ಸಾರಾಂಶ
ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದು, ‘ಸಿದ್ದರಾಮಯ್ಯ ಅವರ ಬಗ್ಗೆ ಸತ್ಯ ಹೇಳಿದರೆ ಹೊಗಳಿಕೆ ಹೇಗೆ?’ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು : ‘ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರನ್ನು ಯಾರಿಗೂ ಹೋಲಿಸಲಾಗುವುದಿಲ್ಲ. ಅವರೊಬ್ಬ ಶ್ರೇಷ್ಠ ಆರ್ಥಿಕ ತಜ್ಞ’ ಎಂದು ಹೊಗಳಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದು, ‘ಸಿದ್ದರಾಮಯ್ಯ ಅವರ ಬಗ್ಗೆ ಸತ್ಯ ಹೇಳಿದರೆ ಹೊಗಳಿಕೆ ಹೇಗೆ?’ ಎಂದು ಪ್ರಶ್ನಿಸಿದ್ದಾರೆ.
ಶನಿವಾರ ತುಮಕೂರಿನಲ್ಲಿ ಮಾತನಾಡಿದ್ದ ಪರಮೇಶ್ವರ್ ಅವರು, ರಾಜ್ಯದ ಆಡಳಿತ ಹಾಗೂ ಆರ್ಥಿಕತೆಯನ್ನು ಸಿದ್ದರಾಮಯ್ಯ ಅವರಿಗಿಂತ ಹೆಚ್ಚಾಗಿ ಅರ್ಥ ಮಾಡಿಕೊಂಡವರು ದೇಶದಲ್ಲೇ ಇಲ್ಲ. ಅವರೊಬ್ಬ ಶ್ರೇಷ್ಠ ಆರ್ಥಿಕ ತಜ್ಞ. ದೇಶದ ಪ್ರಸ್ತುತ ರಾಜಕೀಯದಲ್ಲಿ ಅವರೊಂದಿಗೆ ಯಾರನ್ನೂ ಹೋಲಿಸಲಾಗದು ಎಂದು ಹೇಳಿದ್ದರು.
ಈ ಬಗ್ಗೆ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಸತ್ಯಾಂಶಗಳನ್ನು ಹೇಳಿದರೆ ಹೊಗಳಿಕೆ ಏನು ಬಂತು? ಅವರು 16 ಬಜೆಟ್ ಮಂಡಿಸಿದ್ದು ಸುಳ್ಳೇ? ಅವರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾದರಿ ಅಲ್ಲವೇ? ಅವರ ಆರ್ಥಿಕ ಪರಿಣಿತಿ ಸುಳ್ಳೇ? ಇದರಲ್ಲಿ ಹೊಗಳಿಕೆ ಯಾವುದು ಎಂದು ಪ್ರಶ್ನಿಸಿದರು. ಇದೇ ವೇಳೆ ಮುಖ್ಯಮಂತ್ರಿ ಬದಲಾವಣೆ ಈಗ ಅಪ್ರಸ್ತುತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.