- ಎಸ್‌ಡಿಪಿಐಗೆ ಮತ ಹಾಕದಂತೆ ತಡೆಯಲು ಕೆಲ ವಾರ್ಡ್‌ಗೆ ₹15 ಕೋಟಿ ಬಳಕೆ: ಅಫ್ಸರ್ ಕೊಡ್ಲಿಪೇಟೆ ಆರೋಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷವೊಂದರಿಂದ ಸುಮಾರು ₹500 ಕೋಟಿ ಕಪ್ಪುಹಣ ಚಲಾವಣೆಯಾಗಿದ್ದು, ಪಾಲಿಕೆ ವ್ಯಾಪ್ತಿಯ ಕೆಲ ವಾರ್ಡ್‌ಗಳಲ್ಲಿ ಮುಖಂಡರಿಗೆ ₹15 ಕೋಟಿ ಕೊಟ್ಟು, ಎಸ್‌ಡಿಪಿಐಗೆ ಮತ ಹಾಕದಂತೆ ನೋಡಿಕೊಳ್ಳುವಂತೆ ಮಾಡಿದ್ದರು ಎಂದು ಕ್ಷೇತ್ರದ ಪರಾಜಿತ ಎಸ್‌ಡಿಪಿಐ ಅಧ್ಯಕ್ಷ ಅಫ್ಸರ್ ಕೊಡ್ಲಿಪೇಟೆ ಆರೋಪಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರ್ಡ್‌ಗೆ ₹15 ಕೋಟಿಯಂತೆ ಕೊಟ್ಟ ಹಣದಿಂದಾಗಿ ನಮಗೆ ಬರಬೇಕಾಗಿದ್ದ ಇನ್ನೂ 10 ಸಾವಿರ ಮತಗಳು ನಮ್ಮ ಕೈತಪ್ಪಿವೆ. ಕೆಲ ವಾರ್ಡ್‌ನಲ್ಲಿ ಹಣ ಕೊಟ್ಟು, ಎಸ್‌ಡಿಪಿಐಗೆ ಮತ ಹಾಕುವಂತೆ ಮುಖಂಡರು ಹೇಳಿದರೆ, ಮತ್ತೆ ಕೆಲವರು ₹15 ಕೋಟಿ ಹಣದಲ್ಲಿ ಬಹುತೇಕ ಹಣ ತಾವು ಇಟ್ಟುಕೊಂಡಿದ್ದಾರೆ. ಒಂದುವೇಳೆ ₹15 ಕೋಟಿಯಂತೆ ವಾರ್ಡ್‌ಗಳಿಗೆ ಕೊಡದಿದ್ದರೆ ದಕ್ಷಿಣ ಕ್ಷೇತ್ರ ಗೆಲ್ಲಬೇಕೆಂಬ ಬಿಜೆಪಿ ಕನಸು ನನಸಾಗಿರುತ್ತಿತ್ತು ಎಂದರು.

18,875 ಕುಟುಂಬಗಳು ಬೆಂಬಲಿಸಿದ್ದಕ್ಕೆ ಚಿರಋಣಿ:


ನಾನು ತೀರ್ಮಾನ ಮಾಡಿಯಾಗಿದ್ದು, ದಾವಣಗೆರೆಯೇ ಇನ್ನು ಮುಂದೆ ನನ್ನ ಕರ್ಮಭೂಮಿ. ಏನೂ ಅಲ್ಲದ ನನಗೆ 18,875 ಕುಟುಂಬಗಳು ಬೆಂಬಲಿಸಿವೆ. ಇವೆಲ್ಲಾ ಸ್ವಾಭಿಮಾನದ ಮತಗಳಾಗಿದ್ದು, ಆ ಎಲ್ಲ ಕುಟುಂಬಗಳಿಗೆ ನಾನು ಚಿರಋಣಿ. ಇಲ್ಲಿನ ಮಿಲ್ಲತ್ ಕಾಲನಿಗೆ ನನ್ನ ಮನೆಯನ್ನು ಬದಲಾಯಿಸಿದ್ದೇನೆ. ನನಗೆ ಇಲ್ಲಿ ಮತದಾರರು ಓಟು ಕೊಟ್ಟಿದ್ದಾರೆ, ನೋಟು ಕೊಟ್ಟಿದ್ದಾರೆ. ನಾನು ಒಂದೇ ಒಂದು ರುಪಾಯಿ ಸಹ ಖರ್ಚು ಮಾಡಿಲ್ಲ. ಕ್ರೌಡ್ ಫಂಡಿಂಗ್ ಮೂಲಕ ನನಗೆ ₹9.5 ಲಕ್ಷ ಸಹ ಬಂದಿದ್ದು, ಅದನ್ನೇ ಬಳಸಿ ಚುನಾವಣೆ ಮಾಡಿದ್ದೇನೆ ಎಂದು ಹೇಳಿದರು.

ನಾನೊಬ್ಬ ಹೋರಾಟಗಾರ. ವಿಧಾನಸಭೆ ಚುನಾವಣೆಗೆ ಇದು ನನ್ನ ಚೊಚ್ಚಲ ಸ್ಪರ್ಧೆಯಾಗಿತ್ತು. 18 ಸಾವಿರಕ್ಕೂ ಅಧಿಕ ಕುಟುಂಬ ನನ್ನ ಜೊತೆಗಿವೆ. ಮುಂದಿನ ದಿನಗಳಲ್ಲಿ ಮಹತ್ತರವಾದ ಮಹಾನಗರ ಪಾಲಿಕೆ ಚುನಾವಣೆ ಬರಲಿದೆ. ಪಾಲಿಕೆ ಚುನಾವಣೆಗೂ ನಮ್ಮ ಪಕ್ಷ ಸ್ಪರ್ಧಿಸಲಿದೆ. ಈಗಾಗಲೇ ಅನೇಕರು ಆಕಾಂಕ್ಷಿಗಳು ಮುಂದೆ ಬಂದಿದ್ದಾರೆ. ಜನರಿಗೆ ಧನ್ಯವಾದ ತಿಳಿಸಲು ಹೋದಾಗ ಎಸ್‌ಡಿಪಿಐಗೆ ಬೆಂಬಲಿಸುವಾಗಿ ಹೇಳುತ್ತಿದ್ದಾರೆ. ಇದು ಆಶಾದಾಯಕ ಸಂಗತಿ. ವಿಧಾನಸಭೆ ಚುನಾವಣೆಗೆ ನನಗಿಂತ ಒಳ್ಳೆಯ ವ್ಯಕ್ತಿ ಬಂದರೆ ಖಂಡಿತಾ ಅವಕಾಶ ನೀಡುತ್ತೇವೆ. ಎಂಎಲ್‌ಸಿ ಕೆ.ಅಬ್ದುಲ್ ಜಬ್ಬಾರ್ ಸಹ ನಮ್ಮ ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತಿಸುತ್ತೇವೆ. ನಮ್ಮ ಪಕ್ಷ ಈ ಬಗ್ಗೆ ತೀರ್ಮಾನಿಸುತ್ತದೆ ಎಂದು ಅವರು ತಿಳಿಸಿದರು.

ಶ್ಯಾಡೋ ಎಂಎಲ್‌ಎ ಆಗಿಯೇ ಕೆಲಸ:

ಅಕ್ರಮವಾಗಿರಲಿ, ಸಕ್ರಮವೇ ಆಗಿರಲಿ ಕಾಂಗ್ರೆಸ್ಸಿನ ಸಮರ್ಥ ಎಂ. ಶಾಮನೂರು ಗೆಲುವು ಗೆಲುವೇ. ಸಮರ್ಥಗೆ ನಾನು ಮನವಿ ಮಾಡುತ್ತೇನೆ. ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ₹100 ಕೋಟಿ ಅನುದಾನ ಅಲಾಟ್ ಆಗಿದೆ. ಆದ್ಯತೆ ಮೇರೆಗೆ ಕ್ಷೇತ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಿ, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ, ಜನವಸತಿ ಪ್ರದೇಶಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲಿ. ಕ್ಷೇತ್ರದಲ್ಲಿ ನಾನು ಶ್ಯಾಡೋ ಎಂಎಲ್‌ಎ ಆಗಿಯೇ ಕೆಲಸ ಮಾಡುತ್ತೇನೆ. ನಿಮ್ಮ ಅಂಕುಡೊಂಕುಗಳನ್ನು ತೋರಿಸಿ ಕೊಡುತ್ತೇನೆ. ಅಭಿವೃದ್ಧಿ ವಿಚಾರ, ಕ್ಷೇತ್ರದ ಜನರ ಸಮಸ್ಯೆ ವಿಚಾರವಾಗಿ ನನ್ನ ಸಲಹೆ, ಸಹಕಾರ ನೀಡಲು ನಾನು ಸದಾ ಸಿದ್ಧ ಎಂದು ಅವರು ಘೋಷಿಸಿದರು.

ಇಡೀ ಸರ್ಕಾರ, ಸಚಿವರೇ ಉಪ ಚುನಾವಣೆ ಮಾಡಲು ಇಲ್ಲಿಗೆ ಬಂದಿದ್ದರು. ಕೆಲ ಸ್ಲಂಗಳಲ್ಲಿ ಕಾಂಗ್ರೆಸ್ಸಿನವರು ಅಪಪ್ರಚಾರ ಮಾಡಿದ್ದರು. ಕಾಂಗ್ರೆಸ್ ಪಕ್ಷ ಸೋತರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಗೃಹಲಕ್ಷ್ಮಿ ಯೋಜನೆಯನ್ನೇ ನಿಲ್ಲಿಸುತ್ತಾರೆಂಬ ವದಂತಿ ಹಬ್ಬಿಸಿದರು. ಕೆಲವೊಂದಿಷ್ಟು ಮುಗ್ಧ ಜನರು ಅದನ್ನೇ ನಂಬಿದರು. ಉಪ ಚುನಾವಣೆಯ ಮೂಲಕ ದಾವಣಗೆರೆ ದಕ್ಷಿಣ ಜನರು ಬದಲಾವಣೆ ಬಯಸಿದ್ದರು ಎಂಬ ಸಂದೇಶ ರವಾನೆಯಾಗಿದೆ. ಮುಂದಿನ ದಿನಗಳಲ್ಲಿ ಅಂತಹ ಬದಲಾವಣೆಯನ್ನು ಕಾಣಬಹುದು ಎಂದು ಅಫ್ಸರ್ ಕೊಡ್ಲಿಪೇಟೆ ಹೇಳಿದರು.

ಪಕ್ಷದ ಜಿಲ್ಲಾಧ್ಯಕ್ಷ ಎ.ಆರ್.ತಾಹೀರ್, ಉಪಾಧ್ಯಕ್ಷ ರಜ್ವಿ ರಿಯಾಜ್ ಅಹಮ್ಮದ್, ಜಿಲ್ಲಾ ಸಮಿತಿ ಸದಸ್ಯರಾದ ಇಸ್ಮಾಯಿಲ್ ಜಬೀವುಲ್ಲಾ, ಮಹಮ್ಮದ್ ಮೊಹಸೀನ್, ಮನ್ಸೂರ್ ಅಲಿ ಇತರರು ಇದ್ದರು.

- - -

(ಬಾಕ್ಸ್‌)

* ಸರ್ಕಾರದ ಕೈಗೊಂಬೆಯಾದ ಅಧಿಕಾರಿಗಳು: ಅಫ್ಸರ್

- ಸ್ಟ್ರಾಂಗ್ ರೂಂ ಬೀಗ ಯಾರ ಮನೆಯಲ್ಲಿದೆ, ಯಾರ ಜೇಬಿನಲ್ಲಿದೆ: ಎಸ್‌ಡಿಪಿಐ ಪ್ರಶ್ನೆ ಕನ್ನಡಪ್ರಭ ವಾರ್ತೆ ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆಯಲ್ಲಿ ಜಿಲ್ಲಾಡಳಿತ, ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡಿದ್ದು, ಚುನಾವಣೆ ದಿನವೇ ಪ್ರತಿ ಬೂತ್‌ಗೆ ಭೇಟಿ ನೀಡಿದ್ದ ಜಿಲ್ಲಾ ಸಚಿವರ ಬಗ್ಗೆ ಮಾಹಿತಿ ನೀಡಿದರೆ ಲೊಕೇಷನ್ ಕಳಿಸುವಂತೆ ಎಸ್ಪಿ ಹೇಳಿದ್ದು, ಐಎಎಸ್-ಐಪಿಎಸ್ ಅಧಿಕಾರಿಗಳು ಯಾರ ಪರ ಕೆಲಸ ಮಾಡುತ್ತಿದ್ದಾರೆ ಎಂದು ಕ್ಷೇತ್ರದ ಎಸ್‌ಡಿಪಿಐ ಪಕ್ಷದ ಪರಾಜಿತ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಿಡಿಕಾರಿದ್ದಾರೆ.

ಮತ ಎಣಿಕೆ ಕೇಂದ್ರದ 3 ಸ್ಟ್ರಾಂಗ್ ರೂಂಗಳ ಬೀಗಗಳೇ ಕಾಣೆಯಾಗಿವೆಯೆಂಬ ಸಬೂಹು ಹೇಳಿದರು. ಇಲ್ಲಿ ದೊಡ್ಡದಾದ ಚುನವಣಾ ಅಕ್ರಮ ನಡೆದಿದೆ. ಈ ಬಗ್ಗೆ ಸ್ವತಂತ್ರ ಏಜೆನ್ಸಿ ಮೂಲಕ ತನಿಖೆಯಾಗಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದು, ತಮ್ಮ ಅಧಿಕಾರ ಬಳಸಿಕೊಂಡು ಅವ್ಯವಹಾರ ಮಾಡಿದ್ದಾರೆ ಎಂದು ಸುದ್ದಿಗೋಷ್ಟಿಯಲ್ಲಿ ಆರೋಪಿಸಿದರು.

ಚುನಾವಣಾ ಆಯೋಗದ ನಿಯಮಾನುಸಾರ ಮತ ಎಣಿಕೆ ಸಿಬ್ಬಂದಿ, ಎಲ್ಲ ಅಭ್ಯರ್ಥಿಗಳನ್ನು ಕರೆಸಿ, ತೀರ್ಮಾನ ಕೈಗೊಳ್ಳಬೇಕಾಗಿತ್ತು. ಬಾಷಾ ನಗರ, ಆಜಾದ್ ನಗರ ಎರಡು ಬೂತ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಅಂತಾ ಹೇಳಿದ್ದರು. ಸ್ಟ್ರಾಂಗ್ ರೂಂಗಳ ಬೀಗ ಯಾರ ಮನೆಯಲ್ಲಿದೆ? ಯಾರ ಜೇಬಿನಲ್ಲಿ ಬೀಗಗಳು ಇದ್ದವು? ದಕ್ಷಿಣದ ಮತ ಎಣಿಕಾ ಕೇಂದ್ರದಲ್ಲಿ ಅಧಿಕಾರ ದುರುಪಯೋಗ ಆಗಿರುವುದು ಸ್ಪಷ್ಟವಾಗಿದೆ. ಆರ್‌ಓ ಆರಂಭದ ದಿನದಿಂದಲೂ ಆಡಳಿತ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಮತ ಎಣಿಕೆ ದಿನವೇ ಚುನಾವಣಾ ಆಯೋಗಕ್ಕೆ ಇ-ಮೇಲ್‌ ಮೂಲಕ ದೂರು ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿ ಸಹ ಕೇಂದ್ರ, ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿ, ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಹಾಗಾಗಿ, ನಾವು ಆಯೋಗಕ್ಕಾಗಲೀ, ನ್ಯಾಯಾಲಯದ ಮೊರೆಯಾಗಲೀ ಹೋಗುತ್ತಿಲ್ಲ. ಒಂದುವೇಳೆ ಆಮ್ ಆದ್ಮಿ ಪಕ್ಷ, ಬಿಜೆಪಿ ಅಭ್ಯರ್ಥಿಗಳು ಈ ಬಗ್ಗೆ ಮುಂದುವರಿಯದಿದ್ದರೆ ಆಯೋಗಕ್ಕೆ ದೂರು ನೀಡುವ, ನ್ಯಾಯಾಲಯದ ಮೊರೆ ಹೋಗುವ ಕೆಲಸ ಎಸ್‌ಡಿಪಿಐ ಮಾಡಲಿದೆ ಎಂದು ಅವರು ಸ್ಪಷ್ಟಪಡಿಸಿದರು.

- - -

-6ಕೆಡಿವಿಜಿ1: ದಾವಣಗೆರೆಯಲ್ಲಿ ಬುಧವಾರ ದಕ್ಷಿಣ ಕ್ಷೇತ್ರದ ಪರಾಜಿತ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.