ಜನಾಕರ್ಷಣೆಯೊಂದಿಗೆ ಬಾಳೆ ಮೇಳಕ್ಕೆ ತೆರೆ

| Published : Nov 25 2024, 01:03 AM IST

ಜನಾಕರ್ಷಣೆಯೊಂದಿಗೆ ಬಾಳೆ ಮೇಳಕ್ಕೆ ತೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಯ ಮೌಲ್ಯವರ್ಧಿತ ಉತ್ಪನ್ನಗಳಾದ ಚಿಪ್ಸ್‍, ಪಾಯಸ, ರಸಾಯನ, ಹೋಳಿಗೆ, ದೋಸೆ, ಭಜಿ, ಪಕೋಡಾ, ಬೋಂಡಾಗಳನ್ನು ಜನರು ಸವಿದರು

ಕನ್ನಡಪ್ರಭ ವಾರ್ತೆ ಮೈಸೂರು

ಸಹಜ ಸಮೃದ್ಧ ಹಾಗೂ ಅಕ್ಷಯಕಲ್ಪ ಆರ್ಗ್ಯಾನಿಕ್ ಸಹಯೋಗದಲ್ಲಿ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿದ್ದ 3 ದಿನಗಳ ಬಾಳೆ ಮೇಳವು ಭಾನುವಾರ ಜನಾಕರ್ಷಣೆಯೊಂದಿಗೆ ಅಂತ್ಯವಾಯಿತು.

ವೈವಿಧ್ಯಮಯ ಬಾಳೆ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ನಗರದ ಜನರು ಉತ್ಸಾಹದಿಂದ ಪಾಲ್ಗೊಂಡು, ವಿವಿಧ ತಳಿಗಳ ಬಾಳೆಹಣ್ಣು ವೀಕ್ಷಿಸಿ, ಖರೀದಿಸಿದರು. ಚಂದ್ರ, ಮದರಂಗಿ, ಯಾಲಕ್ಕಿ, ನಂಜನಗೂಡು ರಸಬಾಳೆ, ಬೂದುಬಾಳೆ, ಸ್ಟೆಪ್ ಬನಾನಾ, ಸಹಸ್ರ ಬಾಳೆ, ಕರಿಬಾಳೆ ಸೇರಿದಂತೆ ಹಲವಾರು ತಳಿ ಬಾಳೆಗಳನ್ನು ಖರೀದಿಸಿ ಸವಿದ ಜನರು, ಅವುಗಳ ಕಂದುಗಳನ್ನು ಸಹ ಖರೀದಿಸಿದರು.

ಬಾಳೆಯ ಮೌಲ್ಯವರ್ಧಿತ ಉತ್ಪನ್ನಗಳಾದ ಚಿಪ್ಸ್‍, ಪಾಯಸ, ರಸಾಯನ, ಹೋಳಿಗೆ, ದೋಸೆ, ಭಜಿ, ಪಕೋಡಾ, ಬೋಂಡಾಗಳನ್ನು ಜನರು ಸವಿದರು. ಬಾಳೆ ದಿಂಡಿನ ಪಲ್ಯ, ಚಟ್ನಿ, ಜ್ಯೂಸ್ ಸಹ ಬೇಡಿಕೆ ಕಂಡಿತು.

500 ತಳಿ ಬಾಳೆ ಸಂರಕ್ಷಿಣೆ ಮಾಡಿರುವ ಕೇರಳದ ವಿನೋದ್ ಅವರು, ವಿವಿಧ ಬಾಳೆಹಣ್ಣು ಬಳಸಿ ತಯಾರಿಸಿದ ರಸಾಯನ ಹೆಚ್ಚು ಜನರನ್ನು ಸೆಳೆಯಿತು. ಸಿರಿಧಾನ್ಯ, ದೇಸಿ ಅಕ್ಕಿ, ಸಾವಯವ ಉತ್ಪನ್ನಗಳು, ಕರಕುಶಲ ಕಲಾಕೃತಿ ಹಾಗೂ ತರಹೇವಾರಿ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ಭರದಿಂದ ನಡೆಯಿತು.

ವಿವಿಧ ಸ್ಪರ್ಧೆ ವಿಜೇತರು

ಬಾಳೆ ಮೇಳ ಅಂಗವಾಗಿ ವಿದ್ಯಾರ್ಥಿಗಳಿಗೆ ಚಿತ್ರ ಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ನಾ ಕಂಡಂತೆ ಬಾಳೆ ಕುರಿತು ಒಟ್ಟು 44 ಮಕ್ಕಳು ಚಿತ್ರ ರಚಿಸಿದರು. ಮಲ್ಲಿಕಾರ್ಜುನ ಹೊಸಪಾಳ್ಯ ಮತ್ತು ಕೆ.ಎನ್. ಸಚಿನ್ ತೀರ್ಪುಗಾರರಾಗಿದ್ದರು.

1 ರಿಂದ 4ನೇ ತರಗತಿಯ ಮಕ್ಕಳ ವಿಭಾಗದಲ್ಲಿ ಎಸ್.ಕೆ. ರಿಷಿಕಾ ನಂದಿ (ಪ್ರಥಮ), ಬಿ. ಇಶಾನ್ (ದ್ವಿತೀಯ), ಎಸ್. ಮೌಲ್ಯ (ತೃತೀಯ), ತನಿಷ್ ಮತ್ತು ಆದ್ಯ (ಪ್ರೋತ್ಸಾಹಕರ) ಬಹುಮಾನ ಪಡೆದರು.

5 ರಿಂದ 7ನೇ ತರಗತಿಯ ವಿಭಾಗದಲ್ಲಿ ಎಂ. ಚಾರುಮಿತ್ರ (ಪ್ರಥಮ), ಎಚ್.ಎಸ್. ಭಾವನಾ (ದ್ವಿತೀಯ), ವಿ. ರಶ್ವಿ (ತೃತೀಯ), ಉಲ್ಲಾಸ ಹಾಗೂ ಸಿರೀಷ ಉಡುಪ (ಪ್ರೋತ್ಸಾಹಕರ) ಬಹುಮಾನ ಪಡೆದರು.

ಇನ್ನೂ ಬಾಳೆ ಬಳಸಿ ಮಾಡಲಾದ ಅಡುಗೆಗಳ ಸ್ಪರ್ಧೆಯಲ್ಲಿ ನಾಗಮ್ಮ ಎಚ್.ಡಿ. ಕೋಟೆ (ಪ್ರಥಮ), ನವೀನಾಬಾಯಿ (ದ್ವಿತೀಯ) ಮತ್ತು ಮನೋನ್ಮಣಿ (ತೃತೀಯ) ಬಹುಮಾನ ಪಡೆದರು. ತೀರ್ಪುಗಾರರಾಗಿ ಡಾ. ನೇತ್ರಾವತಿ, ಡಾ.ಎಚ್.ಡಿ. ದಿವ್ಯಾ ಮತ್ತು ದೀಪಕ್ ಪಾಲ್ಗೊಂಡಿದ್ದರು.

ಸಹಜ ಸಮೃದ್ಧ ನಿರ್ದೇಶಕ ಜಿ.ಕೃಷ್ಣಪ್ರಸಾದ್, ಕೃಷಿ ಕಲಾದ ಸೀಮಾ ಪ್ರಸಾದ್, ಪತ್ರಕರ್ತ ಆನಂದತೀರ್ಥ ಪ್ಯಾಟಿ ಇದ್ದರು. ಕೋಮಲ್ ಕುಮಾರ್ ಸ್ವಾಗತಿಸಿದರು. ಸಿ. ಶಾಂತಕುಮಾರ್ ನಿರೂಪಿಸಿದರು.