ನೀರಿಗಾಗಿ ಆನಂದ್‌ ಸಿಂಗ್‌, ಶಾಸಕರ ಜಟಾಪಟಿ

| Published : May 27 2024, 01:03 AM IST

ಸಾರಾಂಶ

ಶಾಸಕ ಗವಿಯಪ್ಪ ಪಟ್ಟು ಸಡಿಲಿಸದಿದ್ದಾಗ ಸಿಟ್ಟಾದ ಆನಂದ ಸಿಂಗ್ ತಮ್ಮ ಬೆಂಬಲಿಗರೊಂದಿಗೆ ರಸ್ತೆಯಲ್ಲಿ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.

ಹೊಸಪೇಟೆ: ನಗರ ಸೇರಿದಂತೆ ತಾಲೂಕಿನ ಗ್ರಾಮಗಳಿಗೆ ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಸರಬರಾಜು ಮಾಡುತ್ತಿದ್ದ ಖಾಸಗಿ ಟ್ಯಾಂಕರ್‌ಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸುವಂತೆ ಶಾಸಕ ಎಚ್.ಆರ್. ಗವಿಯಪ್ಪ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿರುವ ಕ್ರಮವನ್ನು ಖಂಡಿಸಿ ಮಾಜಿ ಸಚಿವ ಆನಂದ ಸಿಂಗ್ ನಡು ರಸ್ತೆಯಲ್ಲಿ ಧರಣಿ ಕುಳಿತ ಘಟನೆ ಭಾನುವಾರ ನಡೆಯಿತು.

ಈ ವೇಳೆ ಶಾಸಕ ಗವಿಯಪ್ಪ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಮಾಜಿ ಸಚಿವ ಆನಂದ ಸಿಂಗ್, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ನಾಗರಿಕರ ನೀರಿನ ಸಮಸ್ಯೆ ನಿವಾರಣೆಗಾಗಿ ಕಳೆದ ೨೦೦೪ರಿಂದಲೂ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಇದಕ್ಕೆ ತಾವು ಪೌರಾಯುಕ್ತರಿಗೆ ನೀರು ಪೂರೈಕೆಗೆ ಅವಕಾಶ ನೀಡಬಾರದೆಂದು ಸೂಚನೆ ನೀಡಿರುವುದು ಸರಿಯಾದ ಕ್ರಮವಲ್ಲ. ಟ್ಯಾಂಕರ್‌ಗಳಿಗೆ ನೀರು ಪೂರೈಕೆಗೆ ಅನುವು ಮಾಡಿಕೊಡಿ ಎಂದು ಮನವಿ ಮಾಡಿದರು.

ಶಾಸಕ ಗವಿಯಪ್ಪ ಪಟ್ಟು ಸಡಿಲಿಸದಿದ್ದಾಗ ಸಿಟ್ಟಾದ ಆನಂದ ಸಿಂಗ್ ತಮ್ಮ ಬೆಂಬಲಿಗರೊಂದಿಗೆ ರಸ್ತೆಯಲ್ಲಿ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳದಲ್ಲಿದ್ದ ಪೌರಾಯುಕ್ತ ಚಂದ್ರಪ್ಪ ಅವರನ್ನು ಆನಂದ ಸಿಂಗ್ ಮತ್ತು ನಗರಸಭೆ ಅಧ್ಯಕ್ಷರು ಸೇರಿದಂತೆ ಕೆಲ ಸದಸ್ಯರು ತರಾಟೆಗೆ ತೆಗೆದುಕೊಂಡರು. ನಗರಸಭೆ ಆಡಳಿತದೊಂದಿಗೆ ಶಾಸಕರು ಹಸ್ತಕ್ಷೇಪ ಮಾಡುವಂತಿಲ್ಲ. ನೀರು ಪೂರೈಕೆ ಮಾಡುವುದು, ಬಿಡುವುದು ನಗರಸಭೆಗೆ ಆಡಳಿತ ಮಂಡಳಿಗೆ ಸೇರಿದೆ. ಶಾಸಕರ ಮಾತು ಕೇಳಿ ಟ್ಯಾಂಕರ್‌ಗೆ ನೀರು ಪೂರೈಕೆಗೆ ಅವಕಾಶ ನೀಡದಿರುವುದು ಸರಿಯಲ್ಲ ಎಂದು ಪೌರಾಯುಕ್ತರ ವಿರುದ್ಧ ಆಕ್ರೋಶ ಹೊರ ಹಾಕಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪೌರಾಯುಕ್ತರು, ಕೆಲವು ಖಾಸಗಿ ಟ್ಯಾಂಕರ್‌ಗಳು ನೀರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ನೀರನ್ನು ಟ್ಯಾಂಕರ್‌ಗಳಿಗೆ ಪೂರೈಕೆ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಈ ವಿಚಾರವಾಗಿ ಸೋಮವಾರ ತುರ್ತು ಸಭೆ ಕರೆದು, ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಎ. ಲತಾ, ಸದಸ್ಯರಾದ ಜೀವರತ್ನಂ, ತಾರಿಹಳ್ಳಿ ಜಂಬುನಾಥ, ಹನುಮಂತ (ಬುಜ್ಜಿ), ವಿ. ಗಾಳೆಪ್ಪ, ಕೆ. ಗೌಸ್, ಎಲ್.ಎಸ್. ಆನಂದ್, ಗುಡಗುಂಟಿ ಮಲ್ಲಿಕಾರ್ಜುನ, ಮುಖಂಡರಾದ ಸಂದೀಪ್ ಸಿಂಗ್, ಬಿ.ಎಸ್. ಜಂಬಯ್ಯ ನಾಯಕ, ಕಣ್ಣಿ ಶ್ರೀಕಂಠ. ಎಂ.ಸಿ. ವೀರಸ್ವಾಮಿ, ಜಗನ್ ಇದ್ದರು.

ನಗರಸಭೆಯಲ್ಲಿ ಬಿಜೆಪಿ ಬಲ: ನಗರಸಭೆ ಒಟ್ಟು ೩೫ ಸ್ಥಾನಗಳ ಪೈಕಿ ಬಿಜೆಪಿಗೆ ೨೦ ಸದಸ್ಯರ ಬಲವಿದ್ದರೆ, ಕಾಂಗ್ರೆಸ್‌ಗೆ ೧೫ ಸದಸ್ಯರ ಬಲವಿದೆ. ಆದರೆ, ಬಹುತೇಕ ಸದಸ್ಯರು ಟ್ಯಾಂಕರ್ ನೀರು ಪೂರೈಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಸದಸ್ಯರೊಬ್ಬರು ತಿಳಿಸಿದ್ದಾರೆ.

ತುರ್ತು ಸಭೆ: ಹೊಸಪೇಟೆ ನಗರದ ೧ ಹಂತದ ಶುದ್ಧ ನೀರಿನ ಘಟಕದಿಂದ ಸಾರ್ವಜನಿಕರಿಗೆ ಖಾಸಗಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸುವ ಬಗ್ಗೆ ನಗರಸಭೆ ಸಭಾಂಗಣದಲ್ಲಿ ಮೇ ೨೭ರಂದು ಮಧ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದೆ ಎಂದು ಪೌರಾಯುಕ್ತ ಚಂದಪ್ಪ ತಿಳಿಸಿದ್ದಾರೆ.