ ಸ್ವತ್ತು ಎನ್ನುವುದನ್ನು ನಮ್ಮ ನಡುವೆ ಇಂದಿಗೂ ಇರುವ, ಮುಂದೆಯೂ ಇರುವ ಅಂಬೇಡ್ಕರ್ ಮಾರ್ಗದಲ್ಲಿ ಕಾಣಬೇಕಿದೆ. ದಲಿತರು, ಹಿಂದುಳಿದವರು, ಮಹಿಳೆಯವರು, ಅಲ್ಪ ಸಂಖ್ಯಾತರನ್ನು ಒಳಗೊಂಡಂತೆ ಅಕ್ಷರ ವಂಚಿತ, ಸೌಲಭ್ಯವಂಚಿತ ಸಮುದಾಯಗಳ, ದಮನಿತರ ಪರವಾದ ಮಾನವತಾವಾದಿ ಎನ್ನುವುದನ್ನು ಅರಿಯಬೇಕು ಎಂದು ಹೇಳಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಹರಿಪ್ರಸಾದ್, ಹಿರಿಯ ವ್ಯವಸ್ಥಾಪಕ ಚಕ್ರಪಾಣಿ, ವ್ಯವಸ್ಥಾಪಕ ಶಿವಪ್ರಸಾದ್ ಇದ್ದರು.