ಸಮನ್ವಯ ಕಾರ್ಯನಿರ್ವಹಣೆಯಿಂದ ಸಮಸ್ಯೆಗಳಿಗೆ ಪರಿಹಾರ

| Published : Jan 25 2025, 01:02 AM IST

ಸಾರಾಂಶ

ಜಿಲ್ಲಾ ನ್ಯಾಯಾಧೀಶರುಗಳೊಂದಿಗೆ ನಡೆದ ಸಂವಾದದಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ನ್ಯಾಯಾಧೀಶರುಗಳೊಂದಿಗೆ ನಡೆದ ಸಂವಾದದಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಲೋಕಾಯುಕ್ತ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಬಹುದು. ದುರಾಡಳಿತಕ್ಕೆ ಕಡಿವಾಣ ಹಾಕಬಹುದು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹೇಳಿದರು.

ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಘಟಕದ ಸಹಯೋಗದಲ್ಲಿ ಶುಕ್ರವಾರ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಲಾದ, ಸಾರ್ವಜನಿಕ ಆಡಳಿತದಲ್ಲಿ ಲೋಕಾಯುಕ್ತ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರದ ಕುರಿತು, ಜಿಲ್ಲಾ ನ್ಯಾಯಾಧೀಶರುಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.

ಕಾನೂನು ಸೇವಾ ಪ್ರಾಧಿಕಾರ ಅಸ್ತಿತ್ವಕ್ಕೆ ಬರುವ ಮುನ್ನ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾನೂನು ಸೇವಾ ಸಹಾಯ ಘಟಕ ಕಾರ್ಯನಿರ್ವಹಿಸುತಿತ್ತು. 1987ರ ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ ಮೂಲಕ ರಾಷ್ಟ್ರ , ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕಾನೂನು ಸೇವಾ ಪ್ರಾಧಿಕಾರಗಳು ರಚನೆಯಾಗಿವೆ. ಈ ಪ್ರಾಧಿಕಾರಗಳು ಬೃಹದಾಕರವಾಗಿ ಬೆಳೆದು ಸಾರ್ವಜನಿಕರಿಗೆ ಒಳಿತಾಗಿದೆ. ನ್ಯಾಯಾಂಗ ವ್ಯವಸ್ಥೆ ಬಗ್ಗೆ ಜನರು ಹಾಗೂ ಸರ್ಕಾರಕ್ಕೆ ನಂಬಿಕೆ ಇದೆ. ದೇವರು ಮಾಡಬೇಕಾದ ನ್ಯಾಯದಾನ ಕೆಲಸವನ್ನು ನ್ಯಾಯಾಧೀಶರು ಅವರ ಪ್ರತಿನಿಧಿಗಳಾಗಿ ಮಾಡುತ್ತಾರೆ ಎಂದರು.

ಸರ್ಕಾರ ಹಾಗೂ ಅಧಿಕಾರಿಗಳು ನಡೆಸುವ ದುರಾಡಳಿತವನ್ನು ನಿಯಂತ್ರಣದಲ್ಲಿ ಇರಿಸಲು ಲೋಕಾಯುಕ್ತ ಎನ್ನುವ ಸ್ವಾಯತ್ತತಾ ಸಂಸ್ಥೆಯನ್ನು ತೆರೆಯಲಾಗಿದೆ. ಸಾಕಷ್ಟು ಜನರಿಗೆ ಲೋಕಾಯುಕ್ತ ಕಾಯ್ದೆ ಹಾಗೂ ಸಂಸ್ಥೆ ಕಾರ್ಯವೈಖರಿ ಬಗ್ಗೆ ಪರಿಚಯವಿಲ್ಲ. ಲೋಕಾಯುಕ್ತ ಕಾಯ್ದೆ ಸೆಕ್ಷನ್ 8 ಹಾಗೂ 9 ಅಡಿ ಸರ್ಕಾರಿ ನೌಕರ ಭಾಗಿಯಾಗಿರದ ಪ್ರಕರಣಗಳನ್ನು ದಾಖಲಿಸಲು ಸಾಧ್ಯವಾಗುವುದಿಲ್ಲ. ಇದೇ ಮಾದರಿಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ಮುಂದೆಯೂ ಸಾರ್ವಜನಿಕರು ಹತ್ತು ಹಲವು ಸಮಸ್ಯೆಗಳ ಬಗ್ಗೆ ಅಳಲು ತೊಡಿಕೊಳ್ಳುತ್ತಾರೆ. ಇಂತಹ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ ಎರೆಡು ಸಂಸ್ಥೆಗಳು ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕು. ಇದರ ಅಂಗವಾಗಿಯೇ ಲೋಕಾಯುಕ್ತದಿಂದ ಚಿತ್ರದುರ್ಗ ಸೇರಿ ಒಟ್ಟು 19 ಜಿಲ್ಲೆಗಳ ಕಾನೂನು ಸೇವಾ ಪ್ರಾಧಿಕಾರಗಳೊಂದಿಗೆ ಸಂವಾದ ನಡೆಸಲಾಗಿದೆ ಎಂದು ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ತಿಳಿಸಿದರು.

ಸಾಕಷ್ಟು ಸಂದರ್ಭದಲ್ಲಿ ಪ್ರಕರಣ ದಾಖಲಾಗುವ ಮುನ್ನವೇ ಸಾರ್ವಜನಿರ ತೊಂದರೆಗಳನ್ನು ಪರಿಹರಿಸಬಹುದು. ನ್ಯಾಯಾಧೀಶರು ವಿಷಯವನ್ನು ಗಮನಿಸುತ್ತಾರೆ ಎಂದರೆ, ಸರ್ಕಾರಿ ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುತ್ತಾರೆ. ಕಾನೂನು ಸೇವಾ ಪ್ರಾಧಿಕಾರದ ಮುಂದೆ, ಲೋಕಾಯುಕ್ತಕ್ಕೆ ಸಲ್ಲಿಕೆಯಾಗಬಹುದಾದ ಪ್ರಕರಣಗಳು ಇದ್ದರೆ, ಅವುಗಳನ್ನು ಶಿಫಾರಸ್ಸು ಮಾಡಬಹುದು ಎಂದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ್, ಲೋಕಾಯುಕ್ತದ ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೇಕರ್ ಹಾಗೂ ಜಿ.ವಿ ವಿಜಯಾನಂದ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶ ಕಿರಣ್ ಪಿ.ಎಂ ಪಾಟೀಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಎಂ.ವಿಜಯ್ ಉಪಸ್ಥಿತರಿದ್ದರು.