ಸಾರಾಂಶ
ಕೇಂದ್ರ ಸರ್ಕಾರ ಪ್ರಸ್ತುತ ವರ್ಷದ ಬಜೆಟ್‍ನಲ್ಲಿ ₹5300 ಕೋಟಿ ಮೀಸಲಿರಿಸಿ, ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರಾ ಮೇಲ್ದಂಡೆ ಯೋಜನೆ ಆಂದೋಲನಾ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ.
ಜಗಳೂರು : ಬಯಲುಸೀಮೆ ಜಿಲ್ಲೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆ ಸಮರ್ಪಕ ಜಾರಿಯಾಗಬೇಕಾದರೆ ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರ ಪ್ರಸ್ತುತ ವರ್ಷದ ಬಜೆಟ್‍ನಲ್ಲಿ ₹5300 ಕೋಟಿ ಮೀಸಲಿರಿಸಿ, ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರಾ ಮೇಲ್ದಂಡೆ ಯೋಜನೆ ಆಂದೋಲನಾ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ನಿವೃತ್ತ ಎಂಜಿನಿಯರ್ ತೋರಣಗಟ್ಟೆ ತಿಪ್ಪೇಸ್ವಾಮಿ ಮತ್ತು ನೂರಾರು ಹೋರಾಟಗಾರರು ಪ್ರಧಾನಿ ನರೇಂದ್ರ ಮೋದಿಗೆ ನಾಲ್ಕು ಪುಟಗಳ ಪತ್ರ ಬರೆದಿದ್ದಾರೆ. ಜಗಳೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮೂಲಕ ನಾಲ್ಕು ಪುಟಗಳ ಪತ್ರವನ್ನು ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೆ ಮುಟ್ಟಿಸುವಂತೆ ಪತ್ರವನ್ನು ಹಸ್ತಾಂತರಿಸಲಾಗಿದೆ ಎಂದು ಅಧ್ಯಕ್ಷರು ಪತ್ರಿಕೆಗೆ ತಿಳಿಸಿದ್ದಾರೆ.
ನೀರಾವರಿ ಯೋಜನೆ ಎಂದರೆ ಅದು ರೈತರ ಜೀವನಾಡಿಯಾಗಿರುತ್ತದೆ. ಯೋಜನೆ ಪೂರ್ಣಗೊಳ್ಳಲು ಕೇಂದ್ರದ ನಿಧಿ ಅತ್ಯಂತ ಅವಶ್ಯಕವಾಗಿದೆ. ಜಗಳುರು ರಾಜ್ಯದಲ್ಲೇ ಅತ್ಯಂತ ಹಿಂದುಳಿದ 2ನೇ ತಾಲೂಕು ಎಂದೇ ಡಾ.ನಂಜುಂಡಪ್ಪ ವರದಿಯಲ್ಲಿ ಉಲ್ಲೇಖವಾಗಿದ್ದು, ಸಮಗ್ರ ನೀರಾವರಿ ಆಗಬೇಕಾದರೆ ಕೇಂದ್ರದ ಸಹಾನುಭೂತಿಯೂ ಅತ್ಯಂತ ಅವಶ್ಯಕವಾಗಿದೆ. ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು 1969ರಲ್ಲಿ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದರು. ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆ ಬೀಳುವ ಜಗಳೂರು ತಾಲೂಕಿಗೆ ಭದ್ರೆ ಹರಿಯಬೇಕು ಎಂಬುದು 60 ವರ್ಷಗಳ ಕನಸು ಸ್ವಾಂತಂತ್ರ್ಯ ಬಂದು 78 ವರ್ಷಗಳಾದರೂ ಕನಸಾಗಿಯೇ ಉಳಿದಿದೆ.
ಬಹುಪಾಲು ಪರಿಶಿಷ್ಟ ಜಾತಿ, ಪಂಗಡಗಳ ಬುಡಕಟ್ಟು ಸಮುದಾಯದ ಜನರೇ ವಾಸವಾಗಿರುವ ಜಗಳೂರು ತಾಲೂಕಿನಲ್ಲಿ ಆರ್ಥಿಕವಾಗಿ ಹಿಂದುಳಿದ ರೈತರೇ ಹೆಚ್ಚಿದ್ದಾರೆ. ರೈತರಿಗೆ ಬಲ ತುಂಬಬೇಕಾದರೆ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ತುರ್ತು ಅಗತ್ಯವಿವೆ ಎಂದು ಒತ್ತಾಯಿಸಿದ್ದಾರೆ. ಹನಿ ನೀರಾವರಿ ಮೂಲಕ ರೈತರ ಜಮೀನುಗಳಿಗೆ ಭದ್ರೆ ಹರಿಯಬೇಕು ಎಂದರೆ ಕೇಂದ್ರದ ನೆರವೂ ಅತ್ಯಗತ್ಯ. ಪೈಪ್‍ಲೈನ್ ಕಾಮಗಾರಿ, ಕೆರೆಗಳಿಗೆ ನೀರು ಹರಿಸುವುದು ಸೇರಿದಂತೆ ಸಾಕಷ್ಟು ಕಾಮಗಾರಿಗಳಿವೆ.
ಈಗಾಗಲೇ ರಾಜ್ಯ ಸರಕಾರ ಈ ಯೋಜನೆಯನ್ನು ಪ್ರಾರಂಭಿಸಿದೆ. 16 ವರ್ಷಗಳ ಹೋರಾಟದ ಫಲವಾಗಿ ರಾಜ್ಯ ಸರಕಾರ ಇಚ್ಛಾಶಕ್ತಿ ಜಾಗೃತವಾಗಿದ್ದು, ಯೋಜನೆಗೆ ಹಣದ ಕೊರತೆಯಿಂದಾಗಿ ತ್ವರಿತವಾಗಿ ಯೋಜನೆ ಪೂರ್ಣಗೊಳ್ಳದೇ ಆಮೆಗತಿಯಲ್ಲಿ ಸಾಗುತ್ತಿದೆ. ಕೇಂದ್ರ ಬಜೆಟ್‍ನಲ್ಲಿ 5300 ಕೋಟಿ ರೂಗಳನ್ನು ಮೀಸಲಿರಿಸಿ ತಕ್ಷಣವೇ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಭದ್ರಾ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ನೀರು ಮತ್ತು ಮಾನವ ಸಂಪನ್ಮೂಲವನ್ನು ತಾಂತ್ರಿಕ ಯುಗದಲ್ಲೂ ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇದರಿಂದ ರಾಷ್ಟ್ರಕ್ಕೆ ದೊಡ್ಡ ನಷ್ಟವಾಗುತ್ತಿದೆ. ಭದ್ರಾ ಮೇಲದ್ದಂಡೆ ಯೋಜನೆ ವ್ಯಾಪ್ತಿಯ 2,25,515 ಹೆ. ನೀರಾವರಿಗಾಗಿ 29.90 ಟಿಎಂಸಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಲು ಕೇಂದ್ರದ ಅನುದಾನ ಅಗತ್ಯವಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭೆಗೆ ರಾಜ್ಯದಿಂದ ಆಯ್ಕೆಯಾಗಿದ್ದು ತಕ್ಷಣವೇ ಅವರು ಬಜೆಟ್‍ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಹಣವನ್ನು ಮೀಸಲಿರಿಸಿ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.