ಚುನಾವಣೆ ಸ್ವಾರಸ್ಯ : ಎಸ್‌.ಬಂಗಾರಪ್ಪ 4 ಬಾರಿ ಜಯ; ಪ್ರತಿ ಬಾರಿಯೂ ಚಿಹ್ನೆ ಬದಲು!

| Published : Apr 01 2024, 12:50 AM IST

ಚುನಾವಣೆ ಸ್ವಾರಸ್ಯ : ಎಸ್‌.ಬಂಗಾರಪ್ಪ 4 ಬಾರಿ ಜಯ; ಪ್ರತಿ ಬಾರಿಯೂ ಚಿಹ್ನೆ ಬದಲು!
Share this Article
  • FB
  • TW
  • Linkdin
  • Email

ಸಾರಾಂಶ

ಬಂಗಾರಪ್ಪನವರು ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು, 1996ರಲ್ಲಿ. ಆಗ ಅವರು ತಮ್ಮ ಸ್ವಂತ ಪಕ್ಷವಾದ ಕೆಸಿಪಿಯಿಂದ ಸ್ಪರ್ಧಿಸಿದ್ದರು. 1991ರಲ್ಲಿ ಬಂಗಾರಪ್ಪ ಅವರೇ ರಾಜಕೀಯಕ್ಕೆ ಕರೆತಂದು ತಮ್ಮ ವರ್ಚಸ್ಸಿನ ಅಡಿಯಲ್ಲಿ ಗೆಲ್ಲಿಸಿದ ಅವರ ಷಡ್ಡುಗ ಕೆ.ಜಿ.ಶಿವಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆಗ ಬಂಗಾರಪ್ಪ ಗೆಲುವು ಸಾಧಿಸಿದರು.

ಗೋಪಾಲ್ ಯಡಗೆರೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ಅತ್ಯಧಿಕ ಬಾರಿ ಗೆದ್ದವರು ಎಸ್. ಬಂಗಾರಪ್ಪ. ಅವರು ನಾಲ್ಕು ಬಾರಿ ಗೆದ್ದಿದ್ದಲ್ಲದೆ, ಪ್ರತಿ ಬಾರಿಯೂ ಬೇರೆ ಚಿಹ್ನೆಯಲ್ಲಿಯೇ ಗೆದ್ದಿದ್ದರು ಎಂಬುದು ಕೂಡ ವಿಶೇಷ!

ಬಂಗಾರಪ್ಪನವರು ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು, 1996ರಲ್ಲಿ. ಆಗ ಅವರು ತಮ್ಮ ಸ್ವಂತ ಪಕ್ಷವಾದ ಕೆಸಿಪಿಯಿಂದ ಸ್ಪರ್ಧಿಸಿದ್ದರು. 1991ರಲ್ಲಿ ಬಂಗಾರಪ್ಪ ಅವರೇ ರಾಜಕೀಯಕ್ಕೆ ಕರೆತಂದು ತಮ್ಮ ವರ್ಚಸ್ಸಿನ ಅಡಿಯಲ್ಲಿ ಗೆಲ್ಲಿಸಿದ ಅವರ ಷಡ್ಡುಗ ಕೆ.ಜಿ.ಶಿವಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆಗ ಬಂಗಾರಪ್ಪ ಗೆಲುವು ಸಾಧಿಸಿದರು. ಬಳಿಕ 1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. 2004ರಲ್ಲಿ ಬಿಜೆಪಿಯಿಂದ ಮತ್ತು 2005ರಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಸೋಲಿಲ್ಲದ ಸರದಾರನಾಗಿ ಹೊರ ಹೊಮ್ಮಿದ್ದ ಎಸ್. ಬಂಗಾರಪ್ಪ 1998ರಲ್ಲಿ ಮೊದಲ ಬಾರಿಗೆ ಆಯನೂರು ಮಂಜುನಾಥ್‌ ಎದುರು ಸೋತಿದ್ದರು.1996ರಿಂದ 2005ರವರೆಗೆ ನಡೆದ ಎಲ್ಲ ಐದು ಚುನಾವಣೆಯಲ್ಲಿ ಬಂಗಾರಪ್ಪ ಮತ್ತು ಆಯನೂರು ಮಂಜುನಾಥ್ ಮುಖಾಮುಖಿಯಾಗಿದ್ದರು. ಆಯನೂರು ಒಮ್ಮೆ ಮಾತ್ರ ಗೆಲುವು ಸಾಧಿಸಿದ್ದರು.

ಈ ಬಾರಿ ರಾಘವೇಂದ್ರ ಗೆದ್ದರೆ ಲೆಕ್ಕಾಚಾರ ಬದಲು:

ಹಾಲಿ ಶಾಸಕ ಬಿ. ವೈ.ರಾಘವೇಂದ್ರ ಇದುವರೆಗೆ ಮೂರು ಬಾರಿ ಗೆಲುವು ಸಾಧಿಸಿದ್ದು, ಈ ಬಾರಿ ಗೆಲುವು ಸಾಧಿಸಿದರೆ ಅದು ಬಂಗಾರಪ್ಪ ಸಾಧನೆ ಎದುರು ಸಮವಾಗುತ್ತದೆ. ನಿರಂತರ ಜಯ ಎಂಬ ಅಂಕಿ ಅಂಶದಲ್ಲಿ ಮೊದಲ ಸ್ಥಾನಕ್ಕೆ ಬರುತ್ತಾರೆ. ಬಂಗಾರಪ್ಪ ಅವರಿಗೆ ನಿರಂತರ ನಾಲ್ಕು ಜಯ ಸಾಧಿಸಲು ಸಾಧ್ಯವಾಗಿರಲಿಲ್ಲ. ಆದರೆ ಅವರ ಭಾರೀ ಸಾಧನೆ ಎಂದರೆ ಪ್ರತಿ ಬಾರಿಯ ಚುನಾವಣೆಯಲ್ಲಿಯೂ ಬೇರೆ ಬೇರೆ ಚಿಹ್ನೆಯಡಿ ಗೆಲುವು ಸಾಧಿಸಿದ್ದು.-