ಸಾರಾಂಶ
ರಿಯಾಜಅಹ್ಮದ ಎಂ. ದೊಡ್ಡಮನಿ ಡಂಬಳ
ಡಂಬಳ ಹೋಬಳಿಯ ಕದಾಂಪುರ ಗ್ರಾಮದಲ್ಲಿ ಶಂಕಿತ ಡೆಂಘಿ ಜ್ವರದಿಂದ ಭದ್ರಾಕ್ಷಿ ಮೃತ್ಯುಂಜಯ ಹಿರೇಮಠ ಎಂಬ ಮಗು ಸಾವಿಗೀಡಾಗಿದ್ದು, ಸೊಳ್ಳೆಗಳ ಕಾಟಕ್ಕೆ ಹೈರಾಣಾಗಿರುವ ಜನತೆಗೆ ಸಾಂಕ್ರಾಮಿಕ ರೋಗಗಳ ಭಯ ಕಾಡಲಾರಂಭಿಸಿದೆ.ಸೊಳ್ಳೆಗಳ ಕಾಟ ಹೆಚ್ಚಿದೆ. ಸೊಳ್ಳೆ ನಿಯಂತ್ರಣಕ್ಕೆ ಗ್ರಾಪಂ ಮಟ್ಟದಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಗ್ರಾಮಗಳಲ್ಲಿ ಫಾಗಿಂಗ್ ಮಾಡಿ ಸೊಳ್ಳೆ ನಿಯಂತ್ರಣ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಲ್ಲದೆ ಡಂಬಳ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಚರಂಡಿ ಮಲಿನ ನೀರು ನಿಂತು ಸೊಳ್ಳೆಗಳ ಆಶ್ರಯ ತಾಣವಾಗಿದೆ. ಹೀಗೆ ಆಯಾ ಗ್ರಾಪಂಗಳಲ್ಲಿ ಸ್ವಚ್ಛತಾ ಕಾರ್ಯ ಚುರುಕಾಗಲಿ ಎಂದು ಸರ್ಕಾರ ಸಾವಿರಾರು ಕೋಟಿ ಹಣ ವ್ಯಯಿಸಿ ಸ್ವಚ್ಛತಾ ವಾಹನ ನೀಡಿದ್ದರೂ ಬಳಕೆಯಾಗುತ್ತಿಲ್ಲ. ಕೆಲವು ಗ್ರಾಪಂಗಳಲ್ಲಿ ಸರಿಯಾಗಿ ನಿರ್ವಹಣೆ ಇಲ್ಲದೆ ದುರವಸ್ಥೆ ತಲುಪಿದೆ.
ಕದಾಂಪುರ, ಡೋಣಿ, ಶಿವಾಜಿನಗರ, ಚುರ್ಚಿಹಾಳ, ಚಿಕ್ಕವಡ್ಡಟ್ಟಿ, ಮೇವುಂಡಿ, ಬರದೂರ, ಯಕ್ಲಾಸಪುರ, ಮುರಡಿ ತಾಂಡಾ, ವೆಂಕಟಾಪುರ, ಜಂತ್ಲಿ ಶಿರೂರ ಸೇರಿದಂತೆ ಡಂಬಳ ಹೋಬಳಿಯ 25 ಗ್ರಾಮಗಳಲ್ಲಿ ಹಲವಾರು ಬಡಾವಣೆಗಳಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಸಂಜೆಯಾದರೆ ಸಾಕು ಸೊಳ್ಳೆ ಝೇಂಕಾರ ಶುರುವಾಗುತ್ತದೆ. ಹೀಗಾಗಿ ಅನೇಕರು ಸಂಜೆ ಆಗುತ್ತಿದ್ದಂತೆ ಮನೆ ಕಿಟಕಿ ಬಾಗಿಲು ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಸಂಜೆಯಿಂದಲೇ ಸೊಳ್ಳೆ ಕ್ವಾಯಿಲ್, ಮಾಸ್ಕಿಟೋ ಮ್ಯಾಟ್ ಮೊದಲಾದವುಗಳನ್ನು ಉರಿಸುವ ಅನಿವಾರ್ಯತೆ ಇದೆ. ಹೀಗಾಗಿ ಕೂಡಲೇ ಡಂಬಳ ಹೋಬಳಿಯ ಗ್ರಾಪಂಗಳಲ್ಲಿ ಫಾಂಗಿಂಗ್ ಮತ್ತು ಸ್ವಚ್ಛತಾ ಕಾರ್ಯ ಆರಂಭಿಸಿ ಮಲಿನ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕಾಗಿರುವುದಕ್ಕೆ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಗ್ರಾಪಂ ಅಧಿಕಾರಿಗಳು ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಸೊಳ್ಳೆ ಕಾಟ ಅಧಿಕವಾದರೂ ಗ್ರಾಪಂ ಅಧಿಕಾರಿಗಳು ಮಾತ್ರ ಫಾಗಿಂಗ್ ಕಾರ್ಯಕ್ಕೆ ಹಸಿರು ನಿಶಾನೆ ತೋರುತ್ತಿಲ್ಲ. ದಿನಕ್ಕೆ ಒಂದು ಬಾರಿಯಾದರೂ ಸಂಜೆಯ ಸಮಯದಲ್ಲಿ ಫಾಗಿಂಗ್ ಮಾಡಿದರೆ ಒಂದಿಷ್ಟು ಸೊಳ್ಳೆ ಹಾವಳಿ ನಿಯಂತ್ರಣವಾಗಲಿದೆ. ಒಂದು ಬಾರಿಯೂ ಫಾಗಿಂಗ್ ಮಾಡದೇ ಇರುವುದರಿಂದ ಸೊಳ್ಳೆ ಕಾಟ ಈ ಹಿಂದೆಂಗಿಂತಲೂ ಅಧಿಕವಾಗುತ್ತದೆ. ಕದಾಂಪುರ ಗ್ರಾಮದಲ್ಲಿ ಹೆಣ್ಣು ಮಗು ಡೆಂಘೀ ಜ್ವರಕ್ಕೆ ತುತ್ತಾಗಿದೆ. ಗ್ರಾಮದಲ್ಲಿ ತ್ಯಾಜ್ಯ ಸಂಗ್ರಹಿಸುವ ಗಾಡಿಗಳು ಸೂಕ್ತ ಬಳಕೆಯಾಗಬೇಕು ಎಂದು ಕದಾಂಪುರ ಗ್ರಾಮಸ್ಥರಾದ ಶಿವು ಬಿಡನಾಳ, ಶರಣಪ್ಪ ಸಿರಿಗೇರಿ ಹೇಳಿದರು.